"ನಾನು ಅಲ್ಲಿಲ್ಲದೇ ಹೋಗುತ್ತಿದ್ದರೆ ತಂದೆ ಸತ್ತೇ ಹೋಗುತ್ತಿದ್ದರು": ಪದ್ಮಶ್ರೀ ವಿಜೇತ ಮಾಯಾಧರ್ ರಾವತ್‌ ಪುತ್ರಿ

Update: 2022-04-28 09:43 GMT
Photo: Thehindu

 ಹೊಸದಿಲ್ಲಿ: "ಈ ಸರಕಾರದ ನೀತಿಯಲ್ಲಿ ನಾವು ತುಂಬಾ ಕೆಳಗಿನ ಮಟ್ಟದಲ್ಲಿದ್ದೇವೆ, ಯಾವುದೇ ಸಾಂಸ್ಕೃತಿಕ ನೀತಿ ಕೂಡ ಇಲ್ಲ. ನಾನು ತೆರವು ಕಾರ್ಯಾಚರಣೆಯ ವಿರುದ್ಧವಲ್ಲ, ಆದರೆ ಅಮಾನವೀಯವಾಗಿ ಮಾಡುವ ಕಾರ್ಯಾಚರಣೆಯ ವಿರುದ್ಧವಾಗಿದ್ದೇನೆ. ನಮ್ಮ ವಸ್ತುಗಳನ್ನು ಹೊರಗೆಸೆಯಲಾಯಿತು. ಅದೃಷ್ಟವಶಾತ್ ನಾನು ಆ ದಿನ ತಂದೆಯ ಜೊತೆಗಿದ್ದೆ, ಇಲ್ಲದೇ ಇದ್ದರೆ ಅವರು ಸತ್ತೇ ಹೋಗುತ್ತಿದ್ದರು" ಎಂದು ನೋವಿನಿಂದ ಹೇಳಿದ್ದಾರೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಒಡಿಶಿ ನೃತ್ಯಪಟು ಮಾಯಾಧರ್ ರಾವತ್ ಅವರ ಪುತ್ರಿ ಮಧುಮಿತಾ ರಾವತ್.

ಬುಧವಾರ 90 ವರ್ಷದ ಒಡಿಶಿ ನೃತ್ಯ ಪಟುವನ್ನು ದಿಲ್ಲಿಯ ಏಷ್ಯನ್ ಗೇಮ್ಸ್ ವಿಲೇಜ್‍ನಲ್ಲಿರುವ ಅವರ ಸರಕಾರಿ ನಿವಾಸದಿಂದ ತೆರವುಗೊಳಿಸಲಾಗಿತ್ತು. ಸರಕಾರದ ಪ್ರಕಾರ  ಈ ನಿವಾಸವನ್ನು ತೆರವುಗೊಳಿಸಲು ಅವರಿಗೆ 2014ರಲ್ಲಿಯೇ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ ರಾವತ್ ಮತ್ತಿತರ ಕಲಾವಿದರು ನ್ಯಾಯಾಲಯದ ಕದ ತಟ್ಟಿದ್ದರೂ ಸಫಲರಾಗಿರಲಿಲ್ಲ. ಅವರಿಗೆ ತೆರವುಗೊಳಿಸಲು ಎಪ್ರಿಲ್ 25ರ ಗಡುವು ವಿಧಿಸಲಾಗಿತ್ತು.

90 ವರ್ಷದ ರಾವತ್ ಅವರು ಮನೆಯ ಹೊರಗೆ ತಮ್ಮ ವಸ್ತುಗಳೊಂದಿಗೆ ಇರುವ ಚಿತ್ರಗಳು ಕೇಂದ್ರದ ವಿರುದ್ಧ ವ್ಯಾಪಕ ಆಕ್ರೋಶ ಮೂಡಲು ಕಾರಣವಾಯಿತು. ಅವರ ಪದ್ಮಶ್ರೀ ಪ್ರಮಾಣಪತ್ರವೂ ರಸ್ತೆಯಲ್ಲಿ ಬಿದ್ದಿತ್ತು. ತೆರವು ಕಾನೂನುಬದ್ಧವಾಗಿದ್ದರೂ ಅದನ್ನು ಮಾಡಿದ ರೀತಿ ಆಕ್ಷೇಪಾರ್ಹ. ಮೋದಿ ಸರಕಾರಕ್ಕೆ ಕಲಾವಿದರ ಬಗ್ಗೆ ಗೌರವವಿಲ್ಲ ಎಂದು ಮಧುಮಿತಾ ದೂರಿದ್ದಾರೆ.

"ನಾನು ತಂದೆಯ ನಿವಾಸಕ್ಕೆ ಬಂದು ಅವರಿಗೆ ಊಟ ಒದಗಿಸುತ್ತಿದ್ದಾಗ ಒಂದು ಗಂಟೆಗೆ ಅಧಿಕಾರಿಗಳು ಬಂದು ತಮಗೆ ಎರಡು ನಿಮಿಷ ಕೂಡ ಸಮಯವಿಲ್ಲವೆಂದು ಹೇಳಿಕೊಂಡರು. ತಕ್ಷಣ ಅಲ್ಲಿಗೆ ಆಗಮಿಸಿದ ಕೆಲ ಸಿಬ್ಬಂದಿ ಎಲ್ಲಾ ವಸ್ತುಗಳನ್ನು ಹೊರಕ್ಕೆ ಎಸೆಯಲು ಪ್ರಾರಂಭಿಸಿದರು. ನನ್ನ ತಂದೆ ಆಘಾತಗೊಂಡರು, ಯಾವುದೇ ತೆರವು ನೋಟಿಸ್ ನಮಗೆ ತೋರಿಸಲಾಗಲಿಲ್ಲ, ಅದನ್ನು ಕೇಳಿದಾಗ  ಅಧಿಕಾರಿಗಳು ಕೋಪಗೊಂಡರು" ಎಂದು ಮಧುಮಿತಾ ಹೇಳಿದ್ದಾರೆ.

"ಅವರು ಈ ದೇಶದ ಸೇವೆ ಮಾಡಿದ್ಧಾರೆ. ಗುರು ಶಿಷ್ಯ ಪದ್ಧತಿಯಾನುಸಾರ ವಿದ್ಯಾರ್ಥಿಗಳಿಗೆ ನೃತ್ಯ ಕಲಿಸಿದ್ದರು, ಯಾರಿಂದಲೂ ಹಣ ಸ್ವೀಕರಿಸಿಲ್ಲ. ಅವರಿಗೆ ಎಲ್ಲಿಯೂ ಜಮೀನಿಲ್ಲ, ಅವರ ಬ್ಯಾಂಕ್ ಖಾತೆಯಲ್ಲಿ ಇರುವುದು ಕೇವಲ ರೂ 3000. ಅವರನ್ನು ಹೇಗೆ ಹೊರದಬ್ಬಲಾಯಿತು?" ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News