ಸಿಎಂ ಆಗಿ ಒಂದು ವರ್ಷ ಪೂರೈಸಿದ ಸ್ಟಾಲಿನ್: ಸರಕಾರಿ ಶಾಲಾ ಮಕ್ಕಳಿಗೆ ಬೆಳಗ್ಗಿನ ಉಪಾಹಾರ ಸಹಿತ 5 ಹೊಸ ಯೋಜನೆ ಘೋಷಣೆ

Update: 2022-05-07 08:49 GMT

 ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ಇಂದು ಒಂದು ವರ್ಷ ಪೂರೈಸಿದ ಎಂ ಕೆ ಸ್ಟಾಲಿನ್, ಇಂದು ರಾಜ್ಯ ವಿಧಾನಸಭೆಯಲ್ಲಿ ಮಾತನಾಡುತ್ತಾ ತಮ್ಮ ಸರಕಾರದ ಮೊದಲ ವರ್ಷಾಚರಣೆಯ ಅಂಗವಾಗಿ ಐದು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಸರಕಾರಿ ಶಾಲಾ ಮಕ್ಕಳಿಗೆ ಉಪಾಹಾರ ಯೋಜನೆಯೂ ಈ ಹೊಸ ಯೋಜನೆಗಳಲ್ಲಿ ಸೇರಿದೆ.

ತಮ್ಮ ಸರಕಾರ ಚುನಾವಣೆ ವೇಳೆ ನೀಡಿದ ಆಶ್ವಾಸನೆಗಳ ಪೈಕಿ ಶೇ 60ರಿಂದ ಶೇ 70ರಷ್ಟು ಆಶ್ವಾಸನೆಗಳನ್ನು ಈಡೇರಿಸಿದೆ ಎಂದು ಹೇಳಿದ ಸ್ಟಾಲಿನ್ ತಮ್ಮ ಆಡಳಿತ ನೀತಿಯನ್ನು ದ್ರಾವಿಡ ಮಾದರಿ ಎಂದು ಬಣ್ಣಿಸಿದರು.

ಸರಕಾರಿ ಶಾಲೆಗಳ ಹಲವು ಮಕ್ಕಳು ಬೆಳಗ್ಗಿನ ಉಪಾಹಾರ ಸೇವಿಸದೆಯೇ ದೂರದ ತಮ್ಮ ಶಾಲೆಗಳಿಗೆ ಪ್ರಯಾಣಿಸುತ್ತಾರೆಂಬ ಅಧ್ಯಯನ ವರದಿಯನ್ನು ಆಧರಿಸಿ ಐದನೇ ತರಗತಿ ತನಕದ ಮಕ್ಕಳಿಗೆ ಸ್ಟಾಲಿನ್ ಉಪಾಹಾರ ಯೋಜನೆ ಘೋಷಿಸಿದರು.

ಆರಂಭಿಕ ಹಂತದಲ್ಲಿ ಕೆಲವೊಂದು ಆಯ್ದ ಶಾಲೆಗಳಲ್ಲಿ ಈ ಯೋಜನೆ ಜಾರಿಗೊಳಿಸಿ ಮುಂದೆ ರಾಜ್ಯಾದ್ಯಂತ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದ ಆರು ವರ್ಷದ ಕೆಳಗಿನ ಮಕ್ಕಳಿಗೆ ಪೌಷ್ಠಿಕಾಂಶ ಒದಗಿಸುವ ಯೋಜನೆಯನ್ನು ಅವರು ಘೋಷಿಸಿದರೆ. ದಿಲ್ಲಿ ಮಾದರಿಯ ಸ್ಕೂಲ್ಸ್ ಆಪ್ ಎಕ್ಸಲೆನ್ಸ್  ಯೋಜನೆಯನ್ನು ರಾಜ್ಯದ ಎಲ್ಲಾ ಕಾರ್ಪೊರೇಷನ್ ವ್ಯಾಪ್ತಿಯ ಶಾಲೆಗಳಲ್ಲಿ ರೂ 150 ಕೋಟಿ ವೆಚ್ಚದಲ್ಲಿ ಹಾಗೂ 708 ನಗರ ಆರೋಗ್ಯ ಕೇಂದ್ರಗಳನ್ನು ರೂ 180 ಕೋಟಿ ವೆಚ್ಚದಲ್ಲಿ ಜಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದ ಎಲ್ಲಾ ಕ್ಷೇತ್ರಗಳ ಜನರ ಸಮಸ್ಯೆಗಳನ್ನು ನೇರವಾಗಿ ನಿಗಾ ಇಡುವ ಒಂದು ವ್ಯವಸ್ಥೆಗಾಗಿ ಸರಕಾರ ರೂ 1000 ಕೋಟಿ ಮೀಸಲಿರಿಸುವುದಾಗಿ ಸ್ಟಾಲಿನ್ ಘೋಷಿಸಿದರು.
ಇಂದು ಬೆಳಿಗ್ಗೆ ಸೆಕ್ರಟೇರಿಯಟ್‍ಗೆ ಹೋಗುವ ಹಾದಿಯಲ್ಲಿ ತಮ್ಮ ವಾಹನ ನಿಲ್ಲಿಸಿ ಜನಪ್ರಿಯ 29ಸಿ ಬಸ್ಸನ್ನೇರಿದ ಸ್ಟಾಲಿನ್ ಸರಕಾರದ ಕಾರ್ಯನಿರ್ವಹಣೆಯಿಂದ ತೃಪ್ತಿಯಾಗಿದೆಯೇ ಎಂದು ಮಹಿಳೆಯರನ್ನು ಕೇಳಿದರು. ಮಹಿಳೆಯರ ಈ ಉಚಿತ ಬಸ್ ಸೇವೆಯಿಂದ ಮಹಿಳೆಯರಿಗೆ ತಿಂಗಳಿಗೆ ರೂ 600ರಿಂದ ರೂ 1000 ಉಳಿತಾಯವಾಗುತ್ತದೆ ಎಂದು ಸ್ಟಾಲಿನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News