ಇಸ್ರೇಲ್‌ ಸೈನಿಕರಿಂದ ‌ಅಲ್‌ಜಝೀರಾ ಪತ್ರಕರ್ತೆ ಶಿರೀನ್ ಹತ್ಯೆ ಖಂಡಿಸಿ ಲಂಡನ್‌ ನಲ್ಲಿ ಬೃಹತ್ ಪ್ರತಿಭಟನೆ

Update: 2022-05-15 14:46 GMT

ಲಂಡನ್, ಮೇ 15: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಈ ವಾರದ ಆರಂಭದಲ್ಲಿ ನಡೆದ ಪತ್ರಕರ್ತೆ ಶಿರೀನ್ ಹತ್ಯೆಯನ್ನು ಖಂಡಿಸಿ ಲಂಡನ್‌ನಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಸುಮಾರು 15,000 ಪೆಲೆಸ್ತೀನ್ ಪರ ಪ್ರದರ್ಶನಕಾರರು ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.

ಇಸ್ರೇಲ್‌ನ ಸ್ನಿಪರ್ ದಳದಿಂದ ಶಿರೀನ್ ಹತ್ಯೆಯನ್ನು ಖಂಡಿಸಿ, ಲಂಡನ್‌ನಲ್ಲಿರುವ ಬಿಬಿಸಿ ಕೇಂದ್ರಕಚೇರಿಯ ಹೊರಭಾಗದಲ್ಲಿ ಪ್ರತಿಭಟನಾಕಾರರು 55 ಪೇಪರ್ ಜಾಕೆಟ್‌ಗಳನ್ನು ಪ್ರದರ್ಶಿಸಿದರು. 2000ದಿಂದ ಇಸ್ರೇಲ್ ಪಡೆ 55 ಪತ್ರಕರ್ತರನ್ನು ಹತ್ಯೆಗೈದಿರುವುದನ್ನು ಇದು ಪ್ರತಿನಿಧಿಸಿದೆ ಎಂದು ಪ್ರತಿಭಟನೆಯ ಸಂಘಟಕರು ಹೇಳಿದ್ದಾರೆ. ಜತೆಗೆ, ಪೆಲೆಸ್ತೀನ್ನ ಭೂಮಿಯನ್ನು ಇಸ್ರೇಲ್ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು 74 ವರ್ಷ ಕಳೆದಿರುವುದನ್ನು ಸಂಕೇತಿಸಲು 74 ಕೀಗಳನ್ನೂ ಪ್ರತಿಭಟನಾಕಾರರು ಪ್ರದರ್ಶಿಸಿದರು. 1948ರಲ್ಲಿ ಪೆಲೆಸ್ತೀನ್ ಪ್ರದೇಶವನ್ನು ಇಸ್ರೇಲ್ ಅಕ್ರಮವಾಗಿ ವಶಕ್ಕೆ ಪಡೆದಾಗ ಅಲ್ಲಿದ್ದ ಸಾವಿರಾರು ಪೆಲೆಸ್ತೀನೀಯರು ಪಲಾಯನ ಮಾಡಿದ್ದರು.

 ಪೆಲೆಸ್ತೀನ್ ಪ್ರದೇಶವನ್ನು ಇಸ್ರೇಲ್ ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿದ ಸುದ್ಧಿ, ವರದಿಗಳನ್ನು ಪ್ರಸಾರ ಮಾಡುವಾಗ ಬಿಬಿಸಿ ಪಕ್ಷಪಾತ ಮತ್ತು ಸಮಸ್ಯಾತ್ಮಕ ಭಾಷೆ ಬಳಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ ಬ್ಯಾನರ್‌ಗಳನ್ನು ಪ್ರದರ್ಶಿಸಿದರು. ಅಲ್ಲದೆ ಬಿಬಿಸಿಯ ಹೊರಭಾಗದಲ್ಲಿ ಇರಿಸಿದ ಸ್ಮಾರಕದಲ್ಲಿ ಶಿರೀನ್ ಹತ್ಯೆಗೆ ಸಂತಾಪ ಸೂಚಿಸುವ ಸಂದೇಶವನ್ನೂ ಪ್ರತಿಭಟನಾಕಾರರು ಬರೆದರು. ಅಲ್ಲದೆ , ಬ್ರಿಟನ್ ಮೂಲದ ಫ್ರೆಂಡ್ಸ್ ಆಫ್ ಅಲ್-ಅಖ್ಸಾ (ಎಫ್ಒಎ) ಸಂಘಟನೆಯ ಅಭಿಯಾನವನ್ನು ಬೆಂಬಲಿಸುವ ಸಂಕೇತವಾಗಿ ಮಾನವ ಸರಪಳಿ ರಚಿಸಿದರು.

 ಅಲ್ಅಖ್ಸಾದಲ್ಲಿ ಪೆಲೆಸ್ತೀನಿಯರು ಪ್ರಾರ್ಥನೆ ಸಲ್ಲಿಸುವಾಗ ದಾಳಿ ನಡೆಸುವುದನ್ನು ಇಸ್ರೇಲ್ ಪೊಲೀಸರು ನಿಲ್ಲಿಸಬೇಕು ಎಂದು ಎಫ್ಒಎ ಆಗ್ರಹಿಸಿ ಅಭಿಯಾನ ಆರಂಭಿಸಿದೆ. ಶಿರೀನ್ರನ್ನು ಗುರಿಯಾಗಿಸಿ ಇಸ್ರೇಲ್ ಪೊಲೀಸರು ದಾಳಿ ನಡೆಸಿದ್ದು ಮರುದಿನ ನಡೆದ ಅಂತಿಮ ಕ್ರಿಯೆ ಮೆರವಣಿಗೆ ಸಂದರ್ಭದಲ್ಲೂ ಅನುಚಿತವಾಗಿ ನಡೆದುಕೊಂಡು ಅಗೌರವ ತೋರಿದೆ. ಇದನ್ನು ಪ್ರತಿಭಟಿಸಿ ಲಂಡನ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ 15,000 ಜನ ಪಾಲ್ಗೊಂಡಿರುವುದು ಪೆಲೆಸ್ತೀನಿಯರ ಪರ ಜನಬೆಂಬಲದ ದ್ಯೋತಕವಾಗಿದೆ ಎಂದು ಎಫ್ಒಎ ಸಾರ್ವಜನಿಕ ವ್ಯವಹಾರ ವಿಭಾಗದ ಮುಖ್ಯಸ್ಥ ಶಮಿಯುಲ್ ಜೋರ್ಡರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News