ಗುಜರಾತ್: ಜೂಜಾಟದ ಪ್ರಕರಣದಲ್ಲಿ ಬಿಜೆಪಿ ಶಾಸಕನಿಗೆ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ

Update: 2022-05-11 18:08 GMT

ಹಾಲೋಲ್ (ಗುಜರಾತ್), ಮೇ 11: ಜೂಜಾಟದ ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ನ ಪಂಚಮಹಲ್ ಜಿಲ್ಲೆಯ ಹಾಲೋಲ್ನಲ್ಲಿರುವ ನ್ಯಾಯಾಲಯ ಬುಧವಾರ ಬಿಜೆಪಿ ಶಾಸಕ ಕೇಸರಿಸಿನ್ಹಾ ಸೋಲಂಕಿ ಹಾಗೂ ಇತರ 25 ಮಂದಿಗೆ ಎರಡು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ರೆಸಾರ್ಟ್ ಒಂದರಲ್ಲಿ ಜೂಜಿನಲ್ಲಿ ತೊಡಗಿಕೊಂಡಿದ್ದ ಸಂದರ್ಭ ಬಂಧಿತರಾದ ಒಂದು ವರ್ಷದ ಬಳಿಕ ಶಾಸಕ ಸೋಲಂಕಿ ಹಾಗೂ ಇತರ 25 ಮಂದಿಗೆ ನ್ಯಾಯಾಲಯ ಈ ಶಿಕ್ಷೆ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚುವರಿ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಪ್ರೇಮ್ ಹಂಸರಾಜ್ ಸಿಂಗ್ ಅವರ ನ್ಯಾಯಾಲಯ ಖೇಡ್ ಜಿಲ್ಲೆಯ ಮಾತರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಸೋಲಂಕಿ ಹಾಗೂ ಇತರ 25 ಮಂದಿಗೆ ತಲಾ 3 ಸಾವಿರ ರೂಪಾಯಿ ದಂಡವನ್ನು ಕೂಡ ವಿಧಿಸಿದೆ.

ನಿಯಮ ಉಲ್ಲಂಘಿಸಿದ್ದಕ್ಕಾಗಿ ಜೂಜಾಟ ಏರ್ಪಡಿಸಿದ್ದ ರಿಸೋರ್ಟ್ ನ ಪರವಾನಿಗೆಯನ್ನು ರದ್ದುಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ. ಸ್ಥಳೀಯ ಕ್ರೈಮ್ ಬ್ರಾಂಚ್ ಹಾಗೂ ಪಾವಗಢ ಪೊಲೀಸರು 2021 ಜುಲೈ 1ರಂದು ರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿ ಪಂಚಮಹಲ್ ಜಿಲ್ಲೆಯ ಶಿವರಾಜಪುರದ ರಿಸೋರ್ಟ್ನಲ್ಲಿ ಜೂಜಿನಲ್ಲಿ ತೊಡಗಿದ್ದ ಸೋಲಂಕಿ ಹಾಗೂ ಇತರ 25 ಮಂದಿಯನ್ನು ಬಂಧಿಸಿತ್ತು. ಇದರಲ್ಲಿ 7 ಮಹಿಳೆಯರು ಹಾಗೂ ನಾಲ್ವರು ನೇಪಾಳಿ ಪ್ರಜೆಗಳು ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News