ತಂದೆಯ ಅಂತಿಮ ಇಚ್ಛೆ ಈಡೇರಿಸಲು ಈದ್ಗಾಗೆ ಜಮೀನು ದಾನ ನೀಡಿದ ಸೋದರಿಯರು

Update: 2022-05-05 02:35 GMT
ಫೋಟೊ ಕೃಪೆ : Amar Ujala 

ಡೆಹ್ರಾಡೂನ್, ಎ.21: ಧಾರ್ಮಿಕ ಸೌಹಾರ್ದತೆಗೆ ಉಜ್ವಲ ನಿದರ್ಶನವಾಗಿ, ಪವಿತ್ರ ಈದುಲ್ ಫಿತ್ರ್ ಹಬ್ಬಕ್ಕೆ ಕೆಲವೇ ದಿನಗಳ ಮೊದಲು ಇಬ್ಬರು ಹಿಂದೂ ಸೋದರಿಯರು ಅನಿತಾ (62) ಹಾಗೂ ಸರೋಜ್ (57) ಅವರು 2.1 ಎಕರೆ ಜಮೀನನ್ನು (1.2 ಕೋಟಿ ರೂ.), ಉತ್ತರಾಖಂಡದ ಕಾಶಿಪುರದ ಈದ್ಗಾವೊಂದಕ್ಕೆ ದಾನವಾಗಿ ನೀಡಿದ್ದಾರೆ. 

ಕೃಷಿಕರಾದ ತಮ್ಮ ತಂದೆ ಲಾಲಾ ಬ್ರಜ್ನಂದನ್ ರಸ್ತೋಗಿ ಅವರ ಕೊನೆಯ ಇಚ್ಚೆಯನ್ನು ಈಡೇರಿಸಲು 2003ರಲ್ಲಿ ಅವರು ಈ ಜಮೀನನ್ನು ಈದ್ಗಾಗೆ ನೀಡಿದ್ದಾರೆಂದು ಆಂಗ್ಲ ದಿನಪತ್ರಿಕೆಯೊಂದು ವರದಿ ಮಾಡಿದೆ. ಅನಿತಾ ಅವರು ಪ್ರಸ್ತುತ ದಿಲ್ಲಿಯಲ್ಲಿ ವಾಸವಾಗಿದ್ದರೆ, ಅನಿತಾ ಮೀರತ್ನಲ್ಲಿ ನೆಲೆಸಿದ್ದಾರೆ.

ರಸ್ತೋಗಿ ಅವರ ನಿಧನದ ಬಳಿಕ, ಅವರ ಕೆಲವು ಬಂಧುಗಳು ಈ ಇಬ್ಬರು ಸಹೋದರಿಯರಿಗೆ ಅವರ ತಂದೆ ತನ್ನ ಜಮೀನನ್ನು ಮುಸ್ಲಿಂ ಬಾಂಧವರಿಗೆ ನೀಡಲು ಬಯಸಿದ್ದರೆಂಬ ವಿಷಯವನ್ನು ತಿಳಿಸಿದ್ದಾರೆ.

ಈದುಲ್ ಫಿತ್ರ್‌ ಗೆ ಎರಡು ದಿನ ಮೊದಲು ಅನಿತಾ ಹಾಗೂ ಸರೋಜ್ ಅವರು ಈದ್ಗಾಗೆ ಜಮೀನು ಹಸ್ತಾಂತರದ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದರು. ಈಗಲೂ ಕಾಶಿಪುರದಲ್ಲಿ ವಾಸಿಸುತ್ತಿರುವ ತಮ್ಮ ಸಹೋದರ ರಾಕೇಶ್ನಿಂದ ಅವರು ನೆರವನ್ನು ಕೋರಿದ್ದರು.

‘‘ನನ್ನ ತಂದೆ ಕೋಮುಸೌಹಾರ್ದತೆಯಲ್ಲಿ ಗಾಢವಾದ ನಂಬಿಕೆಯನ್ನಿರಿಸಿದ್ದರು. ಈದುಲ್‌ ಫಿತ್ರ್‌ ನಂತಹ ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ನಮಾಝ್ ಸಲ್ಲಿಸುವುದಕ್ಕೆ ಅನುಕೂಲವಾಗಲು ಅವರು ತನ್ನ ಜಮೀನನ್ನು ದೇಣಿಗೆಯಾಗಿ ನೀಡಲು ಬಯಸಿದ್ದರು. ನನ್ನ ಸಹೋದರಿಯರು ಅವರ ಈ ಇಚ್ಛೆಯನ್ನು ಈಡೇರಿಸಿದ್ದಾರೆ’’ ಎಂದು ರಾಕೇಶ್ ಸಂತಸ ವ್ಯಕ್ತಪಡಿಸಿದ್ದಾರೆ.

ಕಾಶೀಪುರ ಈದ್ಗಾ ಸಮಿತಿ ಅಧ್ಯಕ್ಷ ಹಸೀನ್ ಖಾನ್ ಅವರು ರಸ್ತೋಗಿ ಪುತ್ರಿಯರ ಔದಾರ್ಯವನ್ನು ಶ್ಲಾಘಿಸಿದ್ದಾರೆ. ‘‘ರಸ್ತೋಗಿ ಅವರು ಜೀವಂತವಿದ್ದಾಗ ಎಲ್ಲಾ ಮುಖ್ಯ ಸಂದರ್ಭಗಳಲ್ಲಿ ನಾವು ಅವರಿಂದಲೇ ಮೊತ್ತ ಮೊದಲಿಗೆ ದೇಣಿಗೆಯನ್ನು ಪಡೆಯುತ್ತಿದ್ದೆವು. ಅವರು ಯಾವಾಗಲೂ ಉದಾರವಾಗಿ ಹಣವನ್ನು ನೀಡುತ್ತಿದ್ದರು. ಮುಸ್ಲಿಂ ಶ್ರದ್ಧಾಳುಗಳಿಗೆ ಅವರು ಹಣ್ಣುಗಳನ್ನು ಹಾಗೂ ಸಿಹಿತಿಂಡಿಗಳನ್ನು ಹಂಚುತ್ತಿದ್ದರು. ರಸ್ತೋಗಿಯವರ ನಿಧನದ ಬಳಿಕ ಅವರ ಪುತ್ರ ಅವರು ಕಾರ್ಯಕ್ರಮಗಳಿಗೆ ದೇಣಿಗೆ ನೀಡುವ ಮೊದಲಿಗರಾಗಿದ್ದಾರೆ. ಲಾಲಾ ಹಾಗೂ ನನ್ನ ತಂದೆ ಮೊಹಮ್ಮದ್ ರಝಾ ಖಾನ್ ಅವರು ಸುಮಾರು 50 ವರ್ಷಗಳಿಂದ ಮಿತ್ರರಾಗಿದ್ದರು. ಅವರಿಬ್ಬರೂ ಈಗಿಲ್ಲ. ಆದರೆ ಅವರ ಭ್ರಾತೃತ್ವದ ನಂಬಿಕೆಯು ನಮಗೆ ಬಹಳಷ್ಟನ್ನು ಕಲಿಸಿಕೊಟ್ಟಿದೆ ಎಂದರು.

ಖಾನ್ ಮಾತ್ರವಲ್ಲದೆ, ಕಾಶಿಪುರದ ಮುಸ್ಲಿಮರೆಲ್ಲರೂ ರಸ್ತೋಗಿಯವರನ್ನು ಗೌರವಿಸುತ್ತಿದ್ದರು ಹಾಗೂ ಈದ್ ದಿನದಂದು ಅವರಿಂದ ಆಶೀರ್ವಾದಗಳನ್ನು ಕೋರುತ್ತಿದ್ದರು. ಕಾಶೀಪುರ ನಗರದಲ್ಲಿ ಕೋಮು ಸೌಹಾರ್ದತೆ ಹಾಗೂ ಸಹೋದರತೆಯ ಭಾವನೆ ನೆಲೆಸಿದೆ. ಪ್ರತಿಯೊಂದು ಧರ್ಮದವರೂ ಇನ್ನೊಂದು ಧರ್ಮದವರ ಜೊತೆ ಸಹಿಷ್ಣುತೆನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಖಾನ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News