ಲೆಬನಾನ್: ಸಂಸದೀಯ ಚುನಾವಣೆಗೆ ಮತದಾನ; ಆಡಳಿತಾರೂಢ ಪಕ್ಷಕ್ಕೆ ಹಿನ್ನಡೆ ?

Update: 2022-05-15 14:42 GMT

ಬೈರೂತ್, ಮೇ 15: ಲೆಬನಾನ್ನಲ್ಲಿ ದೇಶದ ಅರ್ಥವ್ಯವಸ್ಥೆ ಪತನದ ಬಳಿಕ ನಡೆದ ಪ್ರಪ್ರಥಮ ಸಂಸದೀಯ ಚುನಾವಣೆಯ ಮತದಾನ ರವಿವಾರ ನಡೆದಿದ್ದು, ಆಡಳಿತಾರೂಢ ಪಕ್ಷದ ವಿರುದ್ಧ ಜನಾಭಿಪ್ರಾಯ ಬರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

  2018ರ ಬಳಿಕ ನಡೆಯುವ ಪ್ರಥಮ ಸಂಸದೀಯ ಚುನಾವಣೆ ಇದಾಗಿದ್ದು ಅಧಿಕಾರದಲ್ಲಿರುವ ಪಕ್ಷದ ವಿರುದ್ಧ ಜನಾಕ್ರೋಶ ಮತ್ತು ಬಡತನದ ಬಿಕ್ಕಟ್ಟು ಹೆಚ್ಚುತ್ತಿರುವ ನಡುವೆ ಇರಾನ್ ಬೆಂಬಲಿತ ಹರ್ಬೊಲ್ಲಾ ಸಂಘಟನೆ ಮತ್ತದರ ಮಿತ್ರಪಕ್ಷಗಳು ಸಂಸತ್ತಿನಲ್ಲಿ ಬಹುಮತ ಉಳಿಸಿಕೊಳ್ಳಬಹುದೇ ಎಂಬ ಕುತೂಹಲ ಮೂಡಿದೆ. 2018ರ ಸಂಸದೀಯ ಚುನಾವಣೆ ಬಳಿಕ ಲೆಬನಾನ್ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿದ್ದು ಇದಕ್ಕೆ ಆಡಳಿತಾರೂಢ ಪಕ್ಷ ಹಾಗೂ 2020ರಲ್ಲಿ ಬೈರೂತ್ ಬಂದರಿನಲ್ಲಿ ನಡೆದ ಸ್ಫೋಟ ಕಾರಣ ಎಂದು ವಿಶ್ವಬ್ಯಾಂಕ್ ದೂಷಿಸಿದೆ.
ಆಡಳಿತ ಪಕ್ಷದ ಬಗ್ಗೆ ಜನಾಕ್ರೋಶ ಹೆಚ್ಚಿದ್ದರೂ ಸುಧಾರಣಾ ಮನೋಭಾವದ ಅಭ್ಯರ್ಥಿಗಳು ಹೆಚ್ಚಿನ ಸ್ಥಾನದಲ್ಲಿ ಗೆಲ್ಲುವ ಸಾಧ್ಯತೆ ಕಡಿಮೆಯಾಗಿದ್ದು ಅಧಿಕಾರದ ಸಮತೋಲನದಲ್ಲಿ ಹೆಚ್ಚಿನ ಬದಲಾವಣೆಯಾಗದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

 2018ರಲ್ಲಿ ನಡೆದ ಚುನಾವಣೆಯಲ್ಲಿ ಹಜ್ಬೊಲ್ಲಾ ಮತ್ತು ಅದರ ಮಿತ್ರಪಕ್ಷಗಳು (ಅಧ್ಯಕ್ಷ ಮೈಕೆಲ್ ಆನ್ಸ್ ಅವರ ಫ್ರೀ ಪ್ಯಾಟ್ರಿಯಾಟಿಕ್ ಮೂವ್ಮೆಂಟ್ (ಎಫ್ಪಿಎಂ) ಪಕ್ಷ ಸೇರಿದಂತೆ) ಸಂಸತ್ತಿನ 128 ಸ್ಥಾನಗಳಲ್ಲಿ 71ರಲ್ಲಿ ಗೆಲುವು ಸಾಧಿಸಿತ್ತು ಮತ್ತು ಈ ಫಲಿತಾಂಶದಿಂದ ಲೆಬನಾನ್ ದೇಶದ ಮೇಲೆ ಶಿಯಾ ಮುಸ್ಲಿಮ್ ನೇತೃತ್ವದ ಇರಾನ್ನ ಪ್ರಭಾವ ಮತ್ತಷ್ಟು ಹೆಚ್ಚಿತು. ಈ ಬಾರಿಯ ಚುನಾವಣೆಯಲ್ಲಿ ಆಹಾರದ ಪ್ಯಾಕೇಜ್ ಹಾಗೂ ಇಂಧನ ವೋಚರ್ ಮೂಲಕ ಅಭ್ಯರ್ಥಿಗಳು ಮತ ಖರೀದಿಸಲು ಪ್ರಯತ್ನಿಸಿದ್ದಾರೆ ಎಂದು ಚುನಾವಣಾ ವೀಕ್ಷಕರು ಎಚ್ಚರಿಸಿದ್ದಾರೆ. ಲೆಬನಾನ್ನಲ್ಲಿ 21 ವರ್ಷ ಮೀರಿದವರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ಲೆಬನಾನ್ಗೆ ಆರ್ಥಿಕ ನೆರವು ಒದಗಿಸಬೇಕಿದ್ದರೆ ದೀರ್ಘಾವಧಿಯಿಂದ ವಿಳಂಬವಾಗಿರುವ ಆರ್ಥಿಕ ಸುಧಾರಣಾ ಕ್ರಮ ಕೈಗೊಳ್ಳಬೇಕು ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್) ಶರತ್ತು ವಿಧಿಸಿರುವುದರಿಂದ ನೂತನ ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

ಮೂರನೇ ಬಾರಿಗೆ ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿರುವ ಹಾಲಿ ಪ್ರಧಾನಿ ನಜೀಬ್ ಮಿಕಾತಿ, ಮೈತ್ರಿ ಪಕ್ಷಗಳ ನೆರವಿನಿಂದ ಮತ್ತೆ ಸರಕಾರ ರಚಿಸುವ ನಿರೀಕ್ಷೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News