ಎಲ್ಐಸಿ ಶೇರುಗಳ ಹಂಚಿಕೆ ತಡೆಯಲು ಸುಪ್ರೀಂ ಕೋರ್ಟ್ ನಿರಾಕರಣೆ

Update: 2022-05-12 16:59 GMT

ಹೊಸದಿಲ್ಲಿ,ಮೇ 12: ಭಾರತೀಯ ಜೀವವಿಮಾ ನಿಗಮದ ಶೇರುಗಳ ಹಂಚಿಕೆಗೆ ತಡೆಯಾಜ್ಞೆ ನೀಡಲು ಸರ್ವೋಚ್ಚ ನ್ಯಾಯಾಲಯವು ಗುರುವಾರ ನಿರಾಕರಿಸಿದೆ.

ಹಣಕಾಸು ಕಾಯ್ದೆ,2021 ಮತ್ತು ಎಲ್ಐಸಿ ಕಾಯ್ದೆ,1956ರ ಕೆಲವು ಕಲಮ್‌ಗಳಲ್ಲಿಯ ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಕೆಲವು ಪಾಲಿಸಿದಾರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.

ಆದಾಗ್ಯೂ ಕೇಂದ್ರ ಮತ್ತು ಎಲ್ಐಸಿಗೆ ನೋಟಿಸ್‌ಗಳನ್ನು ಹೊರಡಿಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಸೂರ್ಯಕಾಂತ್ ಮತ್ತು ಪಿ.ಎಸ್.ನರಸಿಂಹ ಅವರ ಪೀಠವು ಎಂಟು ವಾರಗಳಲ್ಲಿ ಉತ್ತರಿಸುವಂತೆ ಅವುಗಳಿಗೆ ಸೂಚಿಸಿದೆ.

ವಾಣಿಜ್ಯಿಕ ಹೂಡಿಕೆಗಳು ಮತ್ತು ಆರಂಭಿಕ ಸಾರ್ವಜನಿಕ ನೀಡಿಕೆ (ಐಪಿಒ)ಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಯಾವುದೇ ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ನ್ಯಾಯಾಲಯವು ಒಲವು ಹೊಂದಿಲ್ಲ ಎಂದು ನ್ಯಾಯಾಧೀಶರು ತಿಳಿಸಿದರು.

  ಮೇ 4ರಂದು ಆರಂಭಗೊಂಡಿದ್ದ ಎಲ್ಐಸಿಯ ಐಪಿಒ ಮೇ 9ಕ್ಕೆ ಅಂತ್ಯಗೊಂಡಿದೆ. ಪ್ರತಿ ಶೇರಿಗೆ 902 ರೂ.ಮತ್ತು 949 ರೂ.ನಡುವೆ ಬೆಲೆಯನ್ನು ನಿಗದಿಗೊಳಿಸಲಾಗಿದೆ. ಬಿಎಸ್ಇ ನೀಡಿರುವ ಮಾಹಿತಿಯಂತೆ ನೀಡಿಕೆ ಆರಂಭಗೊಂಡ ಎರಡನೇ ದಿನವೇ ಐಪಿಒದ ಸಂಪೂರ್ಣ ಶೇರುಗಳಿಗೆ ಅರ್ಜಿಗಳು ಸಲ್ಲಿಕೆಯಾಗಿದ್ದವು.

ಎಲ್ಐಸಿ ಐಪಿಒ ಮೂಲಕ 21,000 ರೂ.ಗಳನ್ನು ಸಂಗ್ರಹಿಸುವ ನಿರೀಕ್ಷೆಯನ್ನು ಕೇಂದ್ರವು ಹೊಂದಿದೆ.
ಎಲ್ಐಸಿ ಶೇರುಗಳ ವಹಿವಾಟು ಮೇ 17ರಿಂದ ಶೇರು ವಿನಿಮಯ ಕೇಂದ್ರಗಳಲ್ಲಿ ಆರಂಭಗೊಳ್ಳುವ ಸಾಧ್ಯತೆಯಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News