ಚಿಕಿತ್ಸೆ ಪಡೆಯುತ್ತಿದ್ದ ಸರ್ಕಾರಿ ಆಸ್ಪತ್ರೆಯಲ್ಲೇ ರೋಗಿ ಆತ್ಮಹತ್ಯೆ!

Update: 2022-05-09 02:26 GMT

ರೂರ್ಕೆಲಾ : ತಾನು ಚಿಕಿತ್ಸೆ ಪಡೆಯುತ್ತಿದ್ದ ಸರ್ಕಾರಿ ಆಸ್ಪತ್ರೆಯಲ್ಲೇ ಕಿಟಕಿಗೆ ನೇಣು ಬಿಗಿದು ರೋಗಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ರೂರ್ಕೆಲಾ ಸರ್ಕಾರಿ ಆಸ್ಪತ್ರೆಯ ಕೀಲು ಮತ್ತು ಎಲುಬು ವಾರ್ಡ್‍ನಲ್ಲಿ ಈ ಘಟನೆ ನಡೆದಿದೆ.

ಕೌನ್ರುಮುಂಡಾ ತಾಲೂಕಿನ ಸಹಾನಿ ಝಾರ (30) ಎಂಬ ರೋಗಿಯನ್ನು ಕಾಲು ಮುರಿತದ ಹಿನ್ನೆಲೆಯಲ್ಲಿ ಮೇ 4ರಂದು ಈ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರವಿವಾರ ಆತ ಮೊಣಕಾಲನ್ನು ಕುರ್ಚಿಯಲ್ಲಿ ಇರಿಸಿ ವಿಶ್ರಾಂತಿ ಪಡೆಯುವ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದ್ದು, ಜೀವ ಉಳಿಸಿಕೊಳ್ಳುವ ಹಲವು ಅವಕಾಶಗಳು ಇದ್ದರೂ, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಘಟನೆ ಆರ್‌ಜಿಎಚ್ ಆಸ್ಪತ್ರೆಯಲ್ಲಿ ರೋಗಿಗಳ ಸುರಕ್ಷೆ ಮತ್ತು ಭದ್ರತೆ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಲ್ಲಿನ ಭದ್ರತಾ ವ್ಯವಸ್ಥೆಯನ್ನು ಖಾಸಗಿ ಸೆಕ್ಯುರಿಟಿ ಏಜೆನ್ಸಿಯೊಂದು ನಿರ್ವಹಿಸುತ್ತಿದೆ.

ಆರ್‌ಜಿಎಚ್ ನಿರ್ದೇಶಕ ಡಾ.ಸಂತೋಷ್ ಸ್ವಯಿನ್ ಅವರ ಪ್ರಕಾರ, ಸಹಾನಿ ಝಾರ ಕುಡಿತದ ಚಟದಿಂದ ಮುಕ್ತಿ ಹೊಂದುತ್ತಿದ್ದ ಹಾಗೂ ಹಲವು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ. ಈ ಘಟನೆಗೆ ಮುನ್ನ ಈತನನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿಯನ್ನು ತೀವ್ರ ಹೊಟ್ಟೆನೋವಿನ ಕಾರಣದಿಂದ ಬೇರೆ ವಾರ್ಡ್‍ಗೆ ದಾಖಲಿಸಲಾಗಿತ್ತು. ಸಹಾನಿ ಝಾರ ಆಸ್ಪತ್ರೆಯಿಂದ ತೆರಳದಂತೆ ರಾತ್ರಿ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ತಡೆದಿದ್ದರು. ಮುಂಜಾನೆ 5ರ ಸುಮಾರಿಗೆ ಸಹಾನಿ ಝಾರ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಮೃತದೇಹವನ್ನು ಪೊಲೀಸರು, ನ್ಯಾಯಾಧೀಶರ ಸಮ್ಮುಖದಲ್ಲಿ ಅಟಾಪ್ಸಿ ಪರೀಕ್ಷೆಗಾಗಿ ವಶಕ್ಕೆ ಪಡೆದಿದ್ದಾರೆ. ಆತ ಭಾಗಶಃ ನೇಣು ಬಿಗಿದುಕೊಂಡಿದ್ದು, ಈ ಭಂಗಿಯಲ್ಲಿ ಸಾಯುವುದು ಸಾಧ್ಯ" ಎಂದು ಅವರು ವಿವರಿಸಿದರು. ಆರ್ ಎನ್ ಪಾಲಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲ ತಿಂಗಳ ಹಿಂದೆ ಮೃತದೇಹ ಒಂದರ ಮುಖವನ್ನು ಬೀದಿ ನಾಯಿಗಳು ತಿಂದ ಘಟನೆ ಇದೇ ಆಸ್ಪತ್ರೆಯಲ್ಲಿ ಸಂಭವಿಸಿತ್ತು ಹಾಗೂ ರೋಗಿಯ ಕಡೆಯವರು ಈ ಘಟನೆ ವಿರೋಧಿಸಿ ಭಾರಿ ಪ್ರತಿಭಟನೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News