ಬಂಧನ ಕೇಂದ್ರದಲ್ಲಿರುವ ಪಾಕ್ ಪ್ರಜೆಯ ಬಿಡುಗಡೆಗೆ ಸುಪ್ರೀಂ ಕೋರ್ಟ್ ನಿರ್ದೇಶ

Update: 2022-04-29 18:38 GMT

ಹೊಸದಿಲ್ಲಿ,ಎ.29: ಪಾಕಿಸ್ತಾನ ಸರಕಾರವು ತನ್ನ ಪೌರನೆಂದು ಸ್ವೀಕರಿಸಲು ನಿರಾಕರಿಸಿರುವುದರಿಂದ ಕಳೆದ ಏಳು ವರ್ಷಗಳಿಗೂ ಹೆಚ್ಚಿನ ಸಮಯದಿಂದ ಇಲ್ಲಿಯ ಬಂಧನ ಕೇಂದ್ರವೊಂದರಲ್ಲಿ ಕೊಳೆಯುತ್ತಿರುವ ಪಾಕ್ ಪ್ರಜೆಯನ್ನು ಬಿಡುಗಡೆಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ನಿರ್ದೇಶ ನೀಡಿದೆ.

ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಮುಹಮ್ಮದ್ ಕಮರ್(62)ಗೆ ಸಾಧ್ಯವಾಗುವಂತೆ ಆತನಿಗೆ ದೀರ್ಘಾವಧಿಯ ವೀಸಾ ಮಂಜೂರು ಮಾಡುವ ಬಗ್ಗೆ ನಿರ್ಧಾರವೊಂದನ್ನು ಕೈಗೊಳ್ಳುವಂತೆ ಕೇಂದ್ರಕ್ಕೆ ನಿರ್ದೇಶ ನೀಡಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಹಿಮಾ ಕೊಹ್ಲಿ ಅವರ ಪೀಠವು,ನಿರ್ಧಾರವನ್ನು ನಾಲ್ಕು ತಿಂಗಳುಗಳಲ್ಲಿ ತನಗೆ ಸಲ್ಲಿಸುವಂತೆ ಸೂಚಿಸಿತು.
ನ್ಯಾಯಾಧಿಕರಣದಿಂದ ವಿದೇಶಿ ಎಂದು ಘೋಷಿಸಲ್ಪಟ್ಟಿರುವ ಕಮರ್ನನ್ನು 5,000 ರೂ.ಗಳ ಬಾಂಡ್ ಮತ್ತು ಅಷ್ಟೇ ಮೊತ್ತದ ಭದ್ರತೆಗಳ ಮೇಲೆ ಬಿಡುಗಡೆಗೊಳಿಸುವಂತೆ ತಿಳಿಸಿದ ಪೀಠವು, ತಿಂಗಳಿಗೊಮ್ಮೆ ಮೀರತ್ನಲ್ಲಿಯ ಪೊಲೀಸ್ ಠಾಣೆಗೆ ಹಾಜರಾಗುವಂತೆ ಆತನಿಗೆ ಸೂಚಿಸಿತು.
ಕಮರ್ ಭಾರತೀಯ ಪ್ರಜೆಯಾಗಿರುವ,ವಿವಾಹೇತರ ಸಂಬಂಧದಿಂದ ಐವರು ಮಕ್ಕಳನ್ನು ಹೊಂದಿದ್ದ ಮಹಿಳೆಯನ್ನು ಮದುವೆಯಾಗಿದ್ದಾನೆ ಎನ್ನುವುದನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು.

ದಿಲ್ಲಿಯ ಬಂಧನ ಕೇಂದ್ರದಿಂದ ತಂದೆಯ ಬಿಡುಗಡೆಯನ್ನು ಕೋರಿ ಕಮರ್ನ ಪುತ್ರ ಮತ್ತು ಪುತ್ರಿ ಅರ್ಜಿಯನ್ನು ಸಲ್ಲಿಸಿದ್ದರು.
ಉತ್ತರ ಪ್ರದೇಶ ಸರಕಾರವು ಹೇಳುವಂತೆ ಕಮರ್ ಪತ್ನಿ ಆತನಿಂದ ವಿಚ್ಛೇದನ ಪಡೆದಿದ್ದಾಳೆ ಮತ್ತು ಈಗ ತನ್ನ ಐವರು ಮಕ್ಕಳೊಂದಿಗೆ ದಿಲ್ಲಿಯಲ್ಲಿ ವಾಸವಿದ್ದಾಳೆ. ಆದಾಗ್ಯೂ ವಿಚ್ಛೇದನಕ್ಕೆ ಸಂಬಂಧಿಸಿದ ಯಾವುದೇ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿಲ್ಲ ಎಂದು ಪೀಠವು ತನ್ನ ಆದೇಶದಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News