ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿವಾಸದಲ್ಲಿ ಭೋಜನ ಕೂಟದಲ್ಲಿ ಭಾಗವಹಿಸಿದ ಅಮಿತ್ ಶಾ

Update: 2022-05-07 08:46 GMT
Photo: Twitter

 ಕೊಲ್ಕತ್ತಾ : ಕೊಲ್ಕತ್ತಾ ಭೇಟಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ರಾತ್ರಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ನಿವಾಸದಲ್ಲಿ ಭೋಜನಕೂಟದಲ್ಲಿ ಭಾಗವಹಿಸಿದ್ದಾರೆ. ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರು ಬಿಸಿಸಿಐ ಗೌರವ ಕಾರ್ಯದರ್ಶಿಯಾಗಿರುವುದರಿಂದ ಶಾ ಅವರು ಸೌಜನ್ಯದ ಭೇಟಿ ನೀಡಿದ್ದಾರೆಂದು ಹೇಳಲಾಗಿದೆ.

ಗಂಗೂಲಿ ಅವರ ನಿವಾಸಕ್ಕೆ ಬಿಳಿ ಎಸ್‍ಯುವಿಯಲ್ಲಿ ಆಗಮಿಸಿದ ಅಮಿತ್ ಶಾ ಅವರ ಸುತ್ತಲೂ ಅಂಗರಕ್ಷಕರಿದ್ದರು. ಗಂಗೂಲಿ ಮನೆಯತ್ತ ಸಾಗುವ ಕಿರಿದಾದ ರಸ್ತೆಯುದ್ದಕ್ಕೂ ಜನರು ನೆರೆದಿದ್ದರು. ಶಾ ಅವರತ್ತ ಕೈಬೀಸಿ ನಮಸ್ತೇ ಮೂಲಕ ಸ್ಪಂದಿಸಿದ್ದಾರೆ.

ನಂತರ ಶಾ ಅವರು ಗಂಗೂಲಿ ಮತ್ತವರ ಕುಟುಂಬ ಸದಸ್ಯರೊಂದಿಗೆ ಭೋಜನ ಸವಿದಿದ್ದಾರೆ.

ಈ ಭೋಜನ ಕೂಟದ ಹಿಂದೆ ಯಾವುದೇ ರಾಜಕೀಯವಿಲ್ಲ. ಶಾ ತಮಗೆ ಹಲವು ವರ್ಷಗಳಿಂದ ಗೊತ್ತು, ಹಲವಾರು ಬಾರಿ ಅವರನ್ನು ಈ ಹಿಂದೆ ಭೇಟಿಯಾಗಿದ್ದೆ ಎಂದು ಗಂಗೂಲಿ ನಂತರ ಸುದ್ದಿಗಾರರಿಗೆ ಹೇಳಿದ್ದಾರೆ.

"ನಾನು ಅವರ ಪುತ್ರನೊಂದಿಗೆ ಕೆಲಸ ಮಾಡುತ್ತಿದ್ದೇನೆ, ಇದೊಂದು ಹಳೆಯ ನಂಟು" ಎಂದು ಗಂಗೂಲಿ ಹೇಳಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೂ ಮುನ್ನ ಒಮ್ಮೆ ಶಾ ಅವರನ್ನು ಭೇಟಿಯಾಗಿದ್ದ ಗಂಗೂಲಿ ಆಗ ಕೂಡ ತಾವು ಬಿಜೆಪಿ ಸೇರುವ ವದಂತಿಗಳನ್ನು ಅಲ್ಲಗಳೆದಿದ್ದರು.

2015ರಿಂದೀಚೆಗೆ ಗಂಗೂಲಿ ಬಿಜೆಪಿ ಸೇರುತ್ತಾರೆಂಬ ವದಂತಿಗಳು ಹಲವು ಬಾರಿ ಹರಿದಾಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News