ದಿಲ್ಲಿ: ಭೀಕರ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆ

Update: 2022-05-13 17:48 GMT
Photo: ndtv

ಹೊಸದಿಲ್ಲಿ: ದಿಲ್ಲಿಯ ಮುಂಡ್ಕಾ ಪ್ರದೇಶದಲ್ಲಿರುವ ಕಟ್ಟಡವೊಂದರಲ್ಲಿ ಶುಕ್ರವಾರ ಸಂಜೆ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಭೀಕರ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 26 ಕ್ಕೆ ಏರಿದೆ. ಘಟನೆಯಲ್ಲಿ 30 ಮಂದಿ ಗಾಯಗೊಂಡಿದ್ದಾರೆ ಎಂದು ndtv ವರದಿ ಮಾಡಿದೆ. 

ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯ ಆರಂಭಿಸಿವೆ.

ಪಶ್ಚಿಮ ದೆಹಲಿಯ ಮುಂಡ್ಕಾ ಮೆಟ್ರೋ ನಿಲ್ದಾಣದ ಪಿಲ್ಲರ್ ಸಂಖ್ಯೆ 544 ರ ಸಮೀಪವಿರುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದಲ್ಲಿ ಹಲವಾರು ಜನರು ಸಿಲುಕಿಕೊಂಡಿದ್ದರು. ಘಟನೆಯಲ್ಲಿ ಕನಿಷ್ಟ 26 ಮಂದಿ ಮೃತಪಟ್ಟಿದ್ದು, 30 ಕ್ಕೂ ಅಧಿಕ ಮಂದಿಗೆ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಗಾಯಾಳುಗಳನ್ನು ಸಂಜಯ್‌ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಟ್ಟಡ ಮಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈವರೆಗೆ 26 ಮೃತದೇಹಗಳು ಪತ್ತೆಯಾಗಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದೆಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಕಿಗೆ ಆಹುತಿಯಾದ ಒಂದು ಮಹಡಿಯಲ್ಲಿ ಇನ್ನೂ ಶೋಧಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

40ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡದಿಂದ ಸುಮಾರು 60-70 ಜನರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಸಂಜೆ 4.40 ಕ್ಕೆ ಬೆಂಕಿ ಅವಘಡದ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ಲಭಿಸಿದ್ದು, 20 ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಮೇಲಿನ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಇಡೀ ಕಟ್ಟಡವನ್ನು ಆವರಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News