ಬಾಲವನ ಅಭಿವೃದ್ದಿಯ ಅನುದಾನ ಖರ್ಚು ಮಾಡಿಲ್ಲ ಯಾಕೆ; ಸಚಿವ ಸುನಿಲ್ ಕುಮಾರ್ ಆಕ್ರೋಶ

Update: 2022-05-17 12:53 GMT

ಪುತ್ತೂರು: ಕಡಲ ತಡಿಯ ಭಾರ್ಗವ ಕೋಟ ಶಿವರಾಮ ಕಾರಂತರು ತಮ್ಮ ಜೀವಿತಾವಧಿಯ ಅರ್ಧ ಭಾಗವನ್ನು ಕಳೆದಿದ್ದ ಪುತ್ತೂರಿನ ಬಾಲವನದಲ್ಲಿ ನಡೆಯುತ್ತಿರುವ ಕಾರಂತ ಸ್ಮರಣೆಯ ಪುನಶ್ಚೇತನ ಯೋಜನೆಗೆ 5 ವರ್ಷಗಳ ಹಿಂದೆ ಮಂಜೂರಾದ ಅನುದಾನ ಇನ್ನೂ ಖರ್ಚಾಗದೆ ಉಳಿದಿರುವ ಬಗ್ಗೆ ರಾಜ್ಯ ಕನ್ನಡ ಮತ್ತು ಸಂ‌ಸ್ಕೃತಿ ಖಾತೆಯ ಸಚಿವ ವಿ. ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಲಾಖೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಕಾರಂತರ ಕರ್ಮಭೂಮಿಗೆ ಮಂಗಳವಾರ ಭೇಟಿ ನೀಡಿದ ಅವರು, ಬಾಲವನ ಅಭಿವೃದ್ಧಿಗೆ ಸಂಬಂಧಿಸಿ ನಡೆದ ಕಾಮಗಾರಿಗಳನ್ನು ಪರಿಶೀಲಿಸಿದರು.

2015ರಲ್ಲಿ ಕಾರಂತರ ಮೂಲ ಮನೆ ನಾದುರಸ್ತಿ ತಲುಪಿದಾಗ ರಾಜ್ಯ ಸರಕಾರ 30 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿತ್ತು. ಇದರಲ್ಲಿ 29 ಲಕ್ಷ ರೂ. ಖರ್ಚು ಮಾಡಿ ಮನೆಯ ಪುನಶ್ಚೇತನ ನಡೆಸಲಾಗಿದ್ದು, 1 ಲಕ್ಷ ರೂ. ಉಳಿಕೆಯಾಗಿದೆ. ಇದರ ಬೆನ್ನಲ್ಲೇ, ಬಾಲವನದಲ್ಲಿರುವ ಕಾರಂತರ ಗ್ರಂಥಾಲಯ, ನಾಟ್ಯಾಲಯ ಮತ್ತಿತರ ಕಟ್ಟಡಗಳ ಪುನಶ್ಚೇತನಕ್ಕಾಗಿ 1 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಆರೇಳು ವರ್ಷ ಕಳೆದರೂ ಈ ಮೊತ್ತದಲ್ಲಿ ಕೇವಲ 16.68 ಲಕ್ಷ ರೂ. ಮಾತ್ರ ಖರ್ಚಾಗಿದೆ. 83.32 ಲಕ್ಷ ರೂ. ಉಳಿಕೆಯಾಗಿದೆ ಎಂಬುದನ್ನು ಸಹಾಯಕ ಆಯುಕ್ತ ಗಿರೀಶ್ ನಂದನ್ ಮಂಡಿಸಿದರು.

ಇದರಿಂದ ಆಕ್ರೋಶಗೊಂಡ ಸಚಿವರು, ಇಷ್ಟು ಸಮಯವಾದರೂ ಈ ಹಣ ಖರ್ಚು ಮಾಡಿ ಕೆಲಸ ಮಾಡಿಲ್ಲ. ಕಾರಂತರ ನಾಟ್ಯಶಾಲೆ ಈಗಲೂ ನಾದುರಸ್ತಿಯಲ್ಲೇ ಇದೆ ಎಂದರು. ಇದಕ್ಕೆ ಉತ್ತರಿಸಿದ ಶಾಸಕ ಸಂಜೀವ ಮಠಂದೂರು, ಬೆಂಗಳೂರು ಮೂಲದ ಇಂಟ್ಯಾಕ್ ಸಂಸ್ಥೆಗೆ ಕಾಮಗಾರಿ ನೀಡಲಾಗಿತ್ತು. ಅವರು 3 ವರ್ಷ ಕಳೆದರೂ ಇನ್ನೂ ಕಾಮಗಾರಿ ಮಾಡಿಲ್ಲ. ಕಾರಂತರ ಮನೆ ಮತ್ತು ಗ್ರಂಥಾಲಯದ ಕೆಲಸ ಮಾತ್ರ ಮಾಡಿದ್ದಾರೆ ಎಂದರು. ಸಹಾಯಕ ಆಯುಕ್ತರು ಉತ್ತರಿಸಿ, ಈಗಾಗಲೇ ನಡೆದ ಕಾಮಗಾರಿಯಲ್ಲೂ ಇಂಟ್ಯಾಕ್ ಬೆಂಗಳೂರು ಸಂಸ್ಥೆಗೆ 3 ಲಕ್ಷ ನೀಡಲು ಬಾಕಿ ಇದೆ. ಅದಕ್ಕೆ ಅವರು ಇನ್ನೂ ಕೂಡ ಬಿಲ್ ನೀಡಿಲ್ಲ ಎಂದರು.

ಮುಂದಿನ ಕಾಮಗಾರಿ ನಿರ್ವಹಿಸಲು ಇಂಟ್ಯಾಕ್ ಮಂಗಳೂರು ಚಾಪ್ಟರ್‍ಗೆ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನುಡಿದರು. ಸಂಸ್ಥೆಯ ಪ್ರತಿನಿಧಿ ನಿರೇನ್ ಜೈನ್ ಉತ್ತರಿಸಿ, ನಾವು ಯೋಜನಾ ವರದಿ ಸಿದ್ಧಪಡಿಸಿ ಲೋಕೋಪಯೋಗಿ ಇಲಾಖೆಗೆ ಅನುಮೋದನೆಗೆ ಕಳುಹಿಸಿದ್ದೇವೆ ಎಂದರು. ಇದರಿಂದ ಅಸಮಾಧಾನಗೊಂಡ ಸಚಿವರು, ನೀವಿದನ್ನು ಲೋಕೋಪಯೋಗಿ ಇಲಾಖೆಗೆ ಕಳಿಸಬೇಕಿಲ್ಲ. ಕೆಲಸ ಆರಂಭಿಸಿ ಎಂದರು.

ಇಲ್ಲಿ ಕೇವಲ ಕಟ್ಟಡ ಕಟ್ಟಿದರೆ ಸಾಲದು, ಕಾರಂತರ ಕಾಲದ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಂಡು ಪುನಶ್ಚೇತನ ಮಾಡಿ, ಅದರ ಜತೆಗೆ ಕಾರಂತರ ಸಾಹಿತ್ಯ, ಅವರ ರಂಗಭೂಮಿ, ಯಕ್ಷಗಾನ, ನಾಟ್ಯ ಚಟುವಟಿಕೆ ಇತ್ಯಾದಿಗಳನ್ನು ತೋರಿಸುವ ಅತ್ಯುತ್ತಮ ಗ್ಯಾಲರಿಗಳು ಇರಲಿ. ಇಲ್ಲಿಗೆ ಭೇಟಿ ನೀಡುವ ಯುವ ಜನತೆ ಕಾರಂತರಿಂದ ಸ್ಪೂರ್ತಿ ಪಡೆಯುವಂತೆ ಮಾಡಿ, ಮತ್ತೆ ಮತ್ತೆ ಹೊಸ ಕಟ್ಟಡ ಕಟ್ಟುವುದಾದರೆ ನಾನು ಹಣ ಕೊಡಲಾರೆ. ಇರುವ ಕಟ್ಟಡ ಉಳಿಸಿಕೊಂಡು ಪರಂಪರೆಯ ಜತೆ ಹೊಸದೇನಾದರೂ ಚಟುವಟಿಕೆಗೆ ಅವಕಾಶ ಇರುವಂತೆ ಮಾಡಿ. ಗ್ರಂಥಾಲಯ ಎಂದರೆ ಕೇವಲ ಪುಸ್ತಕ ಓದುವುದಷ್ಟೇ ಆಗಬಾರದು. ಡಿಜಿಟಲ್ ಗ್ರಂಥಾಲಯವೂ ಇರಲಿ ಎಂದರು.

ಶಿವರಾಮ ಕಾರಂತ ಈಜುಕೊಳ ಪುತ್ತೂರಿನ ಹೆಮ್ಮೆ. ಆದರೆ ಇದರ ಪ್ರವೇಶ ದ್ವಾರ ಮತ್ತು ಬಾಲವನದ ದ್ವಾರ ಒಂದೇ ಇರಬಾರದು. ಈಜುಕೊಳಕ್ಕೆ ಪ್ರತ್ಯೇಕ ಪ್ರವೇಶ ದ್ವಾರ ಕೊಡಬೇಕು ಎಂದು ಸಭೆಯಲ್ಲಿ ಆಗ್ರಹ ಕೇಳಿ ಬಂತು. ಇದಕ್ಕೆ ಸಚಿವರು ಸಮ್ಮತಿಸಿದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಸಹಾಯಕ ಆಯುಕ್ತರಾದ ಗಿರೀಶ್ ನಂದನ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ನಗರಸಭೆ ಅಧ್ಯಕ್ಷ ಜೀವಂಧರ ಜೈನ್, ನಗರಸಭೆ ಸದಸ್ಯೆ ದೀಕ್ಷಾ ಪೈ, ಸಾಹಿತಿಗಳಾದ ವಿ.ಬಿ. ಅರ್ತಿಕಜೆ, ವರದರಾಜ ಚಂದ್ರಗಿರಿ, ರಂಗಕರ್ಮಿ ಜೀವನರಾಂ ಸುಳ್ಯ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಉಮೇಶ್ ನಾಯಕ್ ಉಪಸ್ಥಿತರಿದ್ದರು.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಚಿವರು, ಹಾಲಿ ಕಾಮಗಾರಿ ಮತ್ತು ಭವಿಷ್ಯದ ಯೋಜನೆ ಬಗ್ಗೆ ಶಾಸಕರ ಸಮ್ಮುಖದಲ್ಲಿ ಕುಳಿತು ಅಧಿಕಾರಿಗಳು ಸಮಗ್ರ ಯೋಜನಾ ವರದಿ ತಯಾರಿಸಿ ಕೊಡಿ. ಅದಕ್ಕೆ ಬೇಕಾದ ಹೆಚ್ಚುವರಿ ಅನುದಾನ ನೀಡಲಾಗುವುದು. ಕಾರಂತರ ಜೀವನ ಕಥೆ ಹೇಳುವ ಧ್ವನಿ ಮತ್ತು ಚಿತ್ರ ಇರುವ ಸ್ಟುಡಿಯೋ ಬೇಕು. ಮೊದಲು ಖರ್ಚಾಗದೆ ಉಳಿದ ಹಣವನ್ನು ಸದ್ವಿನಿಯೋಗ ಮಾಡಬೇಕು. ಉಳಿಕೆ ಕಾಮಗಾರಿ ಶೀಘ್ರ ಆರಂಭವಾಗಬೇಕು ಎಂದರು. ಈಗಿರುವ ರಾಜ್ಯ ಮಟ್ಟದ ಸಮಿತಿ ಮತ್ತು ಸ್ಥಳೀಯ ಸಮಿತಿ ಎಂಬಿತ್ಯಾದಿ ಗೊಂದಲ ನಿವಾರಿಸಲು ಸ್ಥಳೀಯರನ್ನೂ ಒಳಗೊಂಡ ರಾಜ್ಯ ಮಟ್ಟದ ಕ್ರಿಯಾಶೀಲ ಸಮಿತಿ ರಚಿಸಲಾಗುವುದು. ಇದಕ್ಕೆ ಶಾಸಕರಿಂದ ಪ್ರಸ್ತಾವನೆ ಪಡೆಯಲಾಗುವುದು ಎಂದವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News