ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಇನ್ನೂ ನಮ್ಮೊಂದಿಗೆ ಇದ್ದಾರೆ: ಮಮತಾ ಬ್ಯಾನರ್ಜಿ

Update: 2022-04-30 18:25 GMT

ಹೊಸದಿಲ್ಲಿ, ಎ. 30: ತೃಣಮೂಲ ಕಾಂಗ್ರೆಸ್ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಅವರೊಂದಿಗೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸಲಿದೆ ಎಂದು ಪಕ್ಷದ ವರಿಷ್ಠೆ ಮುತಾ ಬ್ಯಾನರ್ಜಿ ಶನಿವಾರ ಹೇಳಿದ್ದಾರೆ. ಪ್ರಶಾಂತ್ ಕಿಶೋರ್ ಅವರ ಸಂಸ್ಥೆ ಐಪಿಎಸಿಯ ನೆರವು ಪಡೆದುಕೊಂಡು ಪಶ್ಚಿಮಬಂಗಾಳದಲ್ಲಿ ಮತ್ತೆ ಅಧಿಕಾರಕ್ಕೆ ಬಂದಿರುವ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಸೇರುವ ಪ್ರಶಾಂತ್ ಕಿಶೋರ್ ಅವರ ಪ್ರಯತ್ನ ವಿಫಲವಾದ ಬಳಿಕ ಈ ಹೇಳಿಕೆ ನೀಡಿದ್ದಾರೆ.

ಪ್ರಶಾಂತ್ ಕಿಶೋರ್ ಅವರ ಐಪಿಎಸಿ ತೆಲಂಗಾಣದ ಆಡಳಿತಾರೂಢ ಪಕ್ಷ ಹಾಗೂ ತೃಣಮೂಲ ಕಾಂಗ್ರೆಸ್ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಆದುದರಿಂದ ಪ್ರಶಾಂತ್ ಕಿಶೋರ್ ಅವರಿಗೆ ಸೈದ್ಧಾಂತಿಕ ಬದ್ಧತೆಯ ಕೊರತೆ ಇದೆ ಎಂದು ಕಾಂಗ್ರೆಸ್ ನ ಒಂದು ವರ್ಗ ಉಲ್ಲೇಖಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಇದೇ ಕಳವಳವನ್ನು ತೃಣಮೂಲ ಕಾಂಗ್ರೆಸ್ ನ ಹಿರಿಯ ನಾಯಕರು ಎತ್ತಿದ್ದರು. ಆದರೆ, ಪಕ್ಷ ಪ್ರಶಾಂತ್ ಕಿಶೋರ್ ಅವರೊಂದಿಗೆ ಸಂಬಂಧವನ್ನು ಮುಂದುವರಿಸಲಿದೆ ಎಂದು ಸ್ಪಷ್ಟಪಡಿಸಲಾಗಿತ್ತು ಎಂದರು.
  
ತೃಣಮೂಲ ಕಾಂಗ್ರೆಸ್ನಲ್ಲಿ ಅವರ ಪಾತ್ರದ ಬಗ್ಗೆ ವಿಭಿನ್ನ ಅಭಿಪ್ರಾಯ ಇತ್ತು. ಆದರೆ, ಚುನಾವಣಾ ತಂತ್ರಗಾರನಾಗಿ ಅವರೊಂದಿಗೆ ಸಂಬಂಧ ಮಂದವರಿಯಲಿದೆ ಎಂದು ಪಕ್ಷ ಸ್ಪಷ್ಟಪಡಿಸಿತ್ತು ಎಂದು ಅವರು ಹೇಳಿದ್ದಾರೆ. ಪಶ್ಚಿಮಬಂಗಾಳದ ಚುನಾವಣಾ ಪ್ರಚಾರಕ್ಕೆ ಮಮತಾ ಬ್ಯಾನರ್ಜಿ ಅವರಿಂದ ನಿಯೋಜಿತರಾಗಿದ್ದ ಪ್ರಶಾಂತ್ ಕಿಶೋರ್ ಅವರು ತೃಣಮೂಲ ಕಾಂಗ್ರೆಸ್ ಕಳೆದ ವರ್ಷ ಅಭೂತಪೂರ್ವ ಜಯ ಗಳಿಸಿದ ಬಳಿಕವೂ ಪಕ್ಷದಲ್ಲಿ ಕೆಲಸವನ್ನು ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News