ಭೀಮಾ ಕೋರೆಗಾಂವ್ ಪ್ರಕರಣ: ಹಿಂದುತ್ವ ನಾಯಕ ಸಂಭಾಜಿ ಭಿಡೆ ವಿರುದ್ಧದ ಕೇಸ್ ಕೈಬಿಟ್ಟ ಮಹಾರಾಷ್ಟ್ರ ಪೊಲೀಸರು

Update: 2022-05-05 12:57 GMT
ಸಂಭಾಜಿ ಭಿಡೆ (PTI)

ಮುಂಬೈ: ಮಹಾರಾಷ್ಟ್ರ ಪೊಲೀಸರು ಹಿಂದುತ್ವ ನಾಯಕ ಸಂಭಾಜಿ ಭಿಡೆ ಹೆಸರನ್ನು 2018 ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಿಂದ ಕೈಬಿಟ್ಟಿದ್ದಾರೆ. ಈ ಪ್ರಕರಣದಲ್ಲಿ ಭಿಡೆ ಅವರ ಪಾತ್ರವಿಲ್ಲ ಎಂದು ಕಂಡುಕೊಳ್ಳಲಾಗಿದೆ ಎಂದು ಮಹಾರಾಷ್ಟ್ರ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಪೊಲೀಸರು ತಿಳಿಸಿದ್ದಾರೆ ಎಂದು PTI ವರದಿ ಮಾಡಿದೆ.

"ಅವರ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲಿಯ ತನಕ ದೊರಕದೇ ಇರುವುದರಿಂದ ಅವರ ಹೆಸರನ್ನು ಚಾರ್ಜ್‍ಶೀಟ್‍ನಲ್ಲಿ ಸೇರಿಸಲಾಗಿಲ್ಲ,'' ಎಂದು ಪೊಲೀಸರು ಹೇಳಿದ್ದಾರೆ.

ಸಂಭಾಜಿ ಭಿಡೆ ಹಾಗೂ ಇನ್ನೊಬ್ಬ ಹಿಂದುತ್ವ ನಾಯಕ ಮಿಲಿಂದ್ ಎಕ್ಬೋಟೆ ವಿರುದ್ಧ ದಲಿತ ಕಾರ್ಯಕರ್ತೆ ಅನಿತಾ ಸವಾಲೆ ಅವರು  ಪುಣೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಘಟನೆ ನಡೆಯುವ ಒಂದು ವಾರ ಮುಂಚೆ ತಮ್ಮ ದ್ವೇಷದ ಭಾಷಣದಿಂದ ಹಿಂಸೆಯನ್ನು ಪ್ರಚೋದಿಸಿದ್ದರೆಂದು ಆರೋಪಿಸಿದ್ದರು. ಏಕ್ಬೋಟೆ ಅವರನ್ನು ಬಂಧಿಸಿ ಶೀಘ್ರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರೆ, ಭಿಡೆ ಅವರನ್ನು ವಶಕ್ಕೆ ಪಡೆದುಕೊಂಡಿರಲಿಲ್ಲ ಹಾಗೂ ಅವರನ್ನು ಪೊಲೀಸರು ಇಲ್ಲಿಯ ತನಕ ವಿಚಾರಣೆಗೂ ಒಳಪಡಿಸಿಲ್ಲ ಎಂದು ವರದಿಯಾಗಿದೆ.

ಪುಣೆ ಪೊಲೀಸರು ಸೆಪ್ಟೆಂಬರ್ 2021ರಂದು 41 ಮಂದಿಯ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿದ್ದರೂ ಅದಲ್ಲಿ ಭಿಡೆ ಹೆಸರಿರಲಿಲ್ಲ.

ಭಿಡೆ ಅವರ ವಕೀಲ ಆದಿತ್ಯ ಮಿಶ್ರಾ ಅವರು ಕಳೆದ ವರ್ಷ ಮಾನವ  ಹಕ್ಕುಗಳ ಆಯೋಗಕ್ಕೆ ನೀಡಿದ ಮಾಹಿತಿಯಲ್ಲಿ ಭಿಡೆ ಅವರ ವಿರುದ್ಧದ ಪ್ರಕರಣವನ್ನು ವಾಪಸ್ ಪಡೆಯಲಾಗುವುದೆಂದು ಅಂದಿನ ಸಿಎಂ ದೇವೇಂದ್ರ ಫಡ್ನವೀಸ್ ಅವರು ವಿಧಾನಸಭೆಯಲ್ಲಿ ತಿಳಿಸಿದ್ದರೂ ಈ ನಿಟ್ಟಿನಲ್ಲಿ ಕ್ರಮಕೈಗೊಂಡಿಲ್ಲ ಎಂದಿದ್ದರು.

ಭಿಡೆ ಅವರ ಹೆಸರನ್ನು ಪ್ರಕರಣದಿಂದ ಕೈಬಿಡಲಾಗಿದೆ ಎಂದು ಪುಣೆ ಗ್ರಾಮೀಣಿ ಪೊಲೀಸ್ ಅಧಿಕಾರಿಗಳು ಬುಧವಾರ ಆಯೋಗಕ್ಕೆ ತಿಳಿಸಿದ್ದಾರೆ. ಈ ಪ್ರಕರಣದ ಅಂತಿಮ ವಿಚಾರಣೆಯು ಆಯೋಗದ ಮುಂದೆ ಜುಲೈ 4ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News