×
Ad

ಫ್ಯಾಸಿಸಂ ಅನ್ನು ಹಿಂದುತ್ವಕ್ಕೆ ಹೋಲಿಸಿದ ಪ್ರಶ್ನೆ: ಶಾರದಾ ವಿವಿಯ ಪ್ರೊಫೆಸರ್ ಅಮಾನತು

Update: 2022-05-08 19:57 IST
sharda university

ಹೊಸದಿಲ್ಲಿ,ಮೇ 8: ಬಿಎ ಆನರ್ಸ್ ಕೋರ್ಸ್‌ನ  ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ರಾಜಕೀಯ ವಿಜ್ಞಾನ ವಿಷಯದಲ್ಲಿ ‘ಫ್ಯಾಸಿಸಂ ಮತ್ತು ನಾಝಿವಾದ ಮತ್ತು ಹಿಂದುತ್ವದ ನಡುವೆ ಏನಾದರೂ ಹೋಲಿಕೆಗಳಿವೆಯೇ? ವಾದದೊಂದಿಗೆ ವಿವರಿಸಿ ’ ಎಂಬ ಪ್ರಶ್ನೆಯನ್ನೊಳಗೊಂಡ ಪ್ರಶ್ನೆಪತ್ರಿಕೆಯನ್ನು ಸಿದ್ಧಗೊಳಿಸಿದ್ದಕ್ಕಾಗಿ ಗ್ರೇಟರ್ ನೊಯ್ಡಾದ ಶಾರದಾ ವಿವಿಯ ಪ್ರೊಫೆಸರ್ ಓರ್ವರನ್ನು ಅಮಾನತುಗೊಳಿಸಲಾಗಿದ್ದು,ಶೋ-ಕಾಸ್ ನೋಟಿಸನ್ನು ನೀಡಲಾಗಿದೆ.

ವಿಷಯದ ಬಗ್ಗೆ ತನಿಖೆ ನಡೆಸಲು ವಿವಿಯು ಮೂವರು ಹಿರಿಯ ಬೋಧಕರನ್ನೊಳಗೊಂಡ ಸಮಿತಿಯೊಂದನ್ನು ರಚಿಸಿದ್ದು,ಈ ಸಮಿತಿಯು ಪ್ರೊಫೆಸರ್ ಗೆ ಶೋ-ಕಾಸ್ ನೋಟಿಸನ್ನು ಹೊರಡಿಸಿದೆ. ಪ್ರಶ್ನೆಪತ್ರಿಕೆಯ ಛಾಯಾಚಿತ್ರವು ಆನ್ಲೈನ್ನಲ್ಲಿ ಹರಿದಾಡುತ್ತಿದೆ.
  
‘ಸಾಮಾಜಿಕ ಸಾಮರಸ್ಯವನ್ನು ಕದಡಬಹುದಾದ ಇಂತಹ ಘಟನೆಗೆ ವಿವಿಯು ವಿಷಾದಿಸುತ್ತದೆ. ವಿವಿ ಬಳಗವು ಶ್ರೇಷ್ಠ ರಾಷ್ಟ್ರೀಯ ಅನನ್ಯತೆಯನ್ನು ಮತ್ತು ನಮ್ಮ ರಾಷ್ಟ್ರೀಯ ನೀತಿಗಳಲ್ಲಿ ಅಂತರ್ಗತವಾಗಿರುವ ಸಂಸ್ಕೃತಿಯನ್ನು ವಿರೂಪಗೊಳಿಸುವ ಯಾವುದೇ ಚಿಂತನೆಯಿಂದ ಸಂಪೂರ್ಣವಾಗಿ ವಿಮುಖವಾಗಿದೆ ’ ಎಂದು ವಿವಿಯ ಕುಲಸಚಿವರು ಮೇ 6ರಂದು ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹೇಳಿಕೆಯಲ್ಲಿ ‘ನಾಗರಿಕತೆಯ ಪುನರುಜ್ಜೀವನದ ವಿಶಾಲ ಅಭಿಯಾನ’ವನ್ನು ಬೆಂಬಲಿಸುವುದಾಗಿ ಪ್ರತಿಜ್ಞೆಯನ್ನು ಕೈಗೊಂಡಿರುವ ವಿವಿಯು ಹಿಂದುತ್ವ,ಫ್ಯಾಸಿಸಂ ಅಥವಾ ನಾಜಿವಾದಕ್ಕೆ ತನ್ನ ಸಂಬಂಧವೇನಿರಬಹುದು ಎನ್ನುವುದನ್ನು ವಿವರಿಸಿಲ್ಲ.
ಮೇ 7ರಂದು ಪ್ರೊಫೆಸರ್ ಹೆಸರನ್ನು ಪ್ರಕಟಿಸಿರುವ ವಿವಿಯು, ಸಮಿತಿಯು ಅವರಿಗೆ ವಿವರವಾದ ಶೋ-ಕಾಸ್ ನೋಟಿಸನ್ನು ಹೊರಡಿಸಿದೆ. ಪ್ರಶ್ನೆಪತ್ರಿಕೆಯಲ್ಲಿ ಕೇಳಲಾದ ಪ್ರಶ್ನೆಯು ಮೇಲ್ನೋಟಕ್ಕೆ ಆಕ್ಷೇಪಾರ್ಹವಾಗಿದೆ ಎನ್ನುವದನ್ನು ಸಮಿತಿಯು ಕಂಡುಕೊಂಡಿದೆ ಎಂದು ತಿಳಿಸಿದೆ.

ಉತ್ತರ ಪತ್ರಿಕೆಗಳ ವೌಲ್ಯಮಾಪಕರು ಸದ್ರಿ ಪ್ರಶ್ನೆ ಮತ್ತು ಅದಕ್ಕೆ ಉತ್ತರಗಳನ್ನು ಕಡೆಗಣಿಸಬೇಕು ಎಂಬ ಸಮಿತಿಯ ಸಲಹೆಯನ್ನು ವಿವಿಯ ಕುಲಪತಿಗಳು ಅನುಮೋದಿಸಿದ್ದಾರೆ ಎಂದೂ ಹೇಳಿಕೆಯು ತಿಳಿಸಿದೆ.
 
2021ರಲ್ಲಿ ಕೇರಳದ ಸೆಂಟ್ರಲ್ ವಿವಿಯು ಫ್ಯಾಸಿಸಂ ಮತ್ತು ನಾಜಿವಾದ ಕುರಿತು ಆನ್‌ಲೈನ್  ತರಗತಿಯಲ್ಲಿ ಆರೆಸ್ಸಸ್ ಅನ್ನು ‘ಪ್ರೋಟೊ-ಫ್ಯಾಸಿಸ್ಟ್’ಎಂದು ಬಣ್ಣಿಸಿದ್ದಕ್ಕಾಗಿ ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯ ವಿಭಾಗದ ಸಹಾಯಕ ಪ್ರೊಫೆಸರ್ ಗಿಲ್ಬರ್ಟ್ ಸೆಬಾಸ್ಟಿಯನ್ ವಿರುದ್ಧ ಶಿಸ್ತುಕ್ರಮವನ್ನು ಆರಂಭಿಸಿತ್ತು. ಇದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾದ ಬಳಿಕ ತನ್ನ ಆದೇಶವನ್ನು ವಿವಿಯು ಹಿಂದೆಗೆದುಕೊಂಡಿತ್ತಾದರೂ,‘ರಾಷ್ಟ್ರವಿರೋಧಿ’ ಮತ್ತು ‘ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾದ ’ ಹೇಳಿಕೆಗಳನ್ನು ನೀಡುವುದರ ವಿರುದ್ಧ ತನ್ನ ಬೋಧಕ ವೃಂದಕ್ಕೆ ಎಚ್ಚರಿಕೆಯೊಂದಿಗೆ ಸುತ್ತೋಲೆಯನ್ನು ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News