ಮಸೀದಿಗಳ ಮುಂದೆ ಮಾಂಸ, ಧರ್ಮಗ್ರಂಥಗಳನ್ನು ಎಸೆಯುವ ಮೂಲಕ ಗಲಭೆಗೆ ಸಂಚು ಹೂಡಿದ್ದ ಆರೋಪಿಗಳ ಬಂಧನ

Update: 2022-04-28 17:20 GMT
photo:twitter

ಅಯೋಧ್ಯೆ: ನಗರದ ಧಾರ್ಮಿಕ ಕೇಂದ್ರಗಳ ಹೊರಗೆ ಮಾಂಸ ಮತ್ತು ಪವಿತ್ರ ಗ್ರಂಥಗಳನ್ನು ಎಸೆಯುವ ಮೂಲಕ ಉತ್ತರ ಪ್ರದೇಶದಲ್ಲಿ ಗಲಭೆ ಎಬ್ಬಿಸಲು ಯತ್ನಿಸಿದ ಏಳು ಜನರನ್ನು ಅಯೋಧ್ಯೆ ಪೊಲೀಸರು ಗುರುವಾರ ಬಂಧಿಸಿದ್ದಾರೆ

ನಗರದ ಮಸೀದಿಗಳ ಹೊರಗೆ ಹಸಿಮಾಂಸವನ್ನು ಸೇರಿದಂತೆ ಪವಿತ್ರ ಗ್ರಂಥದ ಚೂರುಗಳನ್ನು ಆರೋಪಿಗಳು ಎಸೆದು ಗಲಭೆಗೆ ಯೋಜನೆ ಹಾಕಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದು, ಸದ್ಯ, ಮಸೀದಿ ಆವರಣದಿಂದ ಆಕ್ಷೇಪಾರ್ಹ ವಸ್ತುಗಳನ್ನು ತೆರವುಗೊಳಿಸಲಾಗಿದೆ ಎಂದು ಹೇಳಿದ್ದಾರೆ. 
 
ಪೊಲೀಸರ ಪ್ರಕಾರ ಹಿಂದಿ ಅಯೋಧ್ಯೆ ಸಂಘಟನೆ ಮುಖ್ಯಸ್ಥ ಮಹೇಶ್ ಕುಮಾರ್ ಮಿಶ್ರಾ ಈ ಸಂಚಿನ ಮಾಸ್ಟರ್ ಮೈಂಡ್ ಆಗಿದ್ದು, ಈ ಸಂಬಂಧ ಬಂಧಿತ ಇತರ ಆರು ಆರೋಪಿಗಳನ್ನು ಪ್ರತ್ಯೂಷ್ ಶ್ರೀವಾಸ್ತವ, ನಿತಿನ್ ಕುಮಾರ್, ದೀಪಕ್ ಕುಮಾರ್ ಗೌಡ್, ಬ್ರಿಜೇಶ್ ಪಾಂಡೆ, ಶತ್ರುಘ್ನ ಪ್ರಜಾಪತಿ ಮತ್ತು ವಿಮಲ್ ಪಾಂಡೆ ಎಂದು ಗುರುತಿಸಲಾಗಿದೆ.

ಪಿತೂರಿಯ ಭಾಗವಾಗಿರುವ 11 ಜನರನ್ನು ಗುರುತಿಸಲಾಗಿದೆ ಮತ್ತು ಪ್ರಸ್ತುತ ತಲೆಮರೆಸಿಕೊಂಡಿರುವ ಇತರ ನಾಲ್ವರನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿಯ ಜಹಾಂಗೀರ್‌ಪುರಿ ಘಟನೆಯನ್ನು ವಿರೋಧಿಸಿ ಈ ಸಂಚು ರೂಪಿಸಲಾಗಿದೆ ಎಂದೂ ಹೇಳಲಾಗಿದೆ. 

ಎಲ್ಲಾ ಏಳು ಮಂದಿ ಆರೋಪಿಗಳ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್ಎಸ್ಎ) ಅಡಿಯಲ್ಲಿ ಆರೋಪ ಹೊರಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದರು.  

 “ಪವಿತ್ರ ಸ್ಥಳಗಳ ಹೊರಗೆ ಆಕ್ಷೇಪಾರ್ಹ ವಸ್ತುಗಳನ್ನು ಎಸೆಯುವ ಮೂಲಕ ಎಂಟು ಜನರು ಪ್ರದೇಶದಲ್ಲಿ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ. ಅವರಿಂದ ನಾಲ್ಕು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ, ಅವರಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದೆ ಮತ್ತು ಪಿತೂರಿಯ ಭಾಗವಾಗಿರುವ ನಾಲ್ವರು ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ. ಅವರ ವಿಚಾರಣೆಯ ಸಮಯದಲ್ಲಿ, ಅವರು ಪ್ರದೇಶದಲ್ಲಿ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕದಡಲು ಬಯಸಿದ್ದರು ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಎಲ್ಲಾ ವಿಭಾಗಗಳು ಮತ್ತು ಸಮುದಾಯಗಳ ಜನರು ಒಗ್ಗೂಡಿದರು, ಸಹಕರಿಸಿದರು ಮತ್ತು ಅವರ ಯೋಜನೆಗಳನ್ನು ವಿಫಲಗೊಳಿಸಿದರು” ಎಂದು ಅಯೋಧ್ಯೆಯ ಎಸ್‌ಎಸ್‌ಪಿ ಶೈಲೇಶ್ ಪಾಂಡೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News