ಜಮ್ಮುಕಾಶ್ಮೀರ ಚುನಾವಣೆಯಲ್ಲಿ ಎನ್ಸಿ-ಪಿಡಿಪಿ ಜಂಟಿ ಸ್ಪರ್ಧೆ?

Update: 2022-04-28 18:19 GMT
PHOTO:TWITTER

ಹೊಸದಿಲ್ಲಿ,ಎ.28: ಜಮ್ಮುಕಾಶ್ಮೀರ ಚುನಾವಣೆಗಳಲ್ಲಿ ಜೊತೆಯಾಗಿ ಸ್ಪರ್ಧಿಸುವ ಚಿಂತನೆಯನ್ನು ನ್ಯಾಶನಲ್ ಕಾನ್ಫರೆನ್ಸ್ ಹಾಗೂ ಪಿಡಿಪಿ ಪಕ್ಷಗಳು ಹುಟ್ಟುಹಾಕಿವೆ. ಗುಪ್ಕರ್ ಘೋಷಣೆಯ ಸಂದರ್ಭದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಜನತಾ ಒಕ್ಕೂಟದ ಜಂಟಿ ರಂಗ ಸ್ಥಾಪನೆಯ ಪ್ರಸ್ತಾವವನ್ನು ನ್ಯಾಶನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಅವರು ಮೊದಲ ಬಾರಿಗೆ ಮುಂದಿಟ್ಟಿದ್ದರು.
   
ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ಮರುಸ್ಥಾಪನೆಯ ಗುರಿಯೊಂದಿಗೆ ಆರು ಪಕ್ಷಗಳ ಒಕ್ಕೂಟವಾದ ಗುಪ್ಕರ್ ಅಲಾಯನ್ಸ್ ಅನ್ನು 2020ರ ಆಕ್ಟೋಬರ್ನಲ್ಲಿ ರಚಿಸಲಾಗಿತ್ತು.
 
ಗುಪ್ಕರ್ ಮೈತ್ರಿಕೂಟದ ಎಲ್ಲಾ ಪಕ್ಷಗಳು ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸಬೇಕಾಗಿದೆ. ನಾನು ಗುಪ್ಕರ್ ಅಲಾಯನ್ಸ್‌ ನ ಪದಾಧಿಕಾರಿಯಲ್ಲವಾದರೂ, ನನ್ನ ಅಭಿಪ್ರಾಯವೇನ್ನಾದರೂ ಕೇಳಿದಲ್ಲಿ ಅವರು ಜಂಟಿಯಾಗಿ ಸ್ಪರ್ಧಿಸಬೇಕೆಂದು ತಿಳಿಸುತ್ತೇನೆ ಎಂದು ಉಮರ್ ಅಬ್ದುಲ್ಲಾ ತಿಳಿಸಿದ್ದಾರೆ.
 
ಗುಪ್ಕರ್ ಮೈತ್ರಿಕೂಟದ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಒಗ್ಗೂಡಬೇಕೆಂದು ಪಿಡಿಪಿ ನಾಯಕಿ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ. ಚುನಾವಣೆಯಲ್ಲಿ ಜಯಿಸುವುದು ತನ್ನ ಉದ್ದೇಶವಲ್ಲವಾದರೂ, ಕೇಂದ್ರಾಡಳಿತ ಪ್ರದೇಶದಲ್ಲಿ ಬಿಜೆಪಿಯು ತನ್ನ ಹೆಜ್ಜೆಗುರುತುಗಳನ್ನು ವಿತರಿಸದಂತೆ ನೋಡಿಕೊಳ್ಳಬೇಕಾಗಿದೆ ಎಂದರು.
 
‘‘ಜಮ್ಮುಕಾಶ್ಮೀರದ ವಿರುದ್ಧ ಬಿಜೆಪಿ ಸರಕಾರ ಮಾಡುತ್ತಿರುವ ಪ್ರಹಾರನ್ನು ಎದುರಿಸಲು ನಾವು ಅಗತ್ಯವಿರುವುದೆಲ್ಲವನ್ನೂ ಮಾಡಬೇಕಿದೆ ಎಂದು ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ.
ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸುವುದರಿಂದ ಮೈತ್ರಿಕೂಟದ ಗುರಿ ಸಾಧನೆ ಸಾಧ್ಯವಾಗಲಿದೆಯೆಂದು ಗುಪ್ಕರ್ ಅಲಾಯನ್ಸ್ ನ ವಕ್ತಾರ ಹಾಗೂ ಸಿಪಿಎಂ ನಾಯಕ ಎಂ.ವೈ.ತಾರಿಗಾಮಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News