×
Ad

ಮುಂಬೈ, ಪುಣೆಯ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿಗಳ ಕಚೇರಿಗಳಿಗೆ ಸಿಬಿಐ ದಾಳಿ

Update: 2022-05-01 00:30 IST

ಹೊಸದಿಲ್ಲಿ,ಎ.30: ಡಿಎಚ್ಎಫ್ಎಲ್-ಯೆಸ್ ಬ್ಯಾಂಕ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮತ್ತು ಪುಣೆಯ ಎಂಟು ಸ್ಥಳಗಳಲ್ಲಿ ಅಶ್ವಿನಿ ಭೋಂಸ್ಲೆ,‌ ಶಾಹಿದ್ ಬಲ್ವಾ ಮತ್ತು ವಿನೋದ ಗೋಯೆಂಕಾ ಸೇರಿದಂತೆ ಕೆಲವು ಪ್ರಮುಖ ರಿಯಲ್ ಉದ್ಯಮಿಗಳ ಕಚೇರಿಗಳ ಮೇಲೆ ಶನಿವಾರ ದಾಳಿ ಮಾಡಿರುವ ಸಿಬಿಐ ಶೋಧ ಕಾರ್ಯಾಚರಣೆಗಳನ್ನು ನಡೆಸಿದೆ.

ಯೆಸ್ ಬ್ಯಾಂಕ್-ಡಿಎಚ್ಎಫ್ಎಲ್ ಸಾಲ ಪ್ರಕರಣದಲ್ಲಿ ಅಕ್ರಮವಾಗಿ ಹಣವನ್ನು ವರ್ಗಾಯಿಸಲು ಈ ಉದ್ಯಮಿಗಳ ಕಂಪನಿಗಳನ್ನು ಬಳಸಲಾಗಿತ್ತು ಎಂದು ಸಿಬಿಐ ಶಂಕಿಸಿದೆ.
ಬಲ್ವಾ ಮತ್ತು ಗೋಯೆಂಕಾ ಅವರನ್ನು ಸಿಬಿಐ ಈ ಹಿಂದೆ 2ಜಿ ಸ್ಪೆಕ್ಟ್ರಂ ಪ್ರಕರಣದಲ್ಲಿ ಆರೋಪಿಗಳನ್ನಾಗಿಸಿತ್ತಾದರೂ ವಿಶೇಷ ನ್ಯಾಯಾಲಯವೊಂದು 2018ರಲ್ಲಿ ಅವರನ್ನು ಖುಲಾಸೆಗೊಳಿಸಿತ್ತು.

ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್, ಡಿಎಚ್ಎಫ್ಎಲ್ ನ ಕಪಿಲ್ ವಾಧ್ವಾನ್ ಮತ್ತು ಇತರರ ವಿರುದ್ಧ 2020ರ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗ ಅವರ ಮೇಲೆ ದಾಳಿ ನಡೆಸಿದೆ.

ಮುಂಬೈ ಮತ್ತು ಪುಣೆಯ ಎಂಟು ಸ್ಥಳಗಳಲ್ಲಿ ಶೋಧಗಳು ನಡೆಯುತ್ತಿವೆ. ಶೋಧಕ್ಕೊಳಗಾಗಿರುವ ವ್ಯಕ್ತಿಗಳ ಪಾತ್ರದ ಬಗ್ಗೆ ಸದ್ಯಕ್ಕೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿಯೋರ್ವರು ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇತ್ತೀಚಿಗೆ ರೇಡಿಯಸ್ ಡೆವಲಪರ್ಸ್ನ ಸಂಜಯ ಛಾಬ್ರಿಯಾರನ್ನು ಬಂಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News