ಕಾಂಗ್ರೆಸ್ ಜನರೊಂದಿಗಿನ ತನ್ನ ಸಂಬಂಧವನ್ನು ಕಳೆದುಕೊಂಡಿದೆ ಎಂದು ಒಪ್ಪಿಕೊಂಡ ರಾಹುಲ್‌ ಗಾಂಧಿ

Update: 2022-05-15 16:45 GMT
Photo: INC/Facebook

 ಹೊಸದಿಲ್ಲಿ,ಮೇ 15: ಜನತೆಯ ಜೊತೆಗಿನ ಕಾಂಗ್ರೆಸ್ ಹೊಂದಿದ್ದ ನಂಟು ‘‘ ಮುರಿದು ಬಿದ್ದಿದೆಯೆಂದು’’ ಮಾಜಿ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಯನಾಡ್ ಕಾಂಗ್ರೆಸ್ ಸಂಸದ ರಾಹುಲ್ಗಾಂಧಿ ರವಿವಾರ ಒಪ್ಪಿಕೊಡಿದ್ದಾರೆ. ಜನತೆಯ ಜೊತೆಗಿನ ಬಾಂಧವ್ಯವನ್ನು ಮರುಸ್ಥಾಪಿಸಲು ಹಾಗೂ ಬಲಪಡಿಸಲು ಪಕ್ಷವು ಅಕ್ಟೋಬರ್ ನಲ್ಲಿ ಯಾತ್ರೆಯೊಂದನ್ನು ಕೈಗೊಳ್ಳಲಿದೆಯೆಂದು ಅವರು ತಿಳಿಸಿದ್ದಾರೆ.

  ಪಕ್ಷವು ಈ ವಾಸ್ತವತೆಯನ್ನು ಒಪ್ಪಿಕೊಳ್ಳಬೇಕಾಗಿದೆ ಹಾಗೂ ಜನರೊಂದಿಗೆ ಮರುಸಂಪರ್ಕವನ್ನು ಏರ್ಪಡಿಸಿಕೊಳ್ಳಲು ಕಠಿಣವಾಗಿ ಶ್ರಮಿಸಬೇಕಾಗಿದೆ ಎಂದವರು ಪ್ರತಿಪಾದಿಸಿದರು. ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಕ್ಷದ 400 ಮಂದಿ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು ಜನಸಮೂಹದ ಜೊತೆಗಿನ ನಮ್ಮ ನಂಟು ಮುರಿದುಬಿದ್ದಿರುವುದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ. ಆದರೆ ದೇಶವನ್ನು ಕಾಂಗ್ರೆಸ್ ಮುನ್ನಡೆಸಬಲ್ಲದು ಎಂಬುದು ಜನತೆಗೆ ತಿಳಿದಿದೆ’’ ಎಂದವರು ಹೇಳಿದರು.

  ಜನರ ಜೊತೆ ಮರುಸಂಪರ್ಕವನ್ನು ಸಾಧಿಸಲು ಕಠಿಣವಾಗಿ ಶ್ರಮಪಡದೆ ಬೇರೆಯಾವುದೇ ಶಾರ್ಟ್ ಕಟ್ ಇಲ್ಲವೆಂದವರು ಹೇಳಿದರು. ರೈತರು ಹಾಗೂ ಕಾರ್ಮಿಕರಿಗಾಗಿ ಕೇವಲ ಒಂದೆರಡು ದಿನಗಳಲ್ಲ,ತಿಂಗಳುಗಟ್ಟಲೆಗಳ ಕಾಲ ಬೆವರಿಳಿಸಿ ದುಡಿಯಬೇಕೆಂದು ಅವರು ಪಕ್ಷ ಕಾರ್ಯಕರ್ತರು ಹಾಗೂ ನಾಯಕರಿಗೆ ಮನವಿ ಮಾಡಿದರು. ಬಿಜೆಪಿ ವಿರುದ್ಧ ಹೋರಾಟದಲ್ಲಿ ತಾನೂ ಕಾರ್ಯಕರ್ತರ ಜೊತೆಗೂಡುವುದಾಗಿ ಹೇಳಿದರು. ‘‘ನಾನು ಯಾವತ್ತೂ ಭ್ರಷ್ಟಾಚಾರಿಯಾಗಿಲ್ಲ, ಯಾರಿಂದಲೂ ಹಣ ಪಡೆದಿಲ್ಲ . ನನಗೇನೂ ಹೆದರಿಕೆಯಿಲ್ಲ ಹಾಗೂ ನಾನು ಹೋರಾಡುವೆ’’ ಎಂದು ರಾಹುಲ್ ತಿಳಿಸಿದರು.
    ತನ್ನ ಭಾಷಣದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಅವು ನಿರಂಕುಶವಾದಿಗಳಾಗಿ ವರ್ತಿಸುತ್ತಿದ್ದು, ಇದು ದೇಶಕ್ಕೆ ಅಪಾಯಕಾರಿಯಾಗಿದೆ ಎಂದರು. ಬಿಜೆಪಿ-ಆರೆಸ್ಸೆಸ್ ನಂತಲ್ಲದೆ ಕಾಂಗ್ರೆಸ್ ಪಕ್ಷವು ಅಂತರಿಕ ಚರ್ಚೆಗೆ ಅವಕಾಶ ನೀಡುತ್ತಿದೆ ಎಂದರು. ಹಿಂದಿ ಹಾಗೂ ಇಂಗ್ಲೀಷ್ ನಲ್ಲಿ ಮಾಡಿದ ತನ್ನ ಸುದೀರ್ಘ ಭಾಷಣದಲ್ಲಿ ರಾಹುಲ್ ಪಕ್ಷವು ಎದುರಿಸುತ್ತಿರುವ ಹಲವು ಸವಾಲುಗಳನ್ನು ಗುರುತಿಸಿದರು. ಅವುಗಳನ್ನು ಪುನರುಜ್ಜೀವನಗೊಳಿಸಲು ಯೋಜನೆಯನ್ನು ರೂಪಿಸುವಂತೆ ಅವರು ಕರೆ ನೀಡಿದರು.

 ಭಾರತವು ರಾಜ್ಯಗಳ ಒಕ್ಕೂಟವೆಂದು ಪ್ರತಿಪಾದಿಸಿದ ರಾಹುಲ್, ‘‘ ರಾಜ್ಯಗಳು ಹಾಗೂ ಜನತೆಗೆ ಸಂವಾದಕ್ಕೆ ಅವಕಾಶವನ್ನು ಕಲ್ಪಿಸುವುದು ಒಕ್ಕೂಟ ವ್ಯವಸ್ಥೆಗೆ ಮಹತ್ವದ್ದಾಗಿದೆ ಎಂದರು. ಭಾರತೀಯರ ಸಂವಾದ ನಡೆಸುವುದೇ, ಭಾರತೀಯರ ನಡುವಿನ ಹಿಂಸೆಯನ್ನು ತಪ್ಪಿಸಲು ಇರುವ ಏಕೈಕ ಪರ್ಯಾಯ ಮಾರ್ಗವಾಗಿದೆ ಎಂದರು.
ದೇಶದ ಜನಸಮುದಾಯವು ವಿಭಜನೆಗೊಂಡಲ್ಲಿ, ಅದೊಂದು ಬೃಹತ್ ಸಾಮುದಾಯಿಕ ವಿನಾಶವಾಗಲಿದೆ. ಇದಕ್ಕೆ ಬಿಜೆಪಿ ಸರಕಾರ ಹೊಣೆಗಾರನಾಗಲಿದೆ ಎಂದವರು ಹೇಳಿದರು.

 ‘‘ ಇದೊಂದು ಸಿದ್ಧಾಂತಗಳ ಹೋರಾಟವಾಗಿರುವುದರಿಂದ ಯಾವುದೇ ಪ್ರಾದೇಶಿಕ ಪಕ್ಷಕ್ಕೂ ಇದರಲ್ಲಿ ಹೋರಾಡಲು ಸಾಧ್ಯವಿಲ್ಲ. ಬಿಜೆಪಿಯು ಕಾಂಗ್ರೆಸ್ ಬಗ್ಗೆ ಮಾತನಾಡುತ್ತಿದೆಯೇ ಹೊರತು ಪ್ರಾದೇಶಿಕ ಪಕ್ಷಗಳ ಬಗೆಗಲ್ಲ.ಯಾಕೆಂದರೆ ಪ್ರಾದೇಶಿಕ ಪಕ್ಷಗಳಿಗೆ ಸಿದ್ದಾಂತಗಳಿಲ್ಲದಿರುವುದರಿಂದ ಅವುಗಳನ್ನು ಸೋಲಿಸಲು ಸಾಧ್ಯವಿಲ್ಲವೆಂದು ಬಿಜೆಪಿಗೆ ತಿಳಿದಿದೆ. ಈ ಹೋರಾಟವು ದೇಶದ ಭವಿಷ್ಯತ್ತಿನ ಉಳಿವಿಗಾಗಿ ನಡೆಸುವ ಹೋರಾಟವಾಗಿದೆ ಎಂದವ ಹೇಳಿದರು.

ಬಿಜೆಪಿಯ ಬಳಿ ಸಾಕಷ್ಟು ಧನಬಲವಿದೆ ಮತ್ತು ಅದು ಜನರೊಂದಿಗೆ ಸಂವಹನ ಸಾಧಿಸುವಲ್ಲಿ ಉತ್ತಮ ಸ್ಥಿತಿಯಲ್ಲಿದೆ ಎಂದವರು ಹೇಳಿದರು. ನಾವು ನಮ್ಮ ಸಂಪರ್ಕಗಳನ್ನು ಸುಧಾರಿಸಬೇಕಾಗಿದೆ ಹಾಗೂ ಜನರೊಂದಿಗೆ ಸಂಪರ್ಕಿಸಬೇಕಾಗಿದೆ ಎಂದವರು ಹೇಳಿದರು.

  ‘‘ ಜನತೆಯ ಬಳಿಗೆ ತೆರಳಿ, ತಮ್ಮನ್ನು ವಿಭಜಿಸಲಾಗಿದೆ ಹಾಗೂ ಇದರಿಂದ ದೇಶಕ್ಕೆ ಯಾವುದೇ ರೀತಿಯ ಪ್ರಯೋಜನವಿಲ್ಲವೆಂಬ ಅರಿವನ್ನು ಅವರಲ್ಲಿ ಉಂಟು ಮಾಡುವುದು ನಮ್ಮ ಹೊಣೆಗಾರಿಕೆಯಾಗಿದೆ . ಕೇವಲ ಕಾಂಗ್ರೆಸ್‌ನಿಂದಲೇ ಇದು ಸಾಧ್ಯ. ಕಾಂಗ್ರೆಸ್ ತಮಗೆ ಬಾಗಿಲು ಮುಚ್ಚಿದೆಯೆಂದು ದೇಶದ ಯಾವುದೇ ಜಾತಿ,ಧರ್ಮದ ವ್ಯಕ್ತಿ ಹೇಳಲು ಸಾಧ್ಯವಿಲ್ಲ ಎಂದು ರಾಹುಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News