2ಜಿ ಹಗರಣದಲ್ಲಿ ದಶಕವೇ ಕಳೆದುಹೋಯಿತು, ಭಾರತವೀಗ 5ಜಿ,6ಜಿಯತ್ತ ಸಾಗುತ್ತಿದೆ: ಪ್ರಧಾನಿ

Update: 2022-05-17 17:47 GMT

ಹೊಸದಿಲ್ಲಿ,ಮೇ 17: ಕಾಂಗ್ರೆಸ್ ವಿರುದ್ಧ ಮಂಗಳವಾರ ಪರೋಕ್ಷ ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು,ನೀತಿ ನಿಷ್ಕ್ರಿಯತೆ ಮತ್ತು 2ಜಿ ಭ್ರಷ್ಟಾಚಾರದಲ್ಲಿ ದಶಕವನ್ನು ಕಳೆದುಕೊಂಡ ಬಳಿಕ ದೇಶವು ದೂರಸಂಪರ್ಕ ಕ್ಷೇತ್ರದಲ್ಲಿ ದಾಪುಗಾಲನ್ನಿಡುತ್ತಿದೆ ಮತ್ತು 5ಜಿ ಹಾಗೂ 6ಜಿ ಪ್ರತಿ ಕ್ಷೇತ್ರದಲ್ಲಿಯೂ ಬೆಳವಣಿಗೆಯನ್ನು ಹೆಚ್ಚಿಸಲು ನೆರವಾಗಲಿವೆ ಎಂದು ಹೇಳಿದರು.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ದ ಬೆಳ್ಳಿಹಬ್ಬ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮೋದಿ,2ಜಿ ಯುಗದ ನಿರಾಶೆ,ಹತಾಶೆ,ಭ್ರಷ್ಟಾಚಾರ ಮತ್ತು ನೀತಿ ನಿಷ್ಕ್ರಿಯತೆಯಿಂದ ಹೊರಬಂದಿರುವ ದೇಶವು 3ಜಿಯಿಂದ 4ಜಿಗೆ ತ್ವರಿತ ಬೆಳವಣಿಗೆಯನ್ನು ಸಾಧಿಸಿದೆ ಮತ್ತು ಈಗ 5ಜಿ ಮತ್ತು 6ಜಿಯತ್ತ ತ್ವರಿತವಾಗಿ ಸಾಗುತ್ತಿದೆ. ಸ್ವಾವಲಂಬನೆ ಮತ್ತು ಆರೋಗ್ಯಕರ ಸ್ಪರ್ಧೆ ಹೇಗೆ ಸಮಾಜದಲ್ಲಿ ಮತ್ತು ಆರ್ಥಿಕತೆಯಲ್ಲಿ ಬಹುಮುಖಿ ಪರಿಣಾಮಗಳನ್ನು ಬೀರುತ್ತದೆ ಎನ್ನುವುದಕ್ಕೆ ನಮ್ಮ ದೂರಸಂಪರ್ಕ ಕ್ಷೇತ್ರವು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು.


220 ಕೋ.ರೂ.ಗೂ ಹೆಚ್ಚಿನ ವೆಚ್ಚದಲ್ಲಿ ಐಐಟಿ ಮದ್ರಾಸ್ ನೇತೃತ್ವದಲ್ಲಿ ಎಂಟು ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಗೊಳಿಸಿರುವ ‘5ಜಿ ಟೆಸ್ಟ್‌ಬೆಡ್ ’ಗೆ ಚಾಲನೆ ನೀಡಿದ ಮೋದಿ,5ಜಿ ಟೆಸ್ಟ್‌ಬೆಡ್ ದೂರಸಂಪರ್ಕ ಕ್ಷೇತ್ರದಲ್ಲಿ ನಿರ್ಣಾಯಕ ಮತ್ತು ಆಧುನಿಕ ತಂತ್ರಜ್ಞಾನದಲ್ಲಿ ದೇಶದ ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆಯಾಗಿದೆ. 5ಜಿ ತಂತ್ರಜ್ಞಾನವು ದೇಶದ ಆಡಳಿತದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಲಿದೆ,ಜೀವನ ಮತ್ತು ವ್ಯವಹಾರಗಳನ್ನು ಹೆಚ್ಚು ಸುಗಮವಾಗಿಸಲಿದೆ. ಅದು ಕೃಷಿ,ಆರೋಗ್ಯ,ಶಿಕ್ಷಣ,ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಪ್ರತಿಯೊಂದೂ ಕ್ಷೇತ್ರದಲ್ಲಿ ಬೆಳವಣಿಗೆಯನ್ನು ಉತ್ತೇಜಿಸಲಿದೆ. ಅದು ಹಲವಾರು ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಿದೆ ಎಂದು ಹೇಳಿದರು.

ಸಂಪರ್ಕ ಸೌಲಭ್ಯವು 21ನೇ ಶತಮಾನದಲ್ಲಿ ಪ್ರಗತಿಯ ವೇಗವನ್ನು ನಿರ್ಧರಿಸುತ್ತದೆ ಎಂದು ಹೇಳಿದ ಅವರು,ಪ್ರತಿ ಹಂತದಲ್ಲಿಯೂ ಸಂಪರ್ಕದ ಆಧುನೀಕರಣಕ್ಕೆ ಒತ್ತು ನೀಡಿದರು.

ಇಂದು ದೇಶದಲ್ಲಿಯ ಪ್ರತಿಯೊಂದು ಗ್ರಾಮವನ್ನು ಆಪ್ಟಿಕಲ್ ಫೈಬರ್ನೊಂದಿಗೆ ಜೋಡಣೆಗೊಳಿಸಲಾಗುತ್ತಿದೆ ಎಂದ ಪ್ರಧಾನಿ, ‘2014ಕ್ಕೆ ಮೊದಲು ದೇಶದಲ್ಲಿಯ ನೂರು ಗ್ರಾಮ ಪಂಚಾಯತ್ಗಳಿಗೆ ಸಹ ಆಪ್ಟಿಕಲ್ ಫೈಬರ್ ಸಂಪರ್ಕವಿರಲಿಲ್ಲ. ಇಂದು ಬ್ರಾಡ್ ಬ್ರಾಂಡ್ ಸಂಪರ್ಕವು ಸುಮಾರು 2.5 ಲ.ಗ್ರಾಮ ಪಂಚಾಯತ್ಗಳನ್ನು ತಲುಪಿದೆ. ಕಡುಬಡತನದ ಕುಟುಂಬಗಳೂ ಮೊಬೈಲ್ ಹೊಂದಿರುವುದನ್ನು ಸಾಧ್ಯವಾಗಿಸಲು ನಾವು ದೇಶದಲ್ಲಿಯೇ ಮೊಬೈಲ್ ಫೋನ್‌ಗಳ ತಯಾರಿಕೆಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಇದರ ಪರಿಣಾಮವಾಗಿ ಇಂದು ಮೊಬೈಲ್ ಪೋನ್ ತಯಾರಿಕೆ ಘಟಕಗಳ ಸಂಖ್ಯೆ ಎರಡರಿಂದ 200ಕ್ಕೂ ಅಧಿಕಕ್ಕೆ ಏರಿದೆ ’ಎಂದರು.ದೂರಸಂಪರ್ಕ ಸಾಂದ್ರತೆ ಮತ್ತು ಅಂತರ್ಜಾಲ ಬಳಕೆದಾರರ ವಿಷಯದಲ್ಲಿ ಭಾರತವು ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ. ಇದರಲ್ಲಿ ಟ್ರಾಯ್ ಅತ್ಯಂತ ಮುಖ್ಯ ಪಾತ್ರವನ್ನು ವಹಿಸಿದೆ ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News