ಭಾರತ-ಚೀನಾ ರಾಜತಾಂತ್ರಿಕ ಬಿಕ್ಕಟ್ಟು: ಅತಂತ್ರ ಪರಿಸ್ಥಿತಿಯಲ್ಲಿ 22,000 ಭಾರತೀಯ ವಿದ್ಯಾರ್ಥಿಗಳು

Update: 2022-04-28 17:17 GMT

ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕ ರೋಗ ಜಗತ್ತಿನಾದ್ಯಂತ ಹರಡಿ ಎರಡು ವರ್ಷಗಳು ಕಳೆದಿವೆ, ಇದು ಚೀನಾದ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಮಾರು 22,000 ಭಾರತೀಯ ವಿದ್ಯಾರ್ಥಿಗಳು (ಬಹುತೇಕರು ಮೆಡಿಕಲ್‌ ವಿದ್ಯಾರ್ಥಿಗಳು) ಮನೆಗೆ ಮರಳಲು ಕಾರಣವಾಗಿತ್ತು.

ಸದ್ಯ ಶ್ರೀಲಂಕಾ, ಪಾಕಿಸ್ತಾನ, ಥೈಲ್ಯಾಂಡ್ ಮತ್ತು ಸೊಲೊಮನ್ ದ್ವೀಪಗಳಂತಹ ದೇಶಗಳ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಚೀನಾದಲ್ಲಿನ ತಮ್ಮ ವಿಶ್ವವಿದ್ಯಾಲಯಗಳಿಗೆ ಮರಳಲು ಅನುಮತಿ ನೀಡಿದೆ. ಆದರೆ, ಭಾರತೀಯ ವಿದ್ಯಾರ್ಥಿಗಳಿಗೆ ಅಂತಹ ಯಾವುದೇ ಅವಕಾಶವನ್ನು ನೀಡಲಾಗಿಲ್ಲ ಎಂದು ವರದಿಯಾಗಿದೆ. ಅನೇಕ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗುತ್ತರಾದರೂ, ಅವರಲ್ಲಿ ಹೆಚ್ಚಿನವರಿಗೆ ಈಗಾಗಲೇ ಆಫ್‌ಲೈನ್ ತರಗತಿಗಳಿಗೆ ಹಾಜರಾಗಿ ಪ್ರಾಯೋಗಿಕವಾಗಿ ಅಧ್ಯಯನ ಮಾಡುವ ಸಮಯವಾಗಿದೆ.

ಗಾಲ್ವಾನ್‌ನಲ್ಲಿ ಉಭಯ ದೇಶಗಳ ಮಿಲಿಟರಿ ಮುಖಾಮುಖಿಯ ವೇಳೆ 20 ಭಾರತೀಯ ಸೈನಿಕರು ಮತ್ತು ಚೀನೀ ಸೈನಿಕರು ಕೊಲ್ಲಲ್ಪಟ್ಟ (ಅಧಿಕೃತ ಸಂಖ್ಯೆ ಇನ್ನೂ ಹೊರಬಿದ್ದಿಲ್ಲ) ಬಳಿಕ ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಪ್ರಾರಂಭವಾಗಿದೆ. ಅಂದಿನಿಂದ, ಎರಡು ರಾಷ್ಟ್ರಗಳ ನಡುವೆ ಸಾಕಷ್ಟು ವಿಷಯಗಳು ಇನ್ನೂ ಇತ್ಯರ್ಥವಾಗಬೇಕಿದೆ.

ಕಳೆದ ತಿಂಗಳು ನವದೆಹಲಿಯಲ್ಲಿ ಚೀನಾದ ವಾಂಗ್ ಯಿ ಅವರನ್ನು ಭೇಟಿಯಾದ ನಂತರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು "ಭಾರತೀಯ ವಿದ್ಯಾರ್ಥಿಗಳ ವಾಪಸಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ನಾವು ಚೀನಾದ ವಿದೇಶಾಂಗ ಸಚಿವರಿಗೆ ಮನವಿ ಮಾಡಿದ್ದೇವೆ. ಅನೇಕ ಯುವಜನರ ಭವಿಷ್ಯವನ್ನು ಒಳಗೊಂಡಿರುವುದರಿಂದ ಚೀನಾ ತಾರತಮ್ಯ ರಹಿತ ವಿಧಾನವನ್ನು ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ" ತಿಳಿಸಿದ್ದರು. 

ಅದಾಗ್ಯೂ, ಪ್ರತೀಕಾರದ ಕ್ರಮವಾಗಿ, ಚೀನಾದ ಪ್ರಜೆಗಳು ಭಾರತಕ್ಕೆ ಭೇಟಿ ನೀಡಲು ಹೊಂದಿದ್ದ ವೀಸಾಗಳನ್ನು ರದ್ದುಗೊಳಿಸಲಾಗಿದೆ ಎಂದು newindianexpress ವರದಿ ಮಾಡಿದೆ.

ಏಪ್ರಿಲ್ 20 ರಂದು IATA (ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್) ಹೊರಡಿಸಿದ ಸುತ್ತೋಲೆಯಲ್ಲಿ, ಭಾರತವು ಚೀನಾದ ಪ್ರಜೆಗಳಿಗೆ ನೀಡಲಾದ ಪ್ರವಾಸಿ ವೀಸಾಗಳನ್ನು ಅಮಾನತುಗೊಳಿಸಿದೆ. ಆದಾಗ್ಯೂ, ಭಾರತ ಸರ್ಕಾರವು ಇನ್ನೂ ಚೀನಾದ ಉದ್ಯಮಿಗಳು, ಉದ್ಯೋಗಿಗಳು, ರಾಜತಾಂತ್ರಿಕ ಮತ್ತು ಸರ್ಕಾರಿ ಅಧಿಕಾರಿಗಳಿಗೆ ವೀಸಾವನ್ನು ನೀಡುತ್ತಿದೆ ಎಂದು ಹೇಳಿತ್ತು.

ಆದಾಗ್ಯೂ, ಚೀನಾದಲ್ಲಿ ಕೋವಿಡ್‌ನ ಹೊಸ ಅಲೆಯ ಭೀತಿಯಿಂದಾಗಿ ವೀಸಾಗಳನ್ನು ಹಿಂಪಡೆಯಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿದೆ.
 
ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ, ಸಂಬಂಧಪಟ್ಟ ವಿದ್ಯಾರ್ಥಿಗಳು ಆತಂಕಿತರಾಗಿದ್ದಾರೆ. "ನಾವು ಮುಂದಿನ ಸೂಚನೆಗಾಗಿ ಕಾಯುತ್ತಿದ್ದೇವೆ" ಎಂದು ಸೌತ್ ವೆಸ್ಟ್ ವೈದ್ಯಕೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮೊಮಿನೂರ್ ರಹಮಾನ್ ಹೇಳಿದ್ದಾರೆ. ‘ತಮ್ಮನ್ನು ಚೀನಾಕ್ಕೆ ಹೋಗಲು ಅನುವು ಮಾಡಿಕೊಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ಅಭಿಯಾನವನ್ನು ನಡೆಸುತ್ತಿದ್ದಾರೆ.

"ನಾವು ಅಧಿಕಾರಿಗಳಿಗೆ ಮತ್ತೊಮ್ಮೆ ವಿನಂತಿಸಬೇಕು. ನಾವು ಇನ್ನು ಮುಂದೆ ಸುಮ್ಮನೆ ಕಾಯಲು ಸಾಧ್ಯವಿಲ್ಲ. ನಾವು ಹಿಂತಿರುಗುವ ಬಗ್ಗೆ ಸ್ಪಷ್ಟಗೊಳ್ಳಬೇಕು, ಇತರ ದೇಶಗಳಿಗೆ ಅವಕಾಶ ನೀಡಿರುವಾಗ ನಮ್ಮನ್ನು ಮಾತ್ರ ಏಕೆ ಅವಕಾಶ ವಂಚಿತಗೊಳಿಸಲಾಗುತ್ತಿದೆ," ಎಂದು ಚೀನಾದಲ್ಲಿ (ವ್ಯಾಸಂಗ ಮಾಡುವ) ಭಾರತೀಯ ವಿದ್ಯಾರ್ಥಿಗಳ  ಪ್ರತಿನಿಧಿ ಗುಂಪು Twitter ನಲ್ಲಿ ಪ್ರಶ್ನಿಸಿದೆ.

ವಿದ್ಯಾರ್ಥಿಗಳ ಕೋರಿಕೆಯ ಮೇರೆಗೆ, ಕೇಂದ್ರ ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವಿಯಾ ಅವರು ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶ್ರಿಂಗ್ಲಾ ಅವರಿಗೆ ಪತ್ರ ಬರೆದು, ಭಾರತೀಯ ವಿದ್ಯಾರ್ಥಿಗಳು ಚೀನಾಕ್ಕೆ ಮರಳಲು ಸಹಾಯ ಮಾಡುವಂತೆ ಒತ್ತಾಯಿಸಿದ್ದಾರೆ.

ಚೀನಾ ಇದುವರೆಗೂ ದೃಢವಾದ ಪ್ರತಿಕ್ರಿಯೆ ನೀಡಿಲ್ಲ, ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ನೀಡಿಲ್ಲ. ಪ್ರವೇಶವನ್ನು ಪಡೆಯುವುದು ಸುಲಭ ಮತ್ತು ಶುಲ್ಕವು ಅಗ್ಗವಾಗಿರುವದರಿಂದ ಭಾರತೀಯ ವಿದ್ಯಾರ್ಥಿಗಳು ಚೀನಾ ದೇಶಕ್ಕೆ ಆದ್ಯತೆ ನೀಡುತ್ತಾರೆ. ಯುಎಸ್ ಮತ್ತು ಯುಕೆ ನಂತರ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಸೇವನೆಯಲ್ಲಿ ಚೀನಾ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ.

ಕೃಪೆ: Newindianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News