ರೈತರ ಮೇಲೆ ಮುದಿ ಹಸುಗಳ ಅನಗತ್ಯ ಹೊರೆ: ಕರ್ನಾಟಕದಲ್ಲಿ ಗೋಹತ್ಯೆ ಕಾಯ್ದೆ ವಿರುದ್ಧ ಅನ್ನದಾತರ ಆಕ್ರೋಶ

Update: 2022-05-02 10:35 GMT

ಬೆಂಗಳೂರು: ಮೈಸೂರು ಜಿಲ್ಲೆಯ ಸಿಂಧುವಳ್ಳಿ ಸುತ್ತಮುತ್ತಲಿನ ಹಳ್ಳಿಯಲ್ಲೆಲ್ಲಾ ಜಾನುವಾರು ಸತ್ತರೆ ನಂಜಯ್ಯ ಅವರಿಗೆ ಕರೆ ಹೋಗುತ್ತದೆ. ನಂಜಯ್ಯ ಆಸುಪಾಸಿನ ಹಳ್ಳಿಯಲ್ಲಿ ಸತ್ತ ಜಾನುವಾರುಗಳ ಚರ್ಮ ಸುಲಿಯುವುದರಲ್ಲಿ ನುರಿತ ಕೆಲಸಗಾರ. ತಮ್ಮ ಮನೆಯ ಸಮೀಪವಿರುವ ಬಯಲಿನಲ್ಲಿ ಜಾನುವಾರುಗಳ ಚರ್ಮ ಸುಲಿಯುತ್ತಾರೆ. ಅದರಿಂದ ಬರುವ ಆದಾಯ ಅವರ ಜೀವನೋಪಾಯ. ತುರುವಿನ ಚರ್ಮವಾದರೆ 15 ನಿಮಿಷದಲ್ಲಿ ಸುಲಿಯಬಲ್ಲೆ ಎಂದು ಹೇಳುವ ನಂಜಯ್ಯ, ʼಸಂಪೂರ್ಣ ಬಲಿತ ಎತ್ತು ಅಥವ ಕೋಣದ ಚರ್ಮವಾದರೆ, ಸುಲಿಯಲು ಒಂದು ಗಂಟೆಯೂ ಬೇಕಾಗುತ್ತದೆʼ ಎಂದು ಹೇಳುತ್ತಾರೆ. ಕಳೆದ ಎರಡು ದಶಕಗಳಿಂದ ಸಿಂಧುವಳ್ಳಿ ಗ್ರಾಮಸ್ಥರು ನಂಜಯ್ಯ ಅವರ ವೃತ್ತಿಪರತೆಗೆ ಗೌರವ ಸಲ್ಲಿಸುತ್ತಾರೆ. ಗ್ರಾಮದಲ್ಲಿ ಎಲ್ಲೇ ದನ ಸತ್ತು ಬಿದ್ದರೂ ಅದರ ವಿಲೇವಾರಿಗೆ ಗ್ರಾಮ ಪಂಚಾಯತ್‌ ಸದಸ್ಯರು ನನಗೆ ಕರೆ ಮಾಡುತ್ತಾರೆ ಎನ್ನುತ್ತಾರೆ ನಂಜಯ್ಯ. 

ಆದರೆ ಕಳೆದ ವರ್ಷದಲ್ಲಿ ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರವು ಕರ್ನಾಟಕ ಪ್ರಿವೆನ್ಶನ್ ಆಫ್ ಸ್ಲಾಟರ್ ಅಂಡ್ ಪ್ರಿಸರ್ವೇಶನ್ ಆಫ್ ಕ್ಯಾಟಲ್ ಆಕ್ಟ್ 2020 ಅನ್ನು ಜಾರಿಗೊಳಿಸಿದ ನಂತರ ನಂಜಯ್ಯ ಅವರು ಒಂದು ಹಸುವಿನ ಚರ್ಮವನ್ನು ಸುಲಿದಿಲ್ಲ. ಗೋ ರಕ್ಷಣೆಯ ಹೆಸರಿನಲ್ಲಿ ಕಾಯ್ದೆ ಬಂದ ಬಳಿಕ ಸತ್ತ ಹಸುಗಳ ಚರ್ಮವನ್ನು ಸುಲಿಯುವ ಬದಲು ತೆರೆದ ಪಾಳುಭೂಮಿಯಲ್ಲಿ ಕೊಳೆಯಲು ಬಿಡಲು ನನಗೆ ಹೇಳಲಾಯಿತು ಎಂದು ನಂಜಯ್ಯ ಹೇಳುತ್ತಾರೆ.

ಪರಿಶಿಷ್ಟ ಜಾತಿಯ ʼಜಾಡುಮಲ್ಲಿʼ ವರ್ಗಕ್ಕೆ ಸೇರಿದ ನಂಜಯ್ಯ ಕುಟುಂಬ ತಲೆಮಾರುಗಳಿಂದ ಜಾನುವಾರುಗಳ ಚರ್ಮ ಸುಲಿಯುವ ವೃತ್ತಿಯಲ್ಲಿ ತೊಡಗಿಸಿಕೊಂಡಿತ್ತು. ಕರ್ನಾಟಕ ಸರ್ಕಾರದ ವಿವಾದಾತ್ಮಕ ಕಾನೂನು ಜಾರಿಗೆ ಬಂದ ಬಳಿಕ ಹೊಟ್ಟೆಪಾಡು ಕಳೆದುಕೊಂಡವರಲ್ಲಿ ಇವರೂ ಸೇರಿದ್ದಾರೆ.  

ಈ ಕಾನೂನನ್ನು 'ಗೋಮಾಂಸ ನಿಷೇಧ' ಎಂದು ವ್ಯಾಪಕವಾಗಿ ವ್ಯಾಖ್ಯಾನಿಸಲಾಗಿದ್ದರೂ, ಇತರ ರಾಜ್ಯಗಳಿಂದ ಗೋಮಾಂಸ ಸಂಗ್ರಹಣೆ ಮತ್ತು ಸಾಗಣೆಯನ್ನು ಕಾಯಿದೆಯು ನಿರ್ಬಂಧಿಸದ ಕಾರಣ ಕರ್ನಾಟಕದಲ್ಲಿ ಗೋಮಾಂಸ ಇನ್ನೂ ಲಭ್ಯವಿದೆ. ಈ ಕಾನೂನಿಂದಾಗಿ ಬಾಧಿತರಾದವರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಸಣ್ಣ ರೈತರು, ಚರ್ಮದ ಕೆಲಸಗಾರರು ಮತ್ತು ಮಾಂಸ ರಫ್ತು ಉದ್ಯಮಗಳಲ್ಲಿ ತೊಡಗಿರುವ ಜನರು ಸೇರಿದ್ದಾರೆ, ಈ ವೃತ್ತಿಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುವವರು ದಲಿತರು ಮತ್ತು ಮುಸ್ಲಿಮರು. 
 
 ಸಂತೆಗಳಲ್ಲಿ ಮಾರಾಟವಾಗದ ಜಾನುವಾರುಗಳು  

ಮೈಸೂರಿನ ಟಿ ನರಸೀಪುರದ ರೈತ ರಾಮ ಬಸವಯ್ಯ, ಕಳೆದೊಂದು ವರ್ಷದಿಂದ ʼಅನುತ್ಪಾದಕ (ಗೊಡ್ಡು) ಹಸುʼಗಳನ್ನು ಮಾರಾಟ ಮಾಡಲಾಗದೆ ಕಷ್ಟ ಅನುಭವಿಸುತ್ತಿದ್ದಾರೆ. ತನ್ನ ಹಳ್ಳಿಯಲ್ಲಿ ನಡೆಯುವ ಜಾನುವಾರು ಮಾರಾಟದ ಜಾತ್ರೆಗೆ ನಿಯಮಿತವಾಗಿ ಹಾಜರಾಗುವ ಅವರಿಗೆ ತಮ್ಮ ಜಾನುವಾರುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.
 
“ನಮ್ಮ ಜಾತ್ರೆಯಲ್ಲಿ ವ್ಯಾಪಾರ ಗಣನೀಯವಾಗಿ ಕಡಿಮೆಯಾಗಿದೆ. ಅನುತ್ಪಾದಕ ಅಥವಾ ಅನಾರೋಗ್ಯ ಪೀಡಿತ ಹಾಗೂ ಕೃಷಿಗೆ ಉಪಯೋಗವಾಗದ ಜಾನುವಾರುಗಳನ್ನು ಮಾರಾಟ ಮಾಡಲು ಇಲ್ಲಿಗೆ ಬರುತ್ತೇವೆ’ ಎನ್ನುತ್ತಾರೆ ರಾಮ ಬಸವಯ್ಯ.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಮಾತನಾಡಿ, “ಕರ್ನಾಟಕದಾದ್ಯಂತ ಇಂತಹ 2,000 ದನಗಳ ಜಾತ್ರೆಗಳು ನಡೆಯುತ್ತವೆ. ಒಮ್ಮೆ ಗೂಳಿಯಿಂದ ರೈತನಿಗೆ ಉಪಯೋಗವಿಲ್ಲದಿದ್ದರೆ ಅವನು ಅದನ್ನು ಮಾರಬೇಕಾಗುತ್ತದೆ. ಇಲ್ಲದಿದ್ದರೆ, ರೈತನು 6-7 ವರ್ಷಗಳ ಕಾಲ ಅನುತ್ಪಾದಕ ಜಾನುವಾರನ್ನು ಸಾಕಬೇಕಾಗುತ್ತದೆ, ಪ್ರತಿದಿನ ಪ್ರಾಣಿಗಳಿಗೆ ಆಹಾರವನ್ನು ನೀಡಲು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಒಬ್ಬ ರೈತ ಅದನ್ನು ಹೇಗೆ ಭರಿಸಬಲ್ಲ?” ಎಂದು ಕೇಳುತ್ತಾರೆ. 

 ವೀರಸಂಗಯ್ಯನವರ ಅಭಿಪ್ರಾಯವನ್ನು ಮೈಸೂರಿನ ದೊಡ್ಡಕನ್ಯಾ ಗ್ರಾಮದ ಮತ್ತೊಬ್ಬ ರೈತ ರವಿಚಂದ್ರ ಒಪ್ಪುತ್ತಾರೆ. ತನ್ನ ಮನೆಯಲ್ಲಿ ನಾಲ್ಕು ಹಸುಗಳನ್ನು ಸಾಕುತ್ತಿರುವ ಅವರು, ಅವುಗಳನ್ನು ನೋಡಿಕೊಳ್ಳಲು ದಿನಕ್ಕೆ 600 ರೂ. ಖರ್ಚಾಗುವುದಾಗಿ ತಿಳಿಸಿದ್ದಾರೆ. 

"12 ವರ್ಷದ ನಂತರ ಹಸುವನ್ನು ಮಾರಾಟ ಮಾಡುವುದು ಪ್ರಾಯೋಗಿಕ ದೃಷ್ಟಿಕೋನ. ಜಾನುವಾರುಗಳ ಮೇವಿಗಾಗಿ ಖರ್ಚು ಮಾಡಲು ಮತ್ತು ಪ್ರಾಣಿಗಳನ್ನು ನಿಯಮಿತವಾಗಿ ತೊಳೆಯಲು ನನಗೆ ಸಾಧ್ಯವಿಲ್ಲ" ಎಂದು ರವಿಚಂದ್ರ ಹೇಳುತ್ತಾರೆ. 

"ನಾವು ಜಾತ್ರೆಗೆ ಹೋಗುತ್ತೇವೆ ಮತ್ತು ಹಸುವನ್ನು ಮಾರಾಟ ಮಾಡದೆ ಹಿಂತಿರುಗುತ್ತೇವೆ. ಏಕೆಂದರೆ ಈಗ ನೀಡುವ ಬೆಲೆಗಳು ತುಂಬಾ ಕಡಿಮೆಯಾಗಿದೆ" ಎಂದು ಅವರು ಹೇಳುತ್ತಾರೆ.

ಈ ವಿವಾದಿತ ಕಾನೂನು ಜಾರಿಗೊಳಿಸಿದ ಬಳಿಕ ಮಾರುಕಟ್ಟೆಯಲ್ಲಿ ಜಾನುವಾರು ಬೆಲೆ ಕುಸಿತವಾಗಿದೆ ಎಂದು ಮೈಸೂರಿನಲ್ಲಿ ಜಾನುವಾರು ಜಾತ್ರೆಗೆ ಆಗಮಿಸುವ ಮುಸ್ಲಿಂ ವ್ಯಾಪಾರಿಯೊಬ್ಬರು ಹೇಳುತ್ತಾರೆ. ವಾರದ ಸಂತೆಗಳಲ್ಲಿ ಹಸುಗಳನ್ನು ಖರೀದಿಸುವ ಅನೇಕ ವ್ಯಾಪಾರಿಗಳು ಅವುಗಳನ್ನು ಕಸಾಯಿಖಾನೆಗಳು ಮತ್ತು ಮಾಂಸದ ಅಂಗಡಿಗಳಿಗೆ ಕೊಂಡೊಯ್ಯುತ್ತಾರೆ, ಇದು ರೈತರಿಗೆ ಲಾಭದಾಯಕವಾದ ಆರ್ಥಿಕ ಕೊಂಡಿಯನ್ನು ರೂಪಿಸುತ್ತದೆ ಎಂದು ಅವರು ಹೇಳುತ್ತಾರೆ. 

“ನಾನು ಜಾನುವಾರುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದೆ. ಕೃಷಿ ಕೆಲಸಕ್ಕಾಗಿ ರೈತರಿಗೆ ಮಾರಾಟ ಮಾಡುತ್ತಿದ್ದೆ ಅಥವಾ ಮಾಂಸದ ಅಂಗಡಿಗಳು ಅಥವಾ ಕಸಾಯಿಖಾನೆಗಳಿಗೆ ಮಾರಾಟ ಮಾಡುತ್ತಿದ್ದೆ. ಆದರೆ ಈಗ, ಹೊಸ ಕಾನೂನು ಜಾರಿಗೆ ಬಂದಿರುವುದರಿಂದ ನಾನು ಜಾನುವಾರು ಸಂತೆಗಳಲ್ಲಿ ವ್ಯಾಪಾರ ಮಾಡುವುದನ್ನು ನಿಲ್ಲಿಸಿದ್ದೇನೆ ”ಎಂದು ಹೆಸರು ಹೇಳಲು ಇಚ್ಛಿಸದ ವ್ಯಾಪಾರಿ ಒಬ್ಬರು ಹೇಳುತ್ತಾರೆ. 

ಜಾನುವಾರುಗಳನ್ನು ಸಾಗಿಸುವ ಅಥವಾ ಮಾರಾಟ ಮಾಡುವ ಮುಸ್ಲಿಮರ ಮೇಲೆ ಹಿಂದುತ್ವ ಗುಂಪುಗಳ ದಾಳಿಯು ಅವರನ್ನು ಜಾನುವಾರು ಜಾತ್ರೆಗಳಿಂದ ದೂರವಿರುವಂತೆ ಮಾಡಿದೆ. ಈ ಕಾಯ್ದೆ ಬಳಿಕ ಗೋರಕ್ಷಣೆ ಎಂದು ಹೇಳಿ ದಾಳಿ ಮಾಡುವ ಹಿಂದುತ್ವ ಪಡೆಗಳಿಗೆ ಅಧಿಕೃತ ಶಕ್ತಿ ಸಿಕ್ಕಂತಾಗಿದೆ. 
 
“ನಾವು ಕೃಷಿ ಉದ್ದೇಶಗಳಿಗಾಗಿ ಹಸುಗಳ ವ್ಯಾಪಾರವನ್ನು ಮುಂದುವರಿಸಲು ಬಯಸಿದ್ದೇವೆ ಏಕೆಂದರೆ ಅದಕ್ಕೆ ಇನ್ನೂ ಅನುಮತಿ ಇದೆ. ಆದರೆ ಗೋವುಗಳನ್ನು ಸಾಗಿಸುವ ಮುಸ್ಲಿಮರ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿರುವಾಗ ವ್ಯಾಪಾರ ಮಾಡುವುದು ಈಗ ಕಷ್ಟಕರವಾಗಿದೆ, ”ಎಂದು ವ್ಯಾಪಾರಿ ಹೇಳಿದ್ದಾರೆ.

 ಜಾನುವಾರು ಸಾಗಾಟಗಾರರನ್ನೇ ಟಾರ್ಗೆಟ್‌ ಮಾಡುತ್ತಿರುವ ಹಿಂದುತ್ವ ಗುಂಪುಗಳು

 ಕಳೆದ ವರ್ಷ ಮಾರ್ಚ್‌ ನಲ್ಲಿ, ಗೋಹತ್ಯೆ ನಿಷೇಧಿಸಿ ಕಾನೂನು ಬಂದ ಒಂದೇ ತಿಂಗಳಲ್ಲಿ, ಬೆಳ್ತಂಗಡಿಯಲ್ಲಿ ಮಹಮ್ಮದ್‌ ಮುಸ್ತಫಾ ಹಾಗೂ ಅಬ್ದುಲ್‌ ರಹಮಾನ್‌ ಎಂಬವರ ಖಾಲಿ ವಾಹನಗಳನ್ನು ತಡೆದು ನಿಲ್ಲಿಸಿದ ಬಜರಂಗದಳ ಕಾರ್ಯಕರ್ತು, ವಾಹನದಲ್ಲಿ ಜಾನುವಾರುಗಳಿಲ್ಲದಿದ್ದರೂ ಗೋಕಳ್ಳರು ಎಂದು ಆರೋಪಿಸಿ ಹಲ್ಲೆ ನಡೆಸಿದ್ದರು. ವಾಹನದಲ್ಲಿ ಏನೂ ಇಲ್ಲ ಎಂದು ಪರಿಪರಿಯಾಗಿ ವಿನಂತಿಸಿಕೊಂಡರೂ ಮುಸ್ಲಿಮರು ದನಗಳ್ಳರು ಎಂದು ಕಿರುಚಾಡುತ್ತಾ ಸುಮಾರು 25 ರಷ್ಟಿದ್ದ ಗೂಂಡಾಗಳು ಹಲ್ಲೆ ನಡೆಸಿದ್ದರು ಎಂದು ಮರ್ದನಕ್ಕೊಳಗಾದ ರಹ್ಮಾನ್‌ ಅಂದಿನ ಘಟನೆಯನ್ನು ಮೆಲುಕು ಹಾಕುತ್ತಾರೆ.

ಇನ್ನೊಂದು ಪ್ರಕರಣ, ಜನವರಿ 2021 ರಲ್ಲಿ,  ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಿಂದ ಮಂಗಳೂರಿಗೆ 12 ಹಸುಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕ ಅಬಿದ್ ಅಲಿ ಅವರನ್ನು ಮಾರ್ಗಮಧ್ಯೆ ಹಿಂದುತ್ವ ತಂಡವು ಥಳಿಸಿತು. ''ಕೃಷಿ ಉದ್ದೇಶಕ್ಕಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬುದಕ್ಕೆ ನನ್ನ ಬಳಿ ದಾಖಲೆಗಳಿವೆ. ಆದರೆ ಐದು ಜನರ ಗುಂಪೊಂದು ನನ್ನನ್ನು ತಡೆದು ರಸ್ತೆಯ ಮೇಲೆ ಹಲ್ಲೆ ನಡೆಸಿತು” ಎಂದು ಅಬಿದ್ ಅಲಿ ದಿ ನ್ಯೂಸ್‌ ಮಿನಿಟ್‌ ಗೆ ತಿಳಿಸಿದ್ದಾರೆ. ಅಬಿದ್ ಅವರನ್ನು ಸ್ಥಳೀಯರ ನೆರವಿನಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಒಬ್ಬನನ್ನು ಬಂಧಿಸಲಾಗಿತ್ತು. 
 
ತನ್ನ ಮೇಲೆ ದಾಳಿ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುವಲ್ಲಿ ಯಶಸ್ವಿಯಾದರೂ, ಅಬಿದ್ ಅದೃಷ್ಟ ಕೈಕೊಟ್ಟಿತು. ಜಾನುವಾರು ಸಾಗಾಟಕ್ಕೆ ಪೊಲೀಸರಿಂದ ಬಂಧನಕ್ಕೊಳಗಾದರು. ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಪ್ರಕಾರ, 2020 ರಲ್ಲಿ ಕರ್ನಾಟಕದಲ್ಲಿ ದನದ ವ್ಯಾಪಾರಕ್ಕೆ ಸಂಬಂಧಿಸಿದ ಪ್ರಕರಣಗಳಿಗಾಗಿ 500 ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.
 
ಸ್ವಯಂ ಘೋಷಿತ 'ಗೋ ರಕ್ಷಕ'ರಿಂದಾಗಿ ಕಾನೂನುಬದ್ಧ ಉದ್ದೇಶಗಳಿಗಾಗಿಯೂ ಸಹ ದನಗಳನ್ನು ಸಾಗಿಸುವುದು ಅಪಾಯವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಏಕೆಂದರೆ, ಹೊಸ ಕಾನೂನು ಶಂಕಿತ ಜಾನುವಾರು ಸಾಗಣೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡುವ ವ್ಯಕ್ತಿಗಳನ್ನು ರಕ್ಷಿಸುತ್ತದೆ. 

“ಒಂದೆಡೆ, ಅವರು (ವ್ಯಾಪಾರಿಗಳು) ಜಾನುವಾರುಗಳಿಗೆ ಹಣ ಪಾವತಿಸಿದ್ದಾರೆ ಮತ್ತು ಇನ್ನೊಂದು ಕಡೆ ಅವರು ನ್ಯಾಯಕ್ಕೆ ಯಾವುದೇ ಭದ್ರತೆ ಇಲ್ಲದೆ ಜಾನುವಾರುಗಳನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಾರೆ. ಈ ನಿರ್ದಿಷ್ಟ ಸಮಸ್ಯೆಯಿಂದಾಗಿ ಅನೇಕ ಜನರು ಜಾನುವಾರುಗಳನ್ನು ಖರೀದಿಸುವುದನ್ನು ಸಹ ತ್ಯಜಿಸಿದ್ದಾರೆ ಮತ್ತು ಇದರಿಂದಾಗಿ ರೈತರು ನೇರ ಹೊಡೆತಕ್ಕೆ ಒಳಗಾಗುತ್ತಾರೆ ” ಎಂದು ಸಂಶೋಧಕರಾದ ಸಿದ್ದಾರ್ಥ್ ಜೋಶಿ ಮತ್ತು ಸಿಲ್ವಿಯಾ ಕರ್ಪಗಂ ಅವರ ಗೋಹತ್ಯೆ ವಿರೋಧಿ ಕಾನೂನಿನ ಪರಿಣಾಮದ ಬಗೆಗಿನ ವರದಿ ಹೇಳಿದೆ. 
 
 ಗೋಶಾಲೆಗಳ ಸಮಸ್ಯೆ

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಗೋಶಾಲೆಗಳನ್ನು ಸ್ಥಾಪಿಸುವ ಮೂಲಕ ರೈತರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಯೋಜಿಸಿದ್ದರೂ, ಸೆಪ್ಟೆಂಬರ್ 2021 ರಲ್ಲಿ ಲಭಿಸಿದ ಆರ್‌ಟಿಐ ಉತ್ತರವು, ಕಾನೂನನ್ನು ಜಾರಿಗೊಳಿಸಿದ ಮೊದಲ ಒಂಬತ್ತು ತಿಂಗಳಿನಲ್ಲಿ ಯಾವುದೇ ಸರ್ಕಾರಿ ಗೋಶಾಲೆಗಳನ್ನು ತೆರೆಯಲಾಗಿಲ್ಲ ಎಂದು ಹೇಳುತ್ತದೆ. 
ಮಾರ್ಚ್ 2022 ರಲ್ಲಿ, ಕರ್ನಾಟಕ ಹೈಕೋರ್ಟ್ ರಾಜ್ಯದಲ್ಲಿ ಬಿಡಾಡಿ ದನಗಳನ್ನು ನೋಡಿಕೊಳ್ಳಲು ಗೋಶಾಲೆಗಳನ್ನು ಸ್ಥಾಪಿಸುವ ಬಗ್ಗೆ ರಾಜ್ಯ ಸರ್ಕಾರ ಸಲ್ಲಿಸಿದ ಅಫಿಡವಿಟ್‌ನಿಂದ ತೃಪ್ತವಾಗಿಲ್ಲ ಎಂದು ಹೇಳಿದೆ. 

ರಾಜ್ಯ ಸರ್ಕಾರವು 188 ಸರ್ಕಾರೇತರ ಗೋಶಾಲೆಗಳಿಗೆ ಪ್ರಾಣಿಗಳನ್ನು ಬಿಡಲು ರೈತರನ್ನು ಕೇಳಿದೆ. ಹೊಸ ಕಾನೂನಿನಡಿಯಲ್ಲಿ ಪೊಲೀಸರು ವಶಪಡಿಸಿಕೊಂಡ ಜಾನುವಾರುಗಳನ್ನು ತೆಗೆದುಕೊಳ್ಳುವ ರಾಜ್ಯದ ಖಾಸಗಿ ಗೋಶಾಲೆಗಳು, ಹೆಚ್ಚುವರಿ ಗೋವುಗಳ ಆರೈಕೆಗಾಗಿ ರಾಜ್ಯ ಸರ್ಕಾರದಿಂದ ಸಿಗುವ ನೆರವು ಜಾನುವಾರುಗಳ ನಿರ್ವಹಣೆಯ ವೆಚ್ಚವನ್ನು ಭರಿಸುವುದಿಲ್ಲ ಎಂದು ಹೇಳಿವೆ.
 
ಗೋಶಾಲೆಗಳಲ್ಲಿ ಜಾನುವಾರು ನಿರ್ವಹಣೆಗೆ ರಾಜ್ಯ ಸರ್ಕಾರ ದಿನಕ್ಕೆ ಹಸುವೊಂದಕ್ಕೆ ರೂ. 70 ನಿಗದಿಪಡಿಸಿದೆ. ಆದರೆ, ಸರ್ಕಾರ ನೀಡುತ್ತಿರುವುದು ಕೇವಲ ರೂ. 17.50. ಮಾತ್ರ. ಇದರಿಂದ ಖರ್ಚು ಸರಿದೂಗಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಗೋಶಾಲೆ ಪಾಲಕರು. 

"ಆದರೆ ನಾವು ಒಂದು ಹಸುವನ್ನು ನಿರ್ವಹಿಸಲು ಹುಲ್ಲು ಮತ್ತು ಜಾನುವಾರುಗಳ ಮೇವು ಖರೀದಿಸಲು ದಿನಕ್ಕೆ 200 ರೂಪಾಯಿಗಳನ್ನು ಖರ್ಚು ಮಾಡುತ್ತೇವೆ" ಎಂದು ಮೈಸೂರಿನಲ್ಲಿ ಗೋಶಾಲೆ ನಿರ್ವಹಿಸುವ ಜೈನ ಸಮುದಾಯದ ಪಿಂಜ್ರಾಪೋಲ್ ಸೊಸೈಟಿಯ ಕಾರ್ಯದರ್ಶಿ ವಿನೋದ್ ಖಾಬಿಯಾ ಹೇಳುತ್ತಾರೆ. ಅವರು ಸುಮಾರು 4,000 ಗೋವುಗಳನ್ನು ಸಾಕುತ್ತಿದ್ದಾರೆ.

 “ಕಾಯ್ದೆ ಜಾರಿಯಾದ ನಂತರ ನಮ್ಮ ಆಶ್ರಯದಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಿದೆ ಆದರೆ ಅವುಗಳನ್ನು ನೋಡಿಕೊಳ್ಳಲು ಸರ್ಕಾರ ನೀಡಿದ ನೆರವು ಸಾಕಾಗುವುದಿಲ್ಲ. ನಾವು ಮಾಡುತ್ತಿರುವುದು ಸರ್ಕಾರದ ಕೆಲಸ ಆದರೆ ಹೆಚ್ಚಿನ ಹಣವನ್ನು ಸಂಗ್ರಹಿಸದೆ ನಾವು ಮುಂದುವರಿಯಲು ಸಾಧ್ಯವಿಲ್ಲ, ”ಎಂದು ವಿನೋದ್ ಹೇಳುತ್ತಾರೆ.

ರಾಮ ಬಸವ, ರವಿಚಂದ್ರ ಅವರಂತಹ ರೈತರು ಗೋಶಾಲೆಗಳಿಗೆ ಹಸ್ತಾಂತರಿಸುವುದಕ್ಕಿಂತ ಹಸುಗಳನ್ನು ಮಾರಲು ಆದ್ಯತೆ ನೀಡುತ್ತೇವೆ ಎಂದು ಹೇಳುತ್ತಾರೆ. “ನಾವು ಹಸುಗಳನ್ನು ಗೋಶಾಲೆಗಳಿಗೆ ಉಚಿತವಾಗಿ ನೀಡಲು ಸಾಧ್ಯವಿಲ್ಲ. ಅವುಗಳನ್ನು ಖರೀದಿಸಲು ವ್ಯಯಿಸಿದ ಹಣದಲ್ಲಿ ಒಂದು ಭಾಗವನ್ನಾದರೂ ಸರಿದೂಗಿಸಬೇಕು’ ಎನ್ನುತ್ತಾರೆ ರವಿಚಂದ್ರ. 

'ಶೀಘ್ರದಲ್ಲೇ ನಮ್ಮ ಹಸುಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಈ ಕಾಯಿದೆಯನ್ನು ಬೆಂಬಲಿಸುವವರಿಗೆ ಬೇಕಾಗಿರುವುದು ಇದೇನಾ?' ಎಂದು ರವಿಚಂದ್ರ ಪ್ರಶ್ನಿಸುತ್ತಾರೆ.

Writer - ಪ್ರಜ್ವಲ್‌ ಭಟ್ (Thenewsminute.com)

contributor

Editor - ಪ್ರಜ್ವಲ್‌ ಭಟ್ (Thenewsminute.com)

contributor

Similar News