×
Ad

ಮುಸ್ಲಿಮರ ವಿರುದ್ಧ ಹಿಂಸಾಚಾರ ಕಂಡು ಜಿಗುಪ್ಸೆಯಾಗುತ್ತಿದೆ: ಅಂತಾರಾಷ್ಟ್ರೀಯ ಮಾಡೆಲ್ ಪದ್ಮಲಕ್ಷ್ಮಿ ಕಳವಳ‌

Update: 2022-04-28 15:01 IST
Photo: facebook.com/padmalakshmi

ಮುಂಬೈ.ಎ.28: ಭಾರತದಲ್ಲಾಗಲಿ ಅಥವಾ ಜಗತ್ತಿನ ಉಳಿದ ಕಡೆಗಳಲ್ಲಾಗಲಿ ಹಿಂದೂ ಧರ್ಮಕ್ಕೆ ಯಾವುದೇ ಬೆದರಿಕೆ ಎದುರಾಗಿಲ್ಲವೆಂದು ಭಾರತ-ಅಮೆರಿಕನ್ ರೂಪದರ್ಶಿ ಪದ್ಮಲಕ್ಷ್ಮಿ ಬುಧವಾರ ತಿಳಿಸಿದ್ದಾರೆ. ಈ ಪುರಾತನ ಹಾಗೂ ವಿಶಾಲವಾದ ನೆಲದಲ್ಲಿ ಎಲ್ಲಾ ಧರ್ಮಗಳ ಜನರು ಶಾಂತಿಯುತವಾಗಿ ಬಾಳಲು ಶಕ್ತರಾಗಬೇಕೆಂದು ಅವರು ಕರೆ ನೀಡಿದ್ದಾರೆ. ಭಾರತದಲ್ಲಿ ಮುಸ್ಲಿಂ ವಿರೋಧಿ ವಾಕ್ ಪ್ರಹಾರವು ವ್ಯಾಪಕವಾಗಿದೆಯೆಂದು ಆತಂಕ ವ್ಯಕ್ತಪಡಿಸಿ 51 ವರ್ಷದ ಪದ್ಮಲಕ್ಷ್ಮಿ ಅವರು ಟ್ವೀಟ್ ಮಾಡಿದ್ದಾರೆ. ಭೀತಿಯನ್ನು ಹರಡುವ ಹಾಗೂ ಅಪಪ್ರಚಾರದ ಮಾತುಗಳಿಗೆ ಹಿಂದೂಗಳು ಬಲಿಯಾಗಬಾರದೆಂದು ಅವರು ಕರೆ ನೀಡಿದ್ದಾರೆ.ಹನುಮಾನ್ ಜಯಂತಿಯ ಸಂದರ್ಭದಲ್ಲಿ ದಿಲ್ಲಿಯ ಜಹಾಂಗೀರ್ಪುರಿ ಪ್ರದೇಶ ಹಾಗೂ ಮಧ್ಯಪ್ರದೇಶದ ಖಾರ್ಗೋನ್ ನಗರದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಗಳ ಬಗ್ಗೆ ದಿ ಗಾರ್ಡಿಯನ್ ಹಾಗೂ ಲಾಸ್ ಏಂಜಲೀಸ್ ಟೈಮ್ಸ್‌ನಂತಹ  ಅಂತಾರಾಷ್ಟ್ರೀಯ ಪತ್ರಿಕೆಗಳು ಪ್ರಕಟಿಸಿರುವ ಸುದ್ದಿಗಳನ್ನು ಕೂಡಾ ಅವರು ಟ್ವೀಟ್ ಜೊತೆ ಲಗತ್ತಿಸಿದ್ದಾರೆ.‘ ನೈಜ ಆಧ್ಯಾತ್ಮಿಕತೆ’ಯಲ್ಲಿ ದ್ವೇಷಕ್ಕೆ ಯಾವುದೇ ಸ್ಥಾನವಿಲ್ಲವೆಂದವರು ಹೇಳಿದ್ದಾರೆ.

    ‘‘ಭಾರತದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರವನ್ನು ಸಂಭ್ರಮಿಸುತ್ತಿರುವುದನ್ನು ಕಂಡು ಜಿಗುಪ್ಸೆಯಾಗುತ್ತದೆ. ವ್ಯಾಪಕವಾದ ಮುಸ್ಲಿಂ ವಿರೋಧಿ ವಾಕ್ಪ್ರಹಾರವು ಜನರಲ್ಲಿ ಭೀತಿಯನ್ನು ಹಾಗೂ ಅವರ ಮನದಲ್ಲಿ ವಿಷಬೀಜವನ್ನು ಬಿತ್ತುತ್ತದೆ. ಇಂತಹ ಅಪಪ್ರಚಾರವು ಅತ್ಯಂತ ಅಪಾಯಕರವಾಗಿದೆ ಹಾಗೂ ನೀಚತದಿಂದ ಕೂಡಿದೆ. ಯಾಕೆಂದರೆ ನಿಮಗಿಂತ ಕಡಿಮೆಯವರೆಂದು ನೀವು ಯಾರನ್ನಾದರೂ ಪರಿಗಣಿಸಿದಲ್ಲಿ ಅವರ ದಮನದಲ್ಲಿ ಪಾಲ್ಗೊಳ್ಳುವುದು ತುಂಬಾ ಸುಲಭವಾಗುತ್ತದೆ ಎಂದು ಆಕೆ ಬರೆದಿದ್ದಾರೆ.

ಎಲ್ಲಾ ಧರ್ಮಗಳ ಜನರು ಶಾಂತಿಯುತವಾಗಿ ಜೊತೆಯಾಗಿ ಬಾಳಬೇಕೆಂದು ‘‘ಟಾಪ್ಚೆಫ್’’ ಟಿವಿ ಶೋ ಮೂಲಕ ಜನಪ್ರಿಯರಾಗಿರುವ ಪದ್ಮಲಕ್ಷ್ಮಿ ಟ್ವೀಟಿಸಿದ್ದಾರೆ.ಹಿಂದೂ ಬಾಂಧವರೇ, ಈ ರೀತಿಯ ಭೀತಿ ಹರಡುವಿಕೆಗೆ ಬಲಿಯಾಗದಿರಿ. ಭಾರತದಲ್ಲಾಗಲಿ, ಇತರೆಡೆಯಾಗಲಿ ಹಿಂದೂಧರ್ಮಕ್ಕೆ ಯಾವುದೇ ಬೆದರಿಕೆಯುಂಟಾಗಿಲ್ಲ. ನೈಜ ಆಧ್ಯಾತ್ಮಿಕತೆಯಲ್ಲಿ ಯಾವುದೇ ರೀತಿಯ ದ್ವೇಷವನ್ನು ಬಿತ್ತುವುದಕ್ಕೆ ಅವಕಾಶವಿಲ್ಲ. ಈ ಪುರಾತನ, ವಿಶಾವಾದ ನೆಲದಲ್ಲಿ ಎಲ್ಲಾ ಧರ್ಮಗಳ ಜನರು ಶಾಂತಿಯುತವಾಗಿ ಬಾಳಲು ಶಕ್ತರಾಗಬೇಕು’’ ಎಂದು ಆಕೆ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News