ಉ.ಪ್ರ.: ಧಾರ್ಮಿಕ ಸ್ಥಳಗಳಿಂದ 11 ಸಾವಿರ ಲೌಡ್‌ ಸ್ಪೀಕರ್‌ ಗಳ ತೆರವು

Update: 2022-04-28 15:10 GMT

ಲಕ್ನೋ,ಮಾ.28: ಉತ್ತರಪ್ರದೇಶ ಸರಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಬುಧವಾರ ಸಂಜೆಯವರೆಗೆ ರಾಜ್ಯದ ವಿವಿಧ ಧಾರ್ಮಿಕ ಸ್ಥಳಗಳಿಂದ ಸುಮಾರು 11 ಸಾವಿರ ಧ್ವನಿವರ್ಧಕ (ಲೌಡ್‌ ಸ್ಪೀಕರ್‌)ಗಳನ್ನು ತೆಗೆದುಹಾಕಲಾಗಿದೆ.

  
ಸರಕಾರವು ಬಿಡುಗಡೆಗೊಳಿಸಿದ ದತ್ತಾಂಶದ ಪ್ರಕಾರ, ರಾಜ್ಯದ ವಿವಿಧ ಧಾರ್ಮಿಕ ಸ್ಥಳಗಳಿಂದ ಒಟ್ಟು 10,923 ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ ಹಾಗೂ ಇತರ 35,221 ಧ್ವನಿವರ್ಧಕಗಳ ಧ್ವನಿಮಟ್ಟ (ವ್ಯಾಲ್ಯೂಮ್)ವನ್ನು ನಿಗದಿತ ಮಾನದಂಡಕ್ಕನುಸಾರವಾಗಿ ಕಡಿಮೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
   
ಆಗ್ರಾ, ಮೀರತ್, ಬರೇಲಿ, ಲಕ್ನೋ, ಕಾನ್ಪುರ, ಪ್ರಯಾಗ್ರಾಜ್, ಗೋರಖ್ಪುರ, ವಾರಣಾಸಿ ಹಾಗೂ ಲಕ್ನೋ, ಕಾನ್ಪುರ,ಗೌತಮ್ ಬುದ್ಧನಗರ, ವಾರಣಾಸಿ ಸೇರಿದಂತೆ ನಾಲ್ಕು ಕಮೀಶನರೇಟ್ಗಳು ಸೇರಿದಂತೆ ರಾಜ್ಯದ ಎಂಟು ವಲಯಗಳಲ್ಲಿ ಅನಧಿಕೃತ ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ ಎಂದು ಉತ್ತರಪ್ರದೇಶ ಗೃಹ ಸಚಿವಾಲಯ ತಿಳಿಸಿದೆ.
 
ಉತ್ತರಪ್ರದೇಶ ಗೃಹ ಸಚಿವಾಲಯವು ಲಕ್ನೋ ವಲಯದ ಧಾರ್ಮಿಕಸ್ಥಳಗಳಿಂದ ಗರಿಷ್ಠ ಸಂಖ್ಯೆಯ ಅಂದರೆ 2,395 ಧ್ವನಿವರ್ಧಕಗನ್ನು ತೆರವುಗೊಳಿಸಿದೆ ಹಾಗೂ 7,397 ಧ್ವನಿವರ್ಧಕಗಳ ಧ್ವನಿಮಟ್ಟವನ್ನು ಕಡಿಮೆಗೊಳಿಸಲಾಗಿದೆ.ಗೋರಖ್ಪುರ ಹಾಗೂ ವಾರಣಾಸಿ ವಲಯಗಳು ಆನಂತರದ ಸ್ಥಾನಗಳಲ್ಲಿವೆ.
   
ಅನಧಿಕೃತವಾದ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಅನುಮತಿಸಲ್ಪಟ್ಟ ಶಬ್ಧದ ಮಿತಿಯನ್ನು ಉಲ್ಲಂಘಿಸುತ್ತಿರುವ ಧ್ವನಿವರ್ಧಕಗಳನ್ನು ತೆರವುಗೊಳಿಸುವಂತೆ ಉತ್ತರಪ್ರದೇಶದ ಗೃಹ ಸಚಿವಾಲಯವು ರಾಜ್ಯ ಪೊಲೀಸರಿಗೆ ಸೂಚಿಸಿತ್ತು.

ಧಾರ್ಮಿಕ ಸ್ಥಳಗಳಲ್ಲಿರುವ ಧ್ವನಿವರ್ಧಕಗಳನ್ನು ಗಟ್ಟಿ ಧ್ವನಿಯಲ್ಲಿ ನುಡಿಸಕೂಡದು ಹಾಗೂ ಅದರ ಸದ್ದು ಆವರಣದೊಳಗಷ್ಟೇ ಸೀಮಿತವಾಗಿರಬೇಕು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ಎಪ್ರಿಲ್ 21ರಂದು ಆದೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News