ಹೈದರಾಬಾದ್: ಮುಸ್ಲಿಂ ಯುವತಿಯನ್ನು ವಿವಾಹವಾಗಿದ್ದ ದಲಿತ ಯುವಕನ ಹತ್ಯೆ

Update: 2022-05-05 12:07 GMT

ಹೈದರಾಬಾದ್: ಕುಟುಂಬದ ವಿರೋಧದ ನಡುವೆ ಮುಸ್ಲಿಂ ಸಮುದಾಯದ ಯುವತಿಯೊಬ್ಬಳನ್ನು ವರಿಸಿದ್ದಕ್ಕಾಗಿ  26 ವರ್ಷದ ದಲಿತ ಯುವಕ ಬಿಲ್ಲಿಪುರಂ ನಾಗರಾಜು ಎಂಬಾತನನ್ನು ಬುಧವಾರ ರಾತ್ರಿ ಹೈದರಾಬಾದ್ ನಗರದ ಸಾರೂರ್‍ನಗರ್ ಎಂಬಲ್ಲಿ ವಾಹನ ದಟ್ಟಣೆಯ ರಸ್ತೆಯಲ್ಲಿ ಯುವತಿಯ ಸಂಬಂಧಿಕರು ಇರಿದು ಹತ್ಯೆಗೈದ ಘಟನೆ ನಡೆದಿದೆ ಎಂದು thenewsminute.com ವರದಿ ಮಾಡಿದೆ.

ದಂಪತಿ ತಮ್ಮ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದಾಗ ಯುವತಿಯ ಸಹೋದರ ಮತ್ತು ಇನ್ನೋರ್ವ ಸಂಬಂಧಿ ಅವರನ್ನು ಹಿಂಬಾಲಿಸಿ ನಂತರ ಅವರ ದ್ವಿಚಕ್ರ ವಾಹನಕ್ಕೆ ಅಡ್ಡ ನಿಂತು ಯುವಕನ ತಲೆಗೆ ಕಬ್ಬಿಣದ ರಾಡಿನಿಂದ ಥಳಿಸಿ ನಂತರ ಚೂರಿಯಿಂದ ಇರಿದಿದ್ದರು. ಈ ಸಂದರ್ಭ ಯುವತಿಗೂ ಗಾಯಗಳಾಗವೆ.

ದಾರಿಹೋಕರು ತಡೆಯಲು ಯತ್ನಿಸಿದರೂ ಅವರನ್ನೂ ಬೆದರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯಲ್ಲಿ ನಾಗರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಪರಿಶಿಷ್ಟ ಜಾತಿಗೆ ಸೇರಿದ ಮಾಲಾ ಸಮುದಾಯಕ್ಕೆ ಆತ ಸೇರಿದ್ದ ಎಂದು thenewsminute.com ವರದಿ ಮಾಡಿದೆ.

ಮೃತ ಯುವಕನ ಪತ್ನಿ ಸಯೀದ್ ಆಶ್ರಿನ್ ಸುಲ್ತಾನ ಹೇಳುವಂತೆ ಈ ದಾಳಿಯಲ್ಲಿ ಐದು ಮಂದಿ ಭಾಗಿಯಾಗಿದ್ದರು. ತಾವಿಬ್ಬರೂ ಹತ್ತನೇ ತರಗತಿಯಿಂದಲೇ ಪರಿಚಿತರು, ವಿವಾಹ ಪ್ರಸ್ತಾಪವನ್ನು ನನ್ನ ಕುಟುಂಬದ ಮುಂದಿಟ್ಟರೂ ನಿರಾಕರಿಸಲಾಯಿತು ಎಂದು ಆಕೆ ಹೇಳಿದ್ದಾರೆ. "ಇಸ್ಲಾಂಗೆ ಮತಾಂತರಗೊಳ್ಳುತ್ತೇನೆ ಎಂದು ಆತ ಹೇಳಿದರೂ ಒಪ್ಪಲಿಲ್ಲ,'' ಎಂದು ಆಶ್ರಿನ್ ಹೇಳಿದ್ದಾಳೆ.

ನಾಗರಾಜು ರಂಗಾರೆಡ್ಡಿ ಜಿಲ್ಲೆಯ ಮಾರ್ಪಲ್ಲೆ ಎಂಬಲ್ಲಿಯವನಾಗಿದ್ದರೆ ಆಶ್ರಿನ್ ನೆರೆಯ ಘನಾಫುರ್ ಗ್ರಾಮದವಳು. ಯುವತಿಯ ಕುಟುಂಬದ ವಿರೋಧದ ಹೊರತಾಗಿ ಇಬ್ಬರೂ ಹೈದರಾಬಾದ್‍ನಲ್ಲಿ ಈ ವರ್ಷದ ಜನವರಿ 31ರಂದು ಆರ್ಯ ಸಮಾಜ ಪದ್ಧತಿಯಂತೆ ವಿವಾಹವಾಗಿ ನಂತರ ಸರೂರ್‍ನಗರದ ಪಂಜಲ ಅನಿಲ್ ಕುಮಾರ್ ಕಾಲನಿಯಲ್ಲಿ ವಾಸಿಸುತ್ತಿದ್ದರು. ನಾಗರಾಜು ಕಾರು ಶೋರೂಂನಲ್ಲಿ ಸೇಲ್ಸ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಯುವತಿಯ ಕುಟುಂಬ ತಮ್ಮ ಮೇಲೆ ಕಣ್ಣಿಟ್ಟಿದೆ ಎಂದು ತಿಳಿಯುತ್ತಲೇ ದಂಪತಿ ಕೆಲ ಕಾಲ ವಿಶಾಖಪಟ್ಣಂಗೆ ತೆರಳಿದ್ದರಲ್ಲದೆ ಐದು ದಿನಗಳ ಹಿಂದೆಯಷ್ಟೇ ಹೈದರಾಬಾದ್‍ಗೆ ಆಗಮಿಸಿದ್ದರು.

ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದು ಬೇರೆ ಸಮುದಾಯದ ಹುಡುಗನನ್ನು ವರಿಸಿದ್ದೇ ಈ ಹತ್ಯೆಗೆ ಕಾರಣ ಎಂದು ತಿಳಿಸಿದ್ದಾರೆ.

ಸಂತ್ರಸ್ತನಿಗೆ ನ್ಯಾಯ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಜೈ ಶ್ರೀ ರಾಮ್ ಘೋಷಣೆ ಕೂಗಿದಾಗ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು. ಹಂತಕರನ್ನು ಶೀಘ್ರ ಬಂಧಿಸಬೇಕೆಂದೂ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News