×
Ad

ಛತ್ತೀಸ್ ಗಡ: ವ್ಯಕ್ತಿಯನ್ನು ಮರಕ್ಕೆ ತಲೆ ಕೆಳಗಾಗಿ ನೇತು ಹಾಕಿ ಥಳಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆ

Update: 2022-04-30 20:46 IST
photo:twitter

ಬಿಲಾಸಪುರ,ಎ.30: ಕಳ್ಳತನದ ಶಂಕೆಯಲ್ಲಿ ಗುಂಪೊಂದು ಸೆಕ್ಯುರಿಟಿ ಗಾರ್ಡ್‌ವೋರ್ವನನ್ನು ಮರಕ್ಕೆ ತಲೆ ಕೆಳಗಾಗಿ ನೇತು ಹಾಕಿ ಬರ್ಬರವಾಗಿ ಥಳಿಸಿದ ಘಟನೆ ಛತ್ತೀಸ್‌ಗಡದ ಬಿಲಾಸಪುರ ಜಿಲ್ಲೆಯ ಸಿಪತ್ ಪಟ್ಟಣದಲ್ಲಿ ನಡೆದಿದೆ.

ವೈರಲ್ ಆಗಿರುವ ಘಟನೆಯ ವೀಡಿಯೊ ಆರೋಪಿಗಳು ಸೆಕ್ಯುರಿಟಿ ಗಾರ್ಡ್ ಮಹಾವೀರನನ್ನು ಅವಾಚ್ಯವಾಗಿ ಬೈಯುತ್ತ ದೊಣ್ಣೆಗಳಿಂದ ಥಳಿಸುತ್ತಿದ್ದನ್ನು ಮತ್ತು ಆತ ಅಳುತ್ತ ತನ್ನ ಮೇಲೆ ದಯೆ ತೋರಿಸುವಂತೆ ಕೋರಿಕೊಳ್ಳುತ್ತಿದ್ದನ್ನು ತೋರಿಸಿದೆ. 

ಇನ್ನೊಂದು ವೀಡಿಯೊ ಮಹಾವೀರನ್ನು ಮರಕ್ಕೆ ತಲೆ ಕೆಳಗಾಗಿ ನೇತು ಹಾಕಿದ್ದನ್ನು ತೋರಿಸಿದೆ. ಚೀರಾಡುತ್ತಿದ್ದ ಆತ ನೆರವಿಗಾಗಿ ಬೊಬ್ಬೆಯಿಡುತ್ತಿದ್ದರೂ ಆರೋಪಿಗಳು ಥಳಿತವನ್ನು ಮಂದುವರಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು,ತಲೆ ಮರೆಸಿಕೊಂಡಿರುವ ಇನ್ನೋರ್ವ ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮಹಾವೀರ ಈ ವಾರದ ಆರಂಭದಲ್ಲಿ ಕಳ್ಳತನ ಮಾಡಲು ತನ್ನ ಮನೆಗೆ ನುಗ್ಗಿದ್ದ,ಆದರೆ ತನ್ನ ಕುಟುಂಬದ ಸದಸ್ಯರ ಕೈಗೆ ಸಿಕ್ಕಿ ಬಿದ್ದಿದ್ದ ಎಂದು ಆರೋಪಿಗಳಲ್ಲಿ ಓರ್ವನಾಗಿರುವ ಮನೀಷ ಪೊಲೀಸರಿಗೆ ತಿಳಿಸಿದ್ದ. ಇಬ್ಬರನ್ನೂ ಠಾಣೆಗೆ ಕರೆಸಿದ್ದ ಪೊಲೀಸರು ವಿಷಯವನ್ನು ಇಲ್ಲಿಗೇ ಇತ್ಯರ್ಥಗೊಳಿಸಲು ತಾನು ಬಯಸಿದ್ದಾಗಿ ಮನೀಶ್ ತಿಳಿಸಿದ ಬಳಿಕ ಮಹಾವೀರಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು ಎಂದು ಸಿಪತ್ ಠಾಣಾಧಿಕಾರಿ ವಿಕಾಸ ಕುಮಾರ ತಿಳಿಸಿದರು.ಗುಂಪೊಂದು ಮಹಾವೀರನನ್ನು ಥಳಿಸುತ್ತಿದೆ ಎಂದು ಗ್ರಾಮದ ಮಹಿಳೆಯೋರ್ವಳು ಗುರುವಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಳು. ನಾವು ತಕ್ಷಣ ಸ್ಥಳಕ್ಕೆ ಧಾವಿಸಿ ಮಹಾವೀರನನ್ನು ರಕಿಸಿದ್ದೆವು ಎಂದರು.ಮಹಾವೀರ ಮತ್ತೊಮ್ಮೆ ತನ್ನ ಮನೆಗೆ ನುಗ್ಗಿದ್ದರಿಂದ ಆತನನ್ನು ಥಳಿಸಿದ್ದೇವೆ ಎಂದು ಮನೀಷ್ ಪೊಲೀಸರಿಗೆ ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News