×
Ad

ಜೋಧ್ ಪುರ: 2 ಸಮುದಾಯಗಳ ನಡುವೆ ಘರ್ಷಣೆ, ಇಂಟರ್ನೆಟ್ ಸ್ಥಗಿತ

Update: 2022-05-03 09:27 IST
Image Source : INDIA TV

ಜೈಪುರ: ಜಲೋರಿ ಗೇಟ್ ಪ್ರದೇಶದಲ್ಲಿ ಧ್ವಜಾರೋಹಣ ಮಾಡುವ ಕುರಿತಾಗಿ ಉಂಟಾದ ವಿವಾದದ ನಂತರ ಈದ್‌ಗೆ ಮುನ್ನ ಸೋಮವಾರ ರಾತ್ರಿ ರಾಜಸ್ಥಾನದ ಜೋಧ್‌ಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನರು ವದಂತಿಗಳನ್ನು ಹರಡುವುದನ್ನು ತಡೆಯಲು ಜೋಧ್‌ಪುರದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಹಾಗೂ  ಈದ್ ನಮಾಝ್ ಗೆ ಪೊಲೀಸ್ ರಕ್ಷಣೆ ಒದಗಿಸಲಾಗಿದೆ.

ಜೋಧ್‌ಪುರದಲ್ಲಿ ಮೂರು ದಿನಗಳ ಪರಶುರಾಮ ಜಯಂತಿ ಉತ್ಸವವೂ ನಡೆಯುತ್ತಿದೆ ಹಾಗೂ  ಎರಡೂ ಸಮುದಾಯಗಳು ಹಾಕಿರುವ ಧಾರ್ಮಿಕ ಧ್ವಜಗಳು ಘರ್ಷಣೆಗೆ ಕಾರಣವಾಯಿತು.

ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು ಹಾಗೂ  ಗುಂಪನ್ನು ಚದುರಿಸಲು ಲಾಠಿ ಬಳಸಿದರು. ಗುಂಪೊಂದು  ಪ್ರದೇಶದ ಸ್ಥಳೀಯ ಪೊಲೀಸ್ ಪೋಸ್ಟ್‌ನ ಮೇಲೂ ದಾಳಿ ನಡೆಸಿತು.

ಮಂಗಳವಾರ ಮುಂಜಾನೆ ಕಲ್ಲು ತೂರಾಟದಲ್ಲಿ ಕನಿಷ್ಠ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

"ಕಲ್ಲು ತೂರಾಟದಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರದೇಶದಲ್ಲಿ ಭಾರೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ" ಎಂದು ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪರಿಸ್ಥಿತಿ ಉದ್ವಿಗ್ನವಾಗಿದ್ದು  ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಶಾಂತಿ ಕಾಪಾಡುವಂತೆ ಜೋಧ್ ಪುರ ಜನರಿಗೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News