ಜಮ್ಮುಕಾಶ್ಮೀರ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಕುರಿತು ಪಾಕ್ ನಿರ್ಣಯಕ್ಕೆ ಭಾರತದ ತಿರಸ್ಕಾರ

Update: 2022-05-17 19:02 GMT

ಹೊಸದಿಲ್ಲಿ,ಮೇ 17: ಜಮ್ಮು-ಕಾಶ್ಮೀರದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಕುರಿತು ಪಾಕಿಸ್ತಾನದ ರಾಷ್ಟ್ರೀಯ ಸಂಸತ್ತು ಅಂಗೀಕರಿಸಿರುವ ನಿರ್ಣಯವನ್ನು ‘ಪ್ರಹಸನ ’ಎಂದು ಭಾರತವು ಬಣ್ಣಿಸಿದೆ. ‘ಈ ಪ್ರಹಸನದ ನಿರ್ಣಯವನ್ನು ನಾವು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ ’ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಂಗಳವಾರ ಹೇಳಿದೆ.

ಪಾಕಿಸ್ತಾನದ ಅಕ್ರಮ ವಶದಲ್ಲಿರುವ ಭಾರತೀಯ ಭೂಪ್ರದೇಶಗಳು ಸೇರಿದಂತೆ ದೇಶದ ಆಂತರಿಕ ವಿಷಯಗಳಲ್ಲಿ ಹೇಳಿಕೆಗಳನ್ನು ನೀಡಲು ಅಥವಾ ಮೂಗು ತೂರಿಸಲು ಪಾಕ್ಗೆ ಯಾವುದೇ ಅಧಿಕಾರ ಸ್ಥಾನವಿಲ್ಲ ಎಂದು ಸಚಿವಾಲಯವು ಹೇಳಿಕೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಪಾಕಿಸ್ತಾನದ ಸಂಸತ್ತು ಕಳೆದ ಗುರುವಾರ ಭಾರತದ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಖಂಡಿಸಿ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತ್ತು.
 
ನಿರ್ಣಯವನ್ನು ಮಂಡಿಸಿದ್ದ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಝರ್ದಾರಿ ಅವರು,ಭಾರತದ ಕ್ರಮವು ಜಮ್ಮು-ಕಾಶ್ಮೀರದ ಬಹುಸಂಖ್ಯಾಕ ಮುಸ್ಲಿಂ ಸಮುದಾಯದ ಮತದಾರರ ಬಲವನ್ನು ಕೃತಕವಾಗಿ ಬದಲಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು,ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯು ಪ್ರಜಾಸತ್ತಾತ್ಮಕವಾಗಿದೆ ಹಾಗೂ ಪಾಲುದಾರರೊಂದಿಗೆ ವ್ಯಾಪಕ ಸಮಾಲೋಚನೆಗಳು ಮತ್ತು ಅವರ ಪಾಲ್ಗೊಳ್ಳುವಿಕೆಯ ತತ್ತ್ವಗಳನ್ನು ಆಧರಿಸಿದೆ ಎಂದು ಹೇಳಿದೆ.

ಪಾಕಿಸ್ತಾನದಲ್ಲಿಯ ರಾಜಕೀಯ ಸ್ಥಿತಿಯನ್ನೂ ಟೀಕಿಸಿರುವ ಸಚಿವಾಲಯವು,ಪಾಕ್ ನಾಯಕತ್ವವು ತನ್ನ ಸ್ವಂತ ಮನೆಯನ್ನು ಕ್ರಮಬದ್ಧವಾಗಿ ಇಟ್ಟುಕೊಳ್ಳುವ ಬದಲು ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪವನ್ನು ಮುಂದುವರಿಸಿರುವುದು ಮತ್ತು ಆಧಾರರಹಿತ ಹಾಗೂ ಪ್ರಚೋದನಾಕಾರಿ ಭಾರತ ವಿರೋಧಿ ಪ್ರಚಾರದಲ್ಲಿ ತೊಡಗಿರುವುದು ವಿಷಾದನೀಯವಾಗಿದೆ ಎಂದೂ ಹೇಳಿದೆ. ಭಾರತ ವಿರೋಧಿ ಗಡಿಯಾಚೆಯ ಭಯೋತ್ಪಾದನೆಯನ್ನು ತಕ್ಷಣ ನಿಲ್ಲಿಸುವಂತೆ ಮತ್ತು ತನ್ನ ಭಯೋತ್ಪಾದನೆ ಮೂಲಸೌಕರ್ಯಗಳನ್ನು ಮುಚ್ಚುವಂತೆ ಭಾರತವು ಪಾಕ್ಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News