ಮಂಗಳೂರು; ದೊಣ್ಣೆಯಿಂದ ಹೊಡೆದು ಪತ್ನಿಯ ಕೊಲೆ: ಆರೋಪಿ ಪತಿಯ ಬಂಧನ

Update: 2022-05-15 13:34 GMT
ಜೋಸೆಫ್‍ ಫ್ರಾನ್ಸಿಸ್-ಶೈಮಾ 

ಉಳ್ಳಾಲ: ಪತ್ನಿಯ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಕುಂಪಲದಲ್ಲಿ ನಡೆದಿದ್ದು, ಆರೋಪಿ ಪತಿ  ಜೋಸೆಫ್ ಫ್ರಾನ್ಸಿಸ್ (54) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ: ಕೊಚ್ಚಿ ನಿವಾಸಿ ಜೋಸೆಫ್ ಎಂಬವರ ಪುತ್ರಿ ಶೈಮಾ (44) ಎಂಬವರನ್ನು ಜೋಸೆಫ್‍ ಫ್ರಾನ್ಸಿಸ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿದ್ದು, ಅವರು ಉಳ್ಳಾಲ ಠಾಣೆ ವ್ಯಾಪ್ತಿಯ ಕುಂಪಲದಲ್ಲಿ ವಾಸವಾಗಿದ್ದರು. ಮೇ 11ರಂದು ಕ್ಷುಲ್ಲಕ ವಿಚಾರವೊಂದಕ್ಕೆ ಅವರ ನಡುವೆ ಜಗಳ ನಡೆದಿದೆ. ಈ ಸಂದರ್ಭ ಜೋಸೆಫ್ ಫ್ರಾನ್ಸಿಸ್ ಪತ್ನಿ ಶೈಮಾರಿಗೆ ದೊಣ್ಣೆಯಿಂದ ತಲೆಗೆ ಹೊಡೆದಿದ್ದು, ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ಶೈಮಾ ವಿಷ ಸೇವಿಸಿದ್ದರು ಎನ್ನಲಾಗಿದ್ದು, ತಕ್ಷಣ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ದಿನ ರಾತ್ರಿ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಶೈಮಾರ ತಂದೆ ಕೊಚ್ಚಿ ನಿವಾಸಿ ಜೋಸೆಫ್ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಜೋಸೆಫ್ ಫ್ರಾನ್ಸಿಸ್‍ನನ್ನು ಶನಿವಾರ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಹೆಚ್ಚುವರಿ ತನಿಖೆಗಾಗಿ ಉಳ್ಳಾಲ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News