ಆರ್‌ಬಿಐಯಿಂದ ಬಡ್ಡಿ ದರ ಏರಿಕೆ: ಬೆಲೆಯೇರಿಕೆ ಮುಂದುವರಿಕೆ?

Update: 2022-05-08 05:08 GMT

ಸಾಂಕ್ರಾಮಿಕ ಅವಧಿಯಲ್ಲಿ ವಿಧಿಸಲಾದ ಲಾಕ್‌ಡೌನ್‌ಗಳು ಮತ್ತು ರಶ್ಯ-ಉಕ್ರೇನ್ ಯುದ್ಧವು ಆರ್‌ಬಿಐಯ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ಹಣದುಬ್ಬರವು ದೊಡ್ಡ ಸಮಸ್ಯೆಯಾಗಿದೆ ಹಾಗೂ ಅದು ಉಳಿಯುತ್ತದೆ ಎನ್ನುವುದನ್ನು ರಿಸರ್ವ್ ಬ್ಯಾಂಕ್ ತೆಗೆದುಕೊಂಡಿರುವ ದಿಢೀರ್ ಕ್ರಮಗಳು ಸ್ಪಷ್ಟಪಡಿಸುತ್ತವೆ.

ಬುಧವಾರ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರ (ಆರ್‌ಬಿಐಯು ವಾಣಿಜ್ಯ ಬ್ಯಾಂಕ್‌ಗಳಿಗೆ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿ ದರ)ವನ್ನು ಶೇ. 0.4ದಷ್ಟು ಮತ್ತು ನಗದು ಮೀಸಲು ಪ್ರಮಾಣ (ಸಿಆರ್‌ಆರ್)ವನ್ನು ಶೇ. 0.5 ದಷ್ಟು ಹೆಚ್ಚಿಸಿದೆ. ಸಿಆರ್‌ಆರ್ ಎಂದರೆ ಒಂದು ಬ್ಯಾಂಕ್ ತನ್ನಲ್ಲೇ ಇಟ್ಟುಕೊಳ್ಳಬೇಕಾದ ನಗದು ಮೊತ್ತ. ಬ್ಯಾಂಕ್‌ಗಳು ಸಾಲಗಳು ಮತ್ತು ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸುವಂತೆ ಮಾಡು ವುದು ಈ ಬದಲಾವಣೆಗಳ ಉದ್ದೇಶ ವಾಗಿದೆ. ಈ ಕ್ರಮಗಳು ಹೆಚ್ಚು ಹಣವನ್ನು ಉಳಿಸು ವಂತೆ ಭಾರತೀಯರನ್ನು ಪ್ರೇರೇಪಿ ಸುತ್ತವೆ. ಖರ್ಚು ಮಾಡಲು ಕಡಿಮೆ ಹಣ ಲಭ್ಯವಿರುವುದರಿಂದ ಹಣ ದುಬ್ಬರ ಅಥವಾ ಹೆಚ್ಚುತ್ತಿರುವ ಬೆಲೆಗಳನ್ನು ನಿಯಂತ್ರಣಕ್ಕೆ ತರಬಹುದಾಗಿದೆ.

ಈ ಕ್ರಮವನ್ನು ದಿಢೀರ್ ಆಗಿ ತೆಗೆದು ಕೊಂಡಿರುವುದು ಮತ್ತು ಹೆಚ್ಚಳದ ಪ್ರಮಾಣವು ಅರ್ಥಶಾಸ್ತ್ರಜ್ಞರಿಗೆ ಆಘಾತ ತಂದಿದೆ. ಅದು ಬುಧವಾರ ಶೇರು ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಸೆನ್ಸೆಕ್ಸ್ 1,300 ಅಂಕಗಳಿಗಿಂತಲೂ ಹೆಚ್ಚು ಕುಸಿಯಿತು.

ಭಾರತದಲ್ಲಿ ಹಣದುಬ್ಬರವು ರಾಜಕೀಯ ಸಂಕಟಕ್ಕೆ ಹೇತು!

ಹಣದುಬ್ಬರವನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಆದ್ಯತೆಯು ಆರ್ಥಿಕ ಬೆಳವಣಿಗೆಯನ್ನು ತಡೆಹಿಡಿಯಬಹುದು. ಈಗಾಗಲೇ ಸಾಂಕ್ರಾಮಿಕದ ಅವಧಿಯಲ್ಲಿ ಹೊಡೆತಗಳನ್ನು ತಿಂದಿರುವ ಭಾರತೀಯ ಆರ್ಥಿಕತೆಗೆ ಇದು ಚಿಂತೆಯ ವಿಷಯ. ನಿರುದ್ಯೋಗ ಕುರಿತ ಅಂಕಿಸಂಖ್ಯೆಗಳು ಇನ್ನೊಂದು ಕಳವಳದ ವಿಷಯವಾಗಿದೆ. ಸಾಂಕ್ರಾಮಿಕದ ನಂತರದ ಅವಧಿಯಲ್ಲಿ ಆರ್ಥಿಕತೆ ಕಂಡಿರುವ ಚೇತರಿಕೆಯಿಂದಾಗಿ ಸದ್ಯಕ್ಕೆ ಬೆಳವಣಿಗೆಗೆ ಸಂಬಂಧಿಸಿದ ಅಂಕಿಅಂಶಗಳು ಉತ್ತಮವಾಗಿಯೇ ಇವೆ. ಬೆಳವಣಿಗೆ ನಿಂತ ಬಳಿಕ ಕೆಟ್ಟ ಪರಿಸ್ಥಿತಿ ಎದುರಾಗಬಹುದಾಗಿದೆ.

ಇದನ್ನು ಭಾರತೀಯರು ಹೇಗೆ ಸ್ವೀಕರಿಸು ತ್ತಾರೆ. ಕಳಪೆ ಬೆಳವಣಿಗೆ ದರವನ್ನು ಭಾರತೀಯರು ಅರಗಿಸಿಕೊಳ್ಳಬಲ್ಲರು. ಆದರೆ ಅಧಿಕ ಹಣದುಬ್ಬರದಿಂದ ಅವರು ಆಕ್ರೋಶಗೊಳ್ಳುತ್ತಾರೆ. ಇದು ಇತ್ತೀಚಿನ ಭಾರತೀಯ ಇತಿಹಾಸವನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ. ಮನಮೋಹನ್ ಸಿಂಗ್ ಸರಕಾರವು 2014ರ ಚುನಾವಣೆಯನ್ನು ಎದುರಿಸುವ ಸಂದರ್ಭದಲ್ಲಿ ಬೆಲೆ ಏರಿಕೆ ಅಗಾಧವಾಗಿತ್ತು. ಅದು ಆ ಸರಕಾರದ ವಿರುದ್ಧ ಜನರ ವ್ಯಾಪಕ ಅಸಮಾಧಾನಕ್ಕೆ ಪ್ರಮುಖ ಕಾರಣವಾಯಿತು ಎಂಬುದಾಗಿ ಈಗ ಭಾವಿಸಲಾಗಿದೆ. ಅದರ ಸಂಪೂರ್ಣ ಪ್ರಯೋಜನವನ್ನು ಪಡೆದ ನರೇಂದ್ರ ಮೋದಿ ದಿಲ್ಲಿಯಲ್ಲಿ ಅಧಿಕಾರದ ಗದ್ದುಗೆಯನ್ನು ಹಿಡಿದರು.

ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸಲು ಈ ಕ್ರಮವೇ?

ಕಳೆದ ಎರಡು ವರ್ಷಗಳಿಂದ ಹಣದುಬ್ಬರ ಅತ್ಯಧಿಕವಾಗಿತ್ತು. ಮಾರ್ಚ್ ತಿಂಗಳಲ್ಲಿ ಚಿಲ್ಲರೆ ಕ್ಷೇತ್ರದ ಹಣದುಬ್ಬರ ಸುಮಾರು ಶೇ.7 ಆಗಿತ್ತು. ಇದು ಭಾರತೀಯ ರಿಸರ್ವ್ ಬ್ಯಾಂಕ್‌ನ ಗುರಿಯಾಗಿರುವ ಶೇ.4ಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ. ಪರಿಸ್ಥಿತಿ ಹದಗೆಡುವ ಮೊದಲೇ ಆರ್‌ಬಿಐ ಈ ಕ್ರಮವನ್ನು ತೆಗೆದುಕೊಂಡಿರುವ ಸಾಧ್ಯತೆಯಿದೆ. ಯಾಕೆಂದರೆ, ಮುಂದಿನ ಬಡ್ಡಿ ದರಗಳ ಪರಿಷ್ಕರಣೆ ಜೂನ್‌ನಲ್ಲಿ ನಡೆಯಬೇಕಾಗಿತ್ತು.

ಎರಡು ವರ್ಷಗಳ ಈ ಹಣದುಬ್ಬರಕ್ಕೆ ಕೊರೋನ ವೈರಸ್ ಸಾಂಕ್ರಾಮಿಕದ ಅವಧಿಯಲ್ಲಿ ಹೇರಲಾದ ಕಠೋರ ಲಾಕ್‌ಡೌನ್ ಒಂದು ಕಾರಣವಾಗಿರುವ ಸಾಧ್ಯತೆಯಿದೆ. ಲಾಕ್‌ಡೌನ್‌ಗಳು ಭಾರತದ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲುಗೊಳಿಸಿತು. ಉತ್ಪಾದನಾ ಘಟಕಗಳು ಮತ್ತು ಪೂರೈಕೆ ಜಾಲವು ಸ್ಥಗಿತಗೊಂಡವು ಹಾಗೂ ಅದರ ಪರಿಣಾಮವಾಗಿ ಕೆಲವೇ ಕೆಲವು ಉತ್ಪನ್ನಗಳು ಭಾರತೀಯ ಬಳಕೆದಾರರನ್ನು ತಲುಪಿದವು. ಹಾಗಾಗಿ, ಸಹಜವಾಗಿಯೇ ಬೆಲೆ ಏರಿಕೆಯಾಯಿತು.

ಬೆಲೆಯೇರಿಕೆಗೆ ಇನ್ನೊಂದು ಕಾರಣ ರಶ್ಯ-ಉಕ್ರೇನ್ ಯುದ್ಧ. ಯುದ್ಧದಿಂದಾಗಿ ತೈಲ ಬೆಲೆಗಳು ಹಾಗೂ ಖಾದ್ಯ ತೈಲ ಮತ್ತು ಗೋಧಿ ಮುಂತಾದ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಏರಿಕೆಯಾಯಿತು. ಎಪ್ರಿಲ್‌ನಲ್ಲಿ, ಇಂಡೋನೇಶ್ಯವು ತಾಳೆ ಎಣ್ಣೆ ರಫ್ತನ್ನು ನಿಷೇಧಿಸಿತು. ಈ ಕ್ರಮವು ಭಾರತದಲ್ಲಿ ಖಾದ್ಯ ತೈಲಗಳ ಬೆಲೆಯನ್ನು ಹೆಚ್ಚಿಸುತ್ತದೆ.

ಹಣದುಬ್ಬರಕ್ಕೆ ಮೂರನೇ ಕಾರಣವೆಂದರೆ, ಭಾರತದಲ್ಲಿ ತೈಲದ ಮೇಲೆ ವಿಧಿಸುವ ಅತ್ಯಧಿಕ ತೆರಿಗೆ. ತೈಲ ಬೆಲೆಗಳು ಮಾರ್ಚ್‌ನಲ್ಲಿ ಶೇ.7.52ದಷ್ಟು ಹೆಚ್ಚಿದವು.

ಈವರೆಗೆ ಮೋದಿ ಬೆಲೆಯನ್ನು ಹೇಗೆ ನಿಯಂತ್ರಿಸಿದರು?

ಈ ಪಾಠವನ್ನು ನರೇಂದ್ರ ಮೋದಿ ಕಡೆಗಣಿಸಿಲ್ಲ ಎಂಬಂತೆ ಕಂಡುಬರುತ್ತದೆ. ಚಿಲ್ಲರೆ ಕ್ಷೇತ್ರದ ಹಣದುಬ್ಬರವನ್ನು ಶೇ.4ಕ್ಕೆ ಮಿತಿಗೊಳಿಸಲು ಏನೆಲ್ಲಾ ಮಾಡಬೇಕೋ ಅದನ್ನೆಲ್ಲ ಮಾಡುವಂತೆ ಮೋದಿ 2016ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಆದೇಶಿಸಿದರು. ಇದಕ್ಕೆ ಹೆಚ್ಚುವರಿಯಾಗಿ, ಆಹಾರದ ಬೆಲೆಯನ್ನು ನಿಯಂತ್ರಣದಲ್ಲಿ ಇಡುವುದಕ್ಕಾಗಿ ಮೋದಿ ಸರಕಾರವು ರೈತರ ಮೇಲೆ ಕಠಿಣವಾಗಿ ವರ್ತಿಸಿತು. ಸಂಗ್ರಹಗಳ ಮೇಲೆ ಮಿತಿಯನ್ನು ಹೇರಿತು ಮತ್ತು ಆಮದು-ರಫ್ತುಗಳ ಮೇಲೆ ಕಠಿಣ ನಿಯಂತ್ರಣಗಳನ್ನು ವಿಧಿಸಿತು. ರೈತರು ತಮ್ಮ ಉತ್ಪನ್ನಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅಸಾಧ್ಯವಾಗುವಂತೆ ಭಾರತ ಸರಕಾರ ನೋಡಿಕೊಂಡಿತು. ಆ ಮೂಲಕ ಅದು ಪರೋಕ್ಷವಾಗಿ ಆಹಾರ ಬಳಕೆದಾರರಿಗೆ ಸಬ್ಸಿಡಿ ನೀಡಿತು.

ಆದರೆ. ಸಾಂಕ್ರಾಮಿಕ ಅವಧಿಯಲ್ಲಿ ವಿಧಿಸಲಾದ ಲಾಕ್‌ಡೌನ್‌ಗಳು ಮತ್ತು ರಶ್ಯ-ಉಕ್ರೇನ್ ಯುದ್ಧವು ಈ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ಹಣದುಬ್ಬರವು ದೊಡ್ಡ ಸಮಸ್ಯೆಯಾಗಿದೆ ಹಾಗೂ ಅದು ಉಳಿಯುತ್ತದೆ ಎನ್ನುವುದನ್ನು ರಿಸರ್ವ್ ಬ್ಯಾಂಕ್ ಬುಧವಾರ ತೆಗೆದುಕೊಂಡಿರುವ ದಿಢೀರ್ ಕ್ರಮಗಳು ಸ್ಪಷ್ಟಪಡಿಸುತ್ತವೆ.

ಬೆಲೆಯೇರಿಕೆ ಬಿಜೆಪಿ ಪಾಲಿಗೆ ಮುಳುವಾಗಬಹುದು

ಕಳೆದ ಎರಡು ವರ್ಷಗಳಿಂದ, ಹಣ ದುಬ್ಬರ ಮತ್ತು ನಿರುದ್ಯೋಗಕ್ಕೆ ಸಂಬಂಧಿಸಿದ ಜನರ ಆಕ್ರೋಶವನ್ನು ಮೋದಿ ಸರಕಾರವು ರಾಜಕೀಯವಾಗಿ ನಿಭಾಯಿಸುತ್ತಾ ಬಂದಿದೆ. ಅದಕ್ಕಾಗಿ ಹಿಂದುತ್ವ ಎಂಬ ಭಾವನಾತ್ಮಕ ವಿಷಯವನ್ನು ಬಳಸಿದೆ ಮತ್ತು ಕಲ್ಯಾಣ ಕಾರ್ಯಕ್ರಮಗಳ ರೂಪದಲ್ಲಿ ಬಡವರಿಗೆ ಆರ್ಥಿಕ ನೆರವನ್ನು ನೀಡಿದೆ.

ಇದರ ಜೊತೆಗೆ ಮುಖ್ಯವಾಹಿನಿಯ ಹಿಂದಿ ಮತ್ತು ಇಂಗ್ಲಿಷ್ ಮಾಧ್ಯಮಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು, ಜನರು ಆಕ್ರೋಶಿತರಾಗಿದ್ದರೂ ಅವರ ಆಕ್ರೋಶವು ಪ್ರಸಾರಗೊಳ್ಳದಂತೆ ನೋಡಿಕೊಂಡಿದೆ.

ಈ ತಂತ್ರಗಾರಿಕೆಯು ಯಶಸ್ವಿಯಾಗಿದೆ. ಯಾಕೆಂದರೆ, ಉತ್ತರಪ್ರದೇಶ ಚುನಾವಣೆಯಲ್ಲಿ ಪಕ್ಷವು ಗೆದ್ದಿದೆ. ಆದರೆ, ನಿರುದ್ಯೋಗದಿಂದಾಗಿ ಆದಾಯವು ನಿರಂತರವಾಗಿ ಕಡಿಮೆಯಾಗುತ್ತಾ ಸಾಗಿದರೆ ಮತ್ತು ಹಣದುಬ್ಬರದಿಂದಾಗಿ ಖರೀದಿ ಸಾಮರ್ಥ್ಯ ಕುಸಿಯುತ್ತಾ ಸಾಗಿದರೆ ಭಾರತೀಯರ ಭಾವನೆಗಳನ್ನು ಹಿಡಿದಿಡಲು ಭಾರತೀಯ ಜನತಾ ಪಕ್ಷದ ಯಾವುದೇ ನಿಪುಣ ತಂತ್ರಗಾರಿಕೆಗೂ ಸಾಧ್ಯವಾಗದು.

Writer - ಶುಐಬ್ ದನಿಯಾಲ್

contributor

Editor - ಶುಐಬ್ ದನಿಯಾಲ್

contributor

Similar News