ಅಮಿತ್ ಶಾ ಬಂಧಿತ ಐಎಎಸ್ ಅಧಿಕಾರಿ ಜತೆಗಿದ್ದ ಫೋಟೊ ಶೇರ್; ಚಿತ್ರನಿರ್ಮಾಪಕನ ವಿರುದ್ಧ ಪ್ರಕರಣ ದಾಖಲು

Update: 2022-05-17 02:11 GMT
ಅಮಿತ್ ಶಾ (Photo - PTI)

ಅಹ್ಮದಾಬಾದ್: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾನೂನು ಜಾರಿ ನಿರ್ದೇಶನಾಲಯ ಬಂಧಿಸಿದ ಜಾರ್ಖಂಡ್ ಕೇಡರ್ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಜತೆಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಇದ್ದ ಫೋಟೊವನ್ನು ಶೇರ್ ಮಾಡಿದ ಚಿತ್ರ ನಿರ್ಮಾಪಕ ಅವಿನಾಶ್ ದಾಸ್ ವಿರುದ್ಧ ಗುಜರಾತ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅವಿನಾಶ್ ದಾಸ್ ಈ ತಿಂಗಳ 8ರಂದು ಟ್ವಿಟರ್‌ ನಲ್ಲಿ ಈ ಫೋಟೊ ಶೇರ್ ಮಾಡಿದ್ದರು ಎಂದು ಅಹ್ಮದಾಬಾದ್ ಪೊಲೀಸ್ ಇಲಾಖೆಯ ಅಪರಾಧ ಪತ್ತೆ ವಿಭಾಗದ ಪೊಲೀಸ್ ಇನ್‍ಸ್ಪೆಕ್ಟರ್ ಎಚ್.ಎಂ.ವ್ಯಾಸ್ ಹೇಳಿದ್ದಾರೆ.

ಐದು ವರ್ಷಗಳ ಹಿಂದೆ ಶಾ ಹಾಗೂ ಸಿಂಘಾಲ್ ಅವರು ಸಾರ್ವಜನಿಕ ಸಮಾರಂಭವೊಂದರಲ್ಲಿ ಪಾಲ್ಗೊಂಡ ಫೋಟೊ ಅದಾಗಿದ್ದು, ಅವಿನಾಶ್ ದಾಸ್ ಜನರನ್ನು ತಪ್ಪುದಾರಿಗೆ ಎಳೆಯಲು ಮತ್ತು ಸಚಿವರ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಈ ಚಿತ್ರ ಶೇರ್ ಮಾಡಿದ್ದಾಗಿ ಪೊಲೀಸರು ಆಪಾದಿಸಿದ್ದಾರೆ.

ಮಹಿಳೆಯೊಬ್ಬರು ತ್ರಿವರ್ಣಧ್ವಜವನ್ನು ಧರಿಸಿರುವ ಮಾರ್ಪಡಿಸಲಾದ ಚಿತ್ರವನ್ನು ಫೇಸ್‍ಬುಕ್‍ನಲ್ಲಿ ಮಾರ್ಚ್ 17ರಂದು ಶೇರ್ ಮಾಡಿದ ಕಾರಣಕ್ಕೆ ರಾಷ್ಟ್ರಧ್ವಜವನ್ನು ಅವಮಾನಿಸಿದ ಆರೋಪದಲ್ಲೂ ಪ್ರಕರಣ ದಾಖಲಿಸಲಾಗಿದೆ. ಅವಿನಾಶ್ ದಾಸ್ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 469 (ಫೋರ್ಜರಿ) ಮತ್ತು ಐಟಿ ಕಾಯ್ದೆಯ ಸೆಕ್ಷನ್ 67ರ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ನರೇಗಾ ಯೋಜನೆಯ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ಆರೋಪದಲ್ಲಿ ಜಾರ್ಖಂಡ್ ಗಣಿಗಾರಿಕೆ ಕಾರ್ಯದರ್ಶಿ ಸಿಂಘಾಲ್ ರನ್ನು ಇಡಿ ಬಂಧಿಸಿತ್ತು. ಈ ಸಂಬಂಧ ಲೆಕ್ಕಪರಿಶೋಧಕರೊಬ್ಬರ ಮನೆಯಿಂದ 18 ಕೋಟಿ ರೂಪಾಯಿ ಮೊತ್ತವನ್ನು ವಶಪಡಿಸಿಕೊಂಡಿತ್ತು. ಅವಿನಾಶ್ ದಾಸ್ 2017ರಲ್ಲಿ ಸ್ವರಭಾಸ್ಕರ್, ಸಂಜಯ್ ಮಿಶ್ರಾ ಮತ್ತು ಪಂಕಜ್ ತ್ರಿಪಾಠಿ ನಟಿಸಿರುವ ಅನಾರ್ಕಲಿ ಆಫ್ ಆರಾಹ್ ಚಿತ್ರವನ್ನು ನಿರ್ದೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News