ನಾನು ಶೀಘ್ರವೇ ರಾಜಸ್ಥಾನ ಮುಖ್ಯಮಂತ್ರಿಯಾಗಲು ಬಯಸಿದ್ದೇನೆ: ಸೋನಿಯಾಗಾಂಧಿಗೆ ತಿಳಿಸಿದ ಸಚಿನ್ ಪೈಲಟ್

Update: 2022-04-28 13:03 GMT

ಜೈಪುರ/ಹೊಸದಿಲ್ಲಿ: ಪಕ್ಷವು ಮತ್ತೆ ಅಧಿಕಾರಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಚುನಾವಣೆಗೆ ಒಂದು  ವರ್ಷಕ್ಕಿಂತ ಹೆಚ್ಚು ಸಮಯವಿದ್ದು,ನಾನು ಶೀಘ್ರವೇ  ರಾಜಸ್ಥಾನದ ಮುಖ್ಯಮಂತ್ರಿಯಾಗಲು  ಬಯಸುತ್ತೇನೆ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಸೋನಿಯಾ ಗಾಂಧಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನನ್ನನ್ನು ಸಿಎಂ ಮಾಡದೇ ಇದ್ದರೆ, ಪಂಜಾಬ್‌ನಂತೆಯೇ ಕಾಂಗ್ರೆಸ್ ಪಕ್ಷ ರಾಜಸ್ಥಾನವನ್ನು ಕಳೆದುಕೊಳ್ಳಲಿದೆ ಎಂದು  ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾಗೆ ಸಚಿನ್ ಪೈಲಟ್ ಹೇಳಿದ್ದಾರೆ ಎಂದು ವರದಿಯಾಗಿದೆ.

ಸಚಿನ್ ಪೈಲಟ್ ಕಳೆದ ವಾರಗಳಲ್ಲಿ  ಗಾಂಧಿ  ಕುಟುಂಬದ ಮೂವರು ನಾಯಕರೊಂದಿಗೆ ಮೂರು ಸಭೆಗಳನ್ನು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 2023 ರಲ್ಲಿ ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಮೂಲಗಳ ಪ್ರಕಾರ, ಸಿಎಂ ಬದಲಾವಣೆಯಲ್ಲಿ ಯಾವುದೇ ವಿಳಂಬವು ಪಂಜಾಬ್ ಪುನರಾವರ್ತನೆಗೆ ಕಾರಣವಾಗುತ್ತದೆ ಎಂದು ಪೈಲಟ್  ಹೈಕಮಾಂಡ್ ಎಚ್ಚರಿಕೆ ನೀಡಿದ್ದಾರೆ.

ಎರಡು ವರ್ಷಗಳ ಹಿಂದೆ, ಪೈಲಟ್ 18 ಶಾಸಕರೊಂದಿಗೆ ಬಂಡಾಯ ಎದ್ದಿದ್ದರು. ಆಗ  ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು 100 ಕ್ಕೂ ಹೆಚ್ಚು ಶಾಸಕರನ್ನು ರೆಸಾರ್ಟ್‌ನಲ್ಲಿ ಇಟ್ಟುಕೊಂಡಿದ್ದರು. ರಾಹುಲ್, ಪ್ರಿಯಾಂಕಾ ಗಾಂಧಿ,  ಪೈಲಟ್‌ರನ್ನು ಮನವೊಲಿಸಲು ಯಶಸ್ವಿಯಾಗಿದ್ದರು.

ಪೈಲಟ್ ಅವರನ್ನು ಸಮಾಧಾನಪಡಿಸಲು, ಕಾಂಗ್ರೆಸ್ ಅವರಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಂತಹ ಹುದ್ದೆಯನ್ನು ನೀಡುವುದಾಗಿ ಹೇಳಿದೆ ಎಂದು ವರದಿಯಾಗಿದೆ. ಆದರೆ ಅವರು ರಾಜಸ್ಥಾನದಿಂದ ಹೊರಗಿರಲು ಬಯಸುವುದಿಲ್ಲ ಎಂದು ಹೇಳಿದ್ದರು.

ಕಾಂಗ್ರೆಸ್ ನಾಯಕತ್ವವು ಪೈಲಟ್ ಅವರನ್ನು ರಾಜಸ್ಥಾನ ಕಾಂಗ್ರೆಸ್‌ನ ಮುಖ್ಯಸ್ಥರನ್ನಾಗಿ ಮಾಡಲು ಪ್ರಸ್ತಾಪಿಸಿದೆ ಎಂದು ವರದಿಯಾಗಿದೆ.  ಆದರೆ ಪೈಲಟ್ ಈ ಹುದ್ದೆಯನ್ನು ಈಗಾಗಲೇ ನಿರ್ವಹಿಸಿದ್ದಾರೆ. ನೀವು  2023ರವರೆಗೆ ಕಾಯಬೇಕು, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಬೇಕು. ನಂತರ ಮುಖ್ಯಮಂತ್ರಿಯಾಗಬೇಕು ಎಂದು ಹೈಕಮಾಂಡ್,  ಪೈಲಟ್ ಬಳಿ ಕೇಳಿಕೊಂಡಿದೆ.  ನಾನು  ಐದು ವರ್ಷಗಳ ಕಾಲ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ.  ನಂತರ ಕಾಂಗ್ರೆಸ್ 2018 ರಲ್ಲಿ ಚುನಾವಣೆಯಲ್ಲಿ ಗೆದ್ದಿದೆ ಎಂದು ಪೈಲಟ್ ವಾದಿಸಿದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News