"‌ದೇಶದಲ್ಲಿ ದ್ವೇಷದ ವಾತಾವರಣ ನಿರ್ಮಿಸಿದೆ": ‘ದಿ ಕಾಶ್ಮೀರ ಫೈಲ್ಸ್’ ನಿಷೇಧಕ್ಕೆ ಫಾರೂಕ್ ಅಬ್ದುಲ್ಲಾ ಆಗ್ರಹ

Update: 2022-05-16 14:29 GMT
FAROOQ ABDULLAH

ಅನಂತನಾಗ್,ಮೇ 16: ವಿವೇಕ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ ಫೈಲ್ಸ್ ’ಚಿತ್ರವನ್ನು ನಿಷೇಧಿಸುವಂತೆ ಸೋಮವಾರ ಇಲ್ಲಿ ಆಗ್ರಹಿಸಿದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು, ಚಿತ್ರವು ದೇಶದಲ್ಲಿ ದ್ವೇಷದ ವಾತಾವರಣವನ್ನು ಸೃಷ್ಟಿಸಿದೆ ಎಂದು ಆರೋಪಿಸಿದರು.

ಚಿತ್ರದಲ್ಲಿ ಬಿಂಬಿಸಲಾಗಿರುವ ಘಟನೆಗಳನ್ನು ನಕಲಿ ಎಂದು ಉಲ್ಲೇಖಿಸಿದ ಅವರು,ಚಿತ್ರವು ಆಧಾರರಹಿತವಾಗಿದೆ ಎಂದರು.
ಕಣಿವೆಯಲ್ಲಿನ ಇತ್ತೀಚಿನ ಹಿಂಸಾಚಾರದ ಘಟನೆಗಳ ಕುರಿತು ಚರ್ಚಿಸಲು ಅಬ್ದುಲ್ಲಾ ಮತ್ತು ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಸೇರಿದಂತೆ ಗುಪ್ಕರ್ ಮೈತ್ರಿಕೂಟದ ನಾಯಕರು ರವಿವಾರ ಉಪ ರಾಜ್ಯಪಾಲ ಮನೋಜ ಸಿನ್ಹಾರನ್ನು ಭೇಟಿಯಾಗಿದ್ದರು.

‘ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಕೆಟ್ಟದಾಗಿರುವುದರಿಂದ ನಾವು ಸಿನ್ಹಾರನ್ನು ಭೇಟಿಯಾಗಿ ಚರ್ಚಿಸಿದ್ದೇವೆ. ಪ್ರವಾಸಿಗಳು ಕಣಿವೆಗೆ ಭೇಟಿ ನೀಡುತ್ತಿದ್ದಾರೆ,ಆದರೆ ದಿನನಿತ್ಯ ಜನರನ್ನು ಕೊಲ್ಲಲಾಗುತ್ತಿದೆ ’ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್ಲಾ ಹೇಳಿದರು.
‘ನಾವು ಪರಸ್ಪರ ಹತ್ತಿರವಾಗಬೇಕೆಂದರೆ ಈ ದ್ವೇಷವು ಕೊನೆಗೊಳ್ಳಬೇಕು. ಮುಸ್ಲಿಮ್ನೋರ್ವ ಹಿಂದು ವ್ಯಕ್ತಿಯನ್ನು ಕೊಂದು ಆತನ ರಕ್ತದಲ್ಲಿ ಅಕ್ಕಿಯನ್ನು ತೊಳೆದು ಅದನ್ನು ತಿನ್ನುವಂತೆ ಆತನ ಹೆಂಡತಿಗೆ ಹೇಳುವ ದೃಶ್ಯವು ‘ದಿ ಕಾಶ್ಮೀರ ಫೈಲ್ಸ್’ ಚಿತ್ರದಲ್ಲಿದೆ. ಇದು ಆಧಾರರಹಿತ ಚಿತ್ರವಾಗಿದ್ದು ದೇಶದಲ್ಲಿ ದ್ವೇಷವನ್ನು ಸೃಷ್ಟಿಸಿದ್ದು ಮಾತ್ರವಲ್ಲ,ತಮ್ಮನ್ನು ಹೇಗೆ ನೋಡಲಾಗುತ್ತಿದೆ ಎಂಬ ಕಣಿವೆಯ ಯುವಜನರಲ್ಲಿಯ ನೋವಿಗೂ ಕಾರಣವಾಗಿದೆ ’ಎಂದರು.

ಜಮ್ಮು-ಕಾಶ್ಮೀರದ ನಾಯಕರ ಸಹಕಾರದ ಭರವಸೆಯನ್ನು ನೀಡಿದ ಅಬ್ದುಲ್ಲಾ,‘ಶಾಂತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಪ್ರತಿಯೊಂದೂ ಕ್ರಮವನ್ನು ನಾವು ಬೆಂಬಲಿಸುತ್ತೇವೆ. ಕಾನೂನು ಮತ್ತು ಸುವ್ಯವಸ್ಥೆಗೆ ವ್ಯತ್ಯಯವನ್ನು ನಾವು ಬಯಸುವುದಿಲ್ಲ. ಸರಕಾರವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಸಿನ್ಹಾ ನಮಗೆ ಭರವಸೆ ನೀಡಿದ್ದಾರೆ ’ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News