ಮೆಕ್ಸಿಕೊದಲ್ಲಿ 10 ವರ್ಷ ಹಿಂದೆ ಪತ್ತೆಯಾದ ತಲೆಬುರುಡೆ ರಾಶಿಯ ನಿಗೂಢತೆ ಕೊನೆಗೂ ಬಯಲು
Update: 2022-04-28 21:45 IST
ಮೆಕ್ಸಿಕೊ ಸಿಟಿ, ಎ.28: ಗ್ವಾಟೆಮಾಲಾ ದೇಶದೊಂದಿಗಿನ ಗಡಿ ಸಮೀಪದ ಗುಹೆಯಲ್ಲಿ 2012ರಲ್ಲಿ ಪತ್ತೆಯಾದ 150 ತಲೆಬುರುಡೆಗಳ ರಾಶಿಯ ನಿಗೂಢತೆಯನ್ನು ಮೆಕ್ಸಿಕೋದ ಅಧಿಕಾರಿಗಳು ಭೇದಿಸಿದ್ದು ಇವು 9ನೇ ಶತಮಾನಕ್ಕೆ ಸಂಬಂಧಿಸಿದ ಕುರುಹುಗಳಾಗಿವೆ ಎಂದು ಹೇಳಿದ್ದಾರೆ.
ಆರಂಭದಲ್ಲಿ ಇವು ದುಷ್ಕರ್ಮಿಗಳಿಂದ ಸಾಮೂಹಿಕ ಹತ್ಯೆಯಾದವರ ತಲೆಬುರುಡೆ ಎಂದು ಪೊಲೀಸರು ಶಂಕಿಸಿದ್ದರು. ಬಳಿಕ ತಲೆಬುರುಡೆ ಮತ್ತು ಸ್ಥಳದಲ್ಲಿ ಸಿಕ್ಕಿದ ಮೂಳೆಗಳನ್ನು ವೈಜ್ಞಾನಿಕ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಸುಮಾರು 10 ವರ್ಷದ ಸಂಶೋಧನೆ ಮತ್ತು ಪರೀಕ್ಷೆಯ ಬಳಿಕ, ಈ ತಲೆಬುರುಡೆ 9ನೇ ಶತಮಾನದಿಂದ 12ನೇ ಶತಮಾನದ ನಡುವಿನ ಅವಧಿಗೆ ಸಂಬಂಧಿಸಿದ್ದು ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಆಂಥ್ರೊಪೊಲೊಜಿ ಆ್ಯಂಡ್ ಹಿಸ್ಟರಿ (ಐಎನ್ಎಎಚ್)ಯ ವರದಿ ಹೇಳಿದೆ.