"ಹಿಂದಿ ಮಾತನಾಡದವರು ಹಿಂದುಸ್ತಾನದಲ್ಲಿ ಇರಬೇಡಿ" ಎಂ‌ದು ಹೇಳಿ ವಿವಾದ ಸೃಷ್ಟಿಸಿದ ಉತ್ತರಪ್ರದೇಶ ಸಚಿವ

Update: 2022-04-29 18:10 GMT
PHOTO:TWITTER

ಲಕ್ನೋ: ಹಿಂದಿ ರಾಷ್ಟ್ರಭಾಷೆಯಲ್ಲ ಎಂಬ ಕಿಚ್ಚ ಸುದೀಪ್‌ ಹೇಳಿಕೆಗೆ ಬಾಲಿವುಡ್‌ ನಟ ಅಜಯ್‌ ದೇವಗನ್‌ ನೀಡಿದ್ದ ತಿರುಗೇಟು ಹೇಳಿಕೆ ಹಿಂದಿ ಹೇರಿಕೆಯ ಬಗೆಗಿನ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ಬಂದಿದ್ದು, "ಹಿಂದಿ ಇಷ್ಟವಿಲ್ಲದವರು ದೇಶ ಬಿಟ್ಟು ಹೋಗಿ" ಎಂದು ಉತ್ತರಪ್ರದೇಶದ ಸಚಿವರೊಬ್ಬರು ಹೇಳಿಕೆ ನೀಡಿದ್ದು ವರದಿಯಾಗಿದೆ.

ಉತ್ತರಪ್ರದೇಶ ಆದಿತ್ಯನಾಥ್‌ ಸಂಪುಟದ ಸಚಿವ ಸಂಜಯ್ ನಿಶಾದ್ ಅವರು "ಹಿಂದಿಯನ್ನು ಪ್ರೀತಿಸದ  ಜನರನ್ನು ವಿದೇಶಿಯರು ಅಥವಾ ವಿದೇಶಿ ಶಕ್ತಿಗಳೊಂದಿಗೆ ಸಂಪರ್ಕ ಹೊಂದಿರುವವರು ಎಂದು ಭಾವಿಸಲಾಗುವುದು. ಅವರು ಹಿಂದುಸ್ತಾನವನ್ನು ಬಿಟ್ಟು ಬೇರೆಡೆಗೆ ಹೋಗಬೇಕು" ಎಂದು ಹೇಳಿಕೆ ನೀಡಿ ವಿವಾದದ ಕಿಚ್ಚನ್ನು ಹೆಚ್ಚಿಸಿದ್ದಾರೆ. 

ರಾಷ್ಟ್ರ ಭಾಷೆ ಕುರಿತು ಇತ್ತೀಚೆಗೆ ನಡೆದ ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ನಡುವಿನ ಟ್ವಿಟ್ಟರ್ ವಾಗ್ವಾದದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಂಜಯ್‌ ನಿಶಾದ್‌, ʼಭಾರತದಲ್ಲಿ ವಾಸಿಸಲು ಬಯಸುವವರು ಹಿಂದಿಯನ್ನು ಪ್ರೀತಿಸಬೇಕು. ಹಿಂದಿಯನ್ನು ಪ್ರೀತಿಸದವರು ವಿದೇಶಿಗಳು ಅಥವಾ ವಿದೇಶಿ ಶಕ್ತಿಗಳೊಂದಿಗೆ ಸಂಬಂಧ ಹೊಂದಿದವರು ಎಂದು ಭಾವಿಸಲಾಗುತ್ತದೆ. ನಾವು ಪ್ರಾದೇಶಿಕ ಭಾಷೆಗಳನ್ನು ಗೌರವಿಸುತ್ತೇವೆ, ಆದರೆ, ಭಾರತದ ಸಂವಿಧಾನವು ಭಾರತವನ್ನು 'ಹಿಂದೂಸ್ತಾನ್' ಎಂದು ಹೇಳುತ್ತದೆ.  ಅಂದರೆ ಹಿಂದಿ ಮಾತನಾಡುವವರಿಗೆ ಇರುವ ಒಂದು ಸ್ಥಳವಾಗಿದೆ. ಹಿಂದುಸ್ತಾನದಲ್ಲಿ ಹಿಂದಿ ಮಾತನಾಡದವರಿಗೆ ಸ್ಥಳವಿಲ್ಲ. ಅವರು ಈ ದೇಶವನ್ನು ಬಿಟ್ಟು ಬೇರೆಡೆಗೆ ಹೋಗಬೇಕು” ಎಂದು ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

 ಇತ್ತೀಚೆಗೆ, ಭಾರತೀಯರು ಪರಸ್ಪರ ಮಾತನಾಡಲು ಹಿಂದಿಯನ್ನು ಬಳಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಷಾ ಹೇಳಿಕೆ ನೀಡಿ ವಿವಾದವನ್ನು ಸೃಷ್ಟಿಸಿದ್ದರು. ಅದಕ್ಕೆ, ಸಿಟಿ ರವಿಯಂತಹಾ ನಾಯಕರು ಸಮರ್ಥನೆ ನೀಡಿ ಕನ್ನಡಿಗರ ಆಕ್ರೋಶಕ್ಕೂ ಗುರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News