"ಅವರು ಇಡೀ ವಾತಾವರಣವನ್ನು ಕೆಡಿಸುತ್ತಿದ್ದಾರೆ": ಜಿತೇಂದ್ರ ತ್ಯಾಗಿ ಜಾಮೀನು ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಹೇಳಿಕೆ

Update: 2022-05-12 13:14 GMT

ಹೊಸದಿಲ್ಲಿ: ಹರಿದ್ವಾರ ಧರ್ಮಸಂಸದ್‍ನಲ್ಲಿ ದ್ವೇಷದ ಭಾಷಣ ನೀಡಿದ ಪ್ರಕರಣದ ಆರೋಪಿ ಜಿತೇಂದ್ರ ತ್ಯಾಗಿ ಆಲಿಯಾಸ್ ವಸೀಂ ರಿಝ್ವಿ ಎಂಬಾತನ ಜಾಮೀನು ಅರ್ಜಿ ಇಂದು ವಿಚಾರಣೆಗೆ ಬಂದಾಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ "ಅವರೆಲ್ಲಾ ಇಡೀ ವಾತಾವರಣವನ್ನು ಕೆಡಿಸುತ್ತಿದ್ದಾರೆ" ಎಂದು ಹೇಳಿದೆ.

"ಇತರರಲ್ಲಿ ಅರಿವು ಮೂಡಿಸಲು ಹೇಳುವ ಮುನ್ನ ಅವರು ಸ್ವಯಂ ಅರಿವು ಹೊಂದಿರಬೇಕು. ಆದರೆ ಅವರಿಗೆ ಅರಿವುಂಟಾಗಿಲ್ಲ. ಇದು ಇಡೀ ವಾತಾವರಣವನ್ನು ಕೆಡಿಸುತ್ತಿದೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಜಾಮೀನು ನಿರಾಕರಿಸಿ ಉತ್ತರಾಖಂಡ ಹೈಕೋರ್ಟ್ ಮಾರ್ಚ್ 8ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ತ್ಯಾಗಿ ಸಲ್ಲಿಸಿದ ವಿಶೇಷ ಮೇಲ್ಮನವಿ ಅರ್ಜಿ ಸಂಬಂಧ  ಜಸ್ಟಿಸ್ ಅಜಯ್ ರಸ್ತೋಗಿ ಮತ್ತು ಜಸ್ಟಿಸ್ ವಿಕ್ರಮ್ ನಾಥ್ ಅವರ ಪೀಠ ನೋಟಿಸ್ ಜಾರಿಗೊಳಿಸಿದೆ. ರಾಜ್ಯ ಸರಕಾರದ ಪ್ರತಿಕ್ರಿಯೆಯನ್ನೂ ಕೇಳಿದ ಪೀಠವು ಈ ಕುರಿತು ಪ್ರತಿ ಅಫಿಡವಿಟ್ ಸಲ್ಲಿಸುವಂತೆ ಹೇಳಿದೆ.

ಆರೋಪಿ ಈಗಾಗಲೇ ಆರು ತಿಂಗಳಿಗೂ ಹೆಚ್ಚು ಸಮಯ ಜೈಲಿನಲ್ಲಿ ಕಳೆದಿದ್ದಾರೆ ಹಾಗೂ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ಧಾರೆ ಎಂದು ಅವರ ಪರ ಹಾಜರಿದ್ದ ಹಿರಿಯ ವಕೀಲ ಸಿದ್ಧಾರ್ಥ್ ಲುತ್ರಾ ಹೇಳಿದರು.

ಧರ್ಮ ಸಂಸದ್  ಎಂದರೇನು ಎಂದು ನ್ಯಾಯಾಲಯ ಅವರನ್ನು ಕೇಳಿದಾಗ ಅವರು "ನಾನೊಬ್ಬ ಆರ್ಯ ಸಮಾಜದವನು. ನನಗೆ ಗೊತ್ತಿಲ್ಲ. ನಾನು ವೀಡಿಯೋಗಳನ್ನು ನೋಡಿದ್ದೇನೆ. ಕೇಸರಿ ಬಟ್ಟೆ ಧರಿಸಿದ ಜನರು ಒಟ್ಟಾಗಿ ಭಾಷಣಗಳನ್ನು ನೀಡಿದ್ದಾರೆ" ಎಂದರು.

"ವಾತಾವರಣವನ್ನು ಕೆಡಿಸುವುದು. ಜತೆಯಾಗಿ ಶಾಂತಿಯುತವಾಗಿದ್ದು ಜೀವನವನ್ನು ಆನಂದಿಸಿ" ಎಂದು ಜಸ್ಟಿಸ್ ಅಜಯ್ ರಸ್ತೋಗಿ ಹೇಳಿದರು. "ಈ ಪ್ರಕರಣದಲ್ಲಿ ಗರಿಷ್ಠ ಶಿಕ್ಷೆ ಮೂರು ವರ್ಷ, ಆತ ಜನವರಿಯಿಂದ ಜೈಲಿನಲ್ಲಿದ್ದಾರೆ" ಎಂಬುದನ್ನೂ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ. ಮುಂದಿನ ವಿಚಾರಣೆಯನ್ನು ಮೇ 17ಕ್ಕೆ ನಿಗದಿಪಡಿಸಿದ ನ್ಯಾಯಾಲಯ ಆ ಸಂದರ್ಭ ಉತ್ತರಾಖಂಡದ ಡೆಪ್ಯುಟಿ ಅಡ್ವಕೇಟ್ ಜನರಲ್ ಹಾಜರಿರಬೇಕೆಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News