ಮಥುರಾದಲ್ಲೂ ಜ್ಞಾನವಾಪಿ ಮಾದರಿ ಸಮೀಕ್ಷೆಗೆ ಮನವಿ

Update: 2022-05-14 02:01 GMT
ಸುಪ್ರೀಂಕೋರ್ಟ್

ಆಗ್ರಾ: ಮಥುರಾದಲ್ಲಿ ಕೃಷ್ಣಜನ್ಮಭೂಮಿಗೆ ಹೊಂದಿಕೊಂಡಂತೆ ಇರುವ ಶಾಹಿ ಈದ್ಗಾ ತಪಾಸಣೆ ಕೈಗೊಳ್ಳಲು ಅಭಿಯೋಜಕ ಆಯುಕ್ತರನ್ನು ನೇಮಕ ಮಾಡಲು ಆದೇಶಿಸುವಂತೆ ಕೋರಿ ಶುಕ್ರವಾರ ಎರಡು ಅರ್ಜಿಗಳನ್ನು ಸಿವಿಲ್ ನ್ಯಾಯಾಲಯ (ಹಿರಿಯ ಶ್ರೇಣಿ)ದಲ್ಲಿ ಸಲ್ಲಿಸಲಾಗಿದೆ.

"ಮಸೀದಿ ಆವರಣದ ಸ್ಥಳದಲ್ಲಿ ಕಲಾಕೃತಿಗಳು ಮತ್ತು  ಹಿಂದೂ ಪ್ರಾಚೀನ ಧಾರ್ಮಿಕ ಶಾಸನಗಳು ಇವೆಯೇ ಎಂದು ಪತ್ತೆ ಮಾಡಲು ಈ ಸಮೀಕ್ಷೆ ಕೈಗೊಳ್ಳಬೇಕು ಎಂದು ಕೋರಲಾಗಿದೆ. ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಜುಲೈ 1ಕ್ಕೆ ನಿಗದಿಪಡಿಸಿದೆ.

ಕಾಶಿ ವಿಶ್ವನಾಥ ದೇವಾಲಯಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿಯಲ್ಲಿ ವೀಡಿಯೊ ಸಮೀಕ್ಷೆ ನಡೆಸಲು ವಾರಣಾಸಿ ನ್ಯಾಯಾಲಯ, ಅಭಿಯೋಜಕ ಆಯುಕ್ತ ಅಜಯ್ ಕುಮಾರ್ ಮಿಶ್ರಾ ಅವರನ್ನು ನೇಮಕ ಮಾಡಿ ವರದಿ ಸಲ್ಲಿಸುವಂತೆ ಆದೇಶಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಜ್ಞಾನವಾಪಿ ಮಸೀದಿ ಪ್ರಕರಣ ಶುಕ್ರವಾರ ಸುಪ್ರೀಂಕೋರ್ಟ್ ತಲುಪಿದ್ದು, ಸ್ಥಳೀಯ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರುವ ತುರ್ತು ಮನವಿ ಸಲ್ಲಿಕೆಯಾಗಿದೆ.

ನಾರಾಯಣಿ ಸೇನಾ ರಾಷ್ಟ್ರೀಯ ಅಧ್ಯಕ್ಷ ಮನೀಶ್ ಯಾಧವ್ ಮಥುರಾದ ಶಾಹಿ ಈದ್ಗಾ ಪ್ರಕರಣದ ಅರ್ಜಿದಾರರಲ್ಲೊಬ್ಬರು. ಇವರು ಈ ಮೊದಲು ಅಲಹಾಬಾದ್ ಹೈಕೋರ್ಟ್‍ನ ಲಕ್ನೋ ಪೀಠದ ಮುಂದೆ ಅರ್ಜಿ ಸಲ್ಲಿಸಿ, ಶ್ರೀಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಕೋರಿದ್ದರು.

ನಾಲ್ಕು ತಿಂಗಳ ಒಳಗಾಗಿ ವಿವಾದಿತ ಸ್ಥಳಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ವಿಲೇವಾರಿ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ ಎಂದು ಯಾದವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News