ಟ್ವಿಟರ್ ಖಾತೆಯ ಬ್ಲೂ ಟಿಕ್ ಮರುಸ್ಥಾಪನೆ ಕೋರಿ ಮತ್ತೆ ಅರ್ಜಿ ಸಲ್ಲಿಸಿದ ನಾಗೇಶ್ವರ ರಾವ್‌ ಗೆ ದಂಡ ವಿಧಿಸಿದ ಹೈಕೋರ್ಟ್

Update: 2022-05-17 11:31 GMT
Photo: Twitter

ಹೊಸದಿಲ್ಲಿ: ತಮ್ಮ ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ (ದೃಢೀಕರಣ ಟ್ಯಾಗ್) ಅನ್ನು ಮರುಸ್ಥಾಪಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದ ಸಿಬಿಐನ ಮಾಜಿ ಹಂಗಾಮಿ ನಿರ್ದೇಶಕ ಎಂ ನಾಗೇಶ್ವರ ರಾವ್ ಅವರಿಗೆ ದಿಲ್ಲಿ ಹೈಕೋರ್ಟ್ ರೂ 10,000 ದಂಡ ವಿಧಿಸಿದೆ. ಇಂತಹ ಅರ್ಜಿ ಸಲ್ಲಿಸಲು ಯಾವುದೇ ಸಮರ್ಥನೆಯಿಲ್ಲ ಎಂದು ಎಪ್ರಿಲ್ 7ರಂದು ನ್ಯಾಯಾಲಯ ಆದೇಶ ಹೊರಡಿಸಿದ ಹೊರತಾಗಿಯೂ ಇಷ್ಟು ಬೇಗ ಮತ್ತೆ ಅರ್ಜಿ ಸಲ್ಲಿಸಲು  ಯಾವುದೇ ಕಾರಣವಿಲ್ಲ  ಹಾಗೂ ಟ್ವಿಟ್ಟರ್‍ಗೆ ಈ ವಿಷಯ ಇತ್ಯರ್ಥ ಪಡಿಸಲು ಸಾಕಷ್ಟು ಸಮಯವಿಲ್ಲದೇ ಇದ್ದಿರಬಹುದು ಎಂದು ನ್ಯಾಯಮೂರ್ತಿ ಯಶವಂತ್ ವರ್ಮ ಅವರ ಏಕಸದಸ್ಯ ಪೀಠ ಹೇಳಿದೆ.

"ನಾವು ಎಪ್ರಿಲ್ 7ರಂದು ಆದೇಶ ಹೊರಡಿಸಿದ್ದೆವು. ತಕ್ಷಣ ಟ್ವಿಟ್ಟರ್ ಅನ್ನು ಸಂಪರ್ಕಿಸಲು ಏನು ಅಡ್ಡಿಯಾಗಿತ್ತು. ನಿಮ್ಮ ಕಕ್ಷಿಗಾರರಿಗೆ ಸಾಕಷ್ಟು ಸಮಯವಿರುವಂತಿದೆ. ನಮ್ಮಿಂದ ರಿಟರ್ನ್ ಗಿಫ್ಟ್ ಬೇಕೇನು?" ಎಂದು ವಿಚಾರಣೆ ವೇಳೆ ನ್ಯಾಯಾಧೀಶರು ಖಾರವಾಗಿ ಪ್ರತಿಕ್ರಿಯಿಸಿದರು.

ತಮ್ಮ ಕಕ್ಷಿಗಾರರು ಎಪ್ರಿಲ್ 18ರಂದು ಟ್ವಿಟ್ಟರ್ ಅನ್ನು ಸಂಪರ್ಕಿಸಿದ್ದು ಅವರ ಖಾತೆಯ ಬ್ಲೂ ಟಿಕ್ ಅನ್ನು ಇನ್ನಷ್ಟೇ ಮರುಸ್ಥಾಪಿಸಬೇಕಿದೆ ಎಂದು ವಕೀಲ ರಾಘವ್ ಅವಸ್ಥಿ ಹೇಳಿದರು.

ಇಂತಹುದೇ ಅಪೀಲು ಇರುವ ಇತರ ಪ್ರಕರಣಗಳೊಂದಿಗೆ ಈ ಪ್ರಕರಣವನ್ನೂ ವಿಚಾರಣೆ ನಡೆಸಬೇಕೆಂದು ಅವರು ಕೋರಿದರೂ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ ದಂಡವನ್ನೂ ಹೇರಿದೆ.

ಮಾರ್ಚ್ ತಿಂಗಳಲ್ಲಿ ರಾವ್ ಅವರ ಟ್ವಿಟ್ಟರ್ ಖಾತೆಯ ಬ್ಲೂ ಟಿಕ್ ಅನ್ನು ತೆಗೆದುಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ನ್ಯಾಯಾಲಯದ ಮೊರೆ ಹೋದಾಗ ಈ ವಿಚಾರದಲ್ಲಿ ಹಸ್ತಕ್ಷೇಪ ನಡೆಸಲು ನಿರಾಕರಿಸಿದ ನ್ಯಾಯಾಲಯ ಮೊದಲು ಟ್ವಿಟ್ಟರ್ ಅನ್ನು ಸಂಪರ್ಕಿಸುವಂತೆ ಹೇಳಿತ್ತು.

ಆದರೆ ಹಲವಾರು ಬಾರಿ ಟ್ವಿಟ್ಟರ್ ಅನ್ನು ಸಂಪರ್ಕಿಸಿದ್ದರೂ ಪ್ರತಿಕ್ರಿಯೆ ದೊರಕಿಲ್ಲ ಎಂದು ಅವರು ದೂರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News