ಜನತೆಗೆ ನಿಲ್ಲದ ಬೆಲೆಏರಿಕೆ ಬರೆ: ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ದರ 50 ರೂ. ಹೆಚ್ಚಳ

Update: 2022-05-07 15:59 GMT

ಹೊಸದಿಲ್ಲಿ,ಮೇ 7: ಬದುಕಿನ ಬಂಡಿಯನ್ನೆಳೆಯಲು ಹೆಣಗಾಡುತ್ತಿರುವ ಜನಸಾಮಾನ್ಯರಿಗೆ ಬೆಲೆಏರಿಕೆಯ ಬರೆಗಳು ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಶನಿವಾರ ಗೃಹಬಳಕೆ ಅಡಿಗೆ ಅನಿಲ ಸಿಲಿಂಡರ್ ನ ಬೆಲೆಯನ್ನು 50 ರೂ.ಹೆಚ್ಚಿಸಲಾಗಿದೆ. ಏರಿಕೆ ಶನಿವಾರದಿಂದಲೇ ಜಾರಿಗೊಂಡಿದ್ದು, ದಿಲ್ಲಿಯಲ್ಲಿ ಈಗ 14.5 ಕೆ.ಜಿ. ಎಲ್ಪಿಜಿ ಸಿಲಿಂಡರ್ ಬೆಲೆ 999.50 ರೂ.ಆಗಿದೆ.

ಮೇ 1ರಂದು ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 102 ರೂ.ಹೆಚ್ಚಿಸಲಾಗಿದ್ದು,ಅದು ದಿಲ್ಲಿಯಲ್ಲಿ 2,355.50 ರೂ.ಗೆ ತಲುಪಿದೆ. ಐದು ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯನ್ನೂ 569 ರೂ.ನಿಂದ 655 ರೂ.ಗೆ ಹೆಚ್ಚಿಸಲಾಗಿತ್ತು.
ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ಎಲ್ಪಿಜಿ ಸಿಲಿಂಡರ್ ಗಳ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.
ಮಾ.10ರಂದು ಪಂಚರಾಜ್ಯ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಪ್ರಕಟವಾದ ಬಳಿಕ ಎಲ್ಪಿಜಿ ಮತ್ತು ಇಂಧನ ಬೆಲೆಗಳನ್ನು ಹಲವಾರು ಸಲ ಹೆಚ್ಚಿಸಲಾಗಿದೆ.

 ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ ಕುರಿತು ಕಾಂಗ್ರೆಸ್ ಕೇಂದ್ರ ಸರಕಾರವನ್ನು ತರಾಟೆಗೆತ್ತಿಕೊಂಡಿದೆ. ಕೋಟ್ಯಂತರ ಭಾರತೀಯ ಕುಟುಂಬಗಳು ತೀವ್ರ ಹಣದುಬ್ಬರ, ನಿರುದ್ಯೋಗ ಮತ್ತು ಕಳಪೆ ಆಡಳಿತದ ವಿರುದ್ಧ ಕಠಿಣ ಹೋರಾಟವನ್ನು ನಡೆಸುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರವು ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಯನ್ನು ಹಿಂದೆಗೆದುಕೊಳ್ಳಬೇಕು ಮತ್ತು ಅದನ್ನು 2014ರಲ್ಲಿದ್ದ ಸಬ್ಸಿಡಿ ದರದ ಮಟ್ಟಕ್ಕೆ ಇಳಿಸಬೇಕು ಎಂದಿರುವ ರಾಹುಲ್, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಡಿ ಎಲ್ಪಿಜಿ ಸಿಲಿಂಡರ್ ಬೆಲೆ 414 ರೂ.ಆಗಿತ್ತು ಮತ್ತು ಪ್ರತಿ ಸಿಲಿಂಡರ್ ಗೆ 827 ರೂ.ಸಬ್ಸಿಡಿಯನ್ನು ನೀಡಲಾಗುತ್ತಿತ್ತು. ಇಂದು ಸಿಲಿಂಡರ್ ಬೆಲೆ 999 ರೂ.ಆಗಿದೆ ಮತ್ತು ಸಬ್ಸಿಡಿ ಶೂನ್ಯಕ್ಕಿಳಿದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News