‘‘ಇಲ್ಲಿ ಸಹಜ ಸ್ಥಿತಿ ಮರಳಿಲ್ಲ, ಕೇವಲ ಚಿತ್ರಗಳನ್ನು ನಿರ್ಮಿಸುವುದರಿಂದ ಏನೂ ಉಪಯೋಗವಿಲ್ಲ’’

Update: 2022-05-18 04:32 GMT

‘‘ಚಿತ್ರವನ್ನು ಮಾಡಿದ್ದಾಯಿತು, ಅದನ್ನು ಉತ್ತೇಜಿಸಿದ್ದೂ ಆಯಿತು. ಬಿಜೆಪಿಯು ಈಗ ಏನಾದರೂ ನಿಜವಾದ ಕೆಲಸವನ್ನು ಮಾಡಬೇಕು’’ ಎನ್ನುವ ರಮೇಶ್ ಕೌಲ್, ‘‘ಇನ್ನಷ್ಟು ದ್ವೇಷವನ್ನು ನಾವು ಬಯಸುವುದಿಲ್ಲ. ಕಾಶ್ಮೀರವು ಸೂಕ್ಷ್ಮವಾದ ಸ್ಥಳವಾಗಿದೆ. ಇಲ್ಲಿ ಹಿಂದೂ-ಮುಸ್ಲಿಮ್ ಆಟವಾಡುವುದು ಇನ್ನಷ್ಟು ಹಾನಿಯನ್ನುಂಟು ಮಾಡುತ್ತದೆಯಷ್ಟೇ’’ ಎನ್ನುತ್ತಾರೆ.

ಇಲ್ಲಿ ಯಾವುದೂ ಸಹಜವಾಗಿಲ್ಲ. ಕೇವಲ ಚಿತ್ರಗಳನ್ನು ಮಾಡುವುದರಿಂದ ಏನೂ ಪ್ರಯೋಜನವಿಲ್ಲ; ಇದು ಕೇಂದ್ರ ಸರಕಾರ ಮಾತ್ರವಲ್ಲ, ಬಿಜೆಪಿ ಆಡಳಿತದ ಹಲವಾರು ರಾಜ್ಯಗಳಿಂದ ಭಾರೀ ಪ್ರೋತ್ಸಾಹವನ್ನು ಪಡೆದುಕೊಂಡಿರುವ ವಿವೇಕ್ ಅಗ್ನಿಹೋತ್ರಿಯವರ ‘ದಿ ಕಾಶ್ಮೀರ್ ಫೈಲ್ಸ್’ ಕುರಿತು ಸುದ್ದಿ ಜಾಲತಾಣ thewire.in ಕಾಶ್ಮೀರಿ ಪಂಡಿತರನ್ನು ಪ್ರಶ್ನಿಸಿದಾಗ ಲಭಿಸಿದ ಒಟ್ಟಾರೆ ಉತ್ತರದ ಸಾರಾಂಶ.

ಚಿತ್ರದಲ್ಲಿ ಉಲ್ಲೇಖಿಸಲಾಗಿರುವ ಘಟನೆಗಳು ನಡೆದಿದ್ದವು ನಿಜ, ಆದರೆ ಚಿತ್ರೀಕರಣ ತಪ್ಪಾಗಿದೆ. ಎಲ್ಲ ಕಾಶ್ಮೀರಿ ಮುಸ್ಲಿಮರಿಗೆ ‘ಜಿಹಾದಿಗಳು’ ಎಂದು ಹಣೆಪಟ್ಟಿಯನ್ನು ಅಂಟಿಸಲಾಗಿದೆ. ಕಾಶ್ಮೀರಿ ಮುಸ್ಲಿಮರು ಹೃದಯದಿಂದ ಭಾರತೀಯರಾಗಿದ್ದಾರೆ. ತಮ್ಮನ್ನು ಚಿತ್ರದಲ್ಲಿ ಬಿಂಬಿಸಿರುವುದನ್ನು ನೋಡಿ ಕಳೆದ 70 ವರ್ಷಗಳಲ್ಲಿ ಭಾರತದೊಂದಿಗಿನ ತಮ್ಮ ಬಾಂಧವ್ಯದ ಕುರಿತು ಅವರು ಏನು ಭಾವಿಸಿರಬಹುದು ಎನ್ನ್ನುವುದನ್ನು ಸುಮ್ಮನೆ ಊಹಿಸಿ ಎಂದು thewire.in ಜೊತೆ ಮಾತನಾಡಿದ ಕಾಶ್ಮೀರ ಪಂಡಿತ ಸಂಘರ್ಷ ಸಮಿತಿ (ಕೆಪಿಎಸ್‌ಎಸ್)ಯ ನಾಯಕ ಸಂಜಯ್ ಟಿಕೂ ಹೇಳಿದರು.

ಎ.12ರಂದು ಬುಡ್ಗಾಮ್ ಜಿಲ್ಲೆಯ ಚಾದೂರಾ ತಾಲೂಕು ಕಚೇರಿಗೆ ನುಗ್ಗಿದ ಇಬ್ಬರು ಲಷ್ಕರೆ ತಯ್ಯಿಬಾ ಭಯೋತ್ಪಾದಕರು ಅಲ್ಲಿಯ ಉದ್ಯೋಗಿ, ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಸೇರಿದ ರಾಹುಲ್ ಭಟ್‌ರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು. ಇದರ ಬೆನ್ನಿಗೇ ಬುಡ್ಗಾಮ್,ಶ್ರೀನಗರ ಸೇರಿದಂತೆ ಹಲವೆಡೆ ಕಾಶ್ಮೀರಿ ಪಂಡಿತರು ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಿದ್ದರು. ಪ್ರತಿಭಟನಾಕಾರರು ‘‘ಮೋದಿ ಹಾಯೆ ಹಾಯೆ, ಅಮಿತ್ ಶಾ ಹಾಯೆ ಹಾಯೆ, ಬಿಜೆಪಿ ಹಾಯೆ ಹಾಯೆ’’ ಎಂದು ಕೂಗುತ್ತಿದ್ದುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳು ತೋರಿಸುತ್ತಿವೆ.

ಚಾದೂರಾದಲ್ಲಿ ಕರ್ತವ್ಯ ನಿರ್ವಹಿಸುವಾಗ ತನ್ನ ಪತಿ ಅಭದ್ರತೆಯ ಭಾವನೆಯನ್ನು ಅನುಭವಿಸುತ್ತಿದ್ದರು. ತನ್ನನ್ನು ಜಿಲ್ಲಾ ಕೇಂದ್ರಕ್ಕೆ ವರ್ಗಾಯಿಸುವಂತೆ ಅವರು ಸ್ಥಳೀಯಾಡಳಿತವನ್ನು ಕೋರಿಕೊಂಡಿದ್ದರು. ಪದೇ ಪದೇ ಕೋರಿಕೊಂಡಿದ್ದರೂ ಅವರನ್ನು ಜಿಲ್ಲಾ ಕೇಂದ್ರಕ್ಕೆ ವರ್ಗಾವಣೆ ಮಾಡಿರಲಿಲ್ಲ ಎಂದು ಭಟ್ ಪತ್ನಿ ಮೀನಾಕ್ಷಿ ಅಳಲು ತೋಡಿಕೊಂಡರು.

2019ರಿಂದ ಜಮ್ಮು-ಕಾಶ್ಮೀರದಲ್ಲಿ 14 ಹಿಂದೂಗಳನ್ನು ಕೊಲ್ಲಲಾಗಿದ್ದು,ಈ ಪೈಕಿ ನಾಲ್ವರು ಕಾಶ್ಮೀರಿ ಪಂಡಿತರಾಗಿದ್ದರು ಎಂದು ಕೇಂದ್ರ ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಎ.6ರಂದು ತಿಳಿಸಿದ್ದರು.

ಕಣಿವೆಯಲ್ಲಿ ಕಾಶ್ಮೀರಿ ಪಂಡಿತರ ಪುನರ್ವಸತಿಗೆ ಜಮ್ಮು-ಕಾಶ್ಮೀರ ಆಡಳಿತ ಮತ್ತು ಕೇಂದ್ರ ಸರಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ಹೇಳಿದ ಟಿಕೂ, ಉಗ್ರವಾದವಿಲ್ಲ ಎಂದು ಸರಕಾರವು ಹೇಳುತ್ತಿದೆ, ಆದರೆ ಕಳೆದೊಂದು ವರ್ಷದಲ್ಲಿ ಉಗ್ರರ ಹಾವಳಿ ಹೆಚ್ಚುತ್ತಲೇ ಇದೆ. ಗಣ್ಯರು, ನಿಯೋಗಗಳನ್ನು ಇಲ್ಲಿಗೆ ಕರೆತಂದು ಅವರಿಗೆ ದಾಲ್ ಸರೋವರವನ್ನು ತೋರಿಸಲಾಗುತ್ತಿದೆ. ಪ್ರವಾಸಿಗಳು ತಮ್ಮ 10 ದಿನಗಳ ವಾಸ್ತವ್ಯದಲ್ಲಿ ‘‘ಇಲ್ಲಿ ಎಲ್ಲವೂ ಸಹಜವಾಗಿದೆ’’ ಎಂಬ ಅದೇ ಸವಕಲು ನಿರೂಪಣೆಯನ್ನು ನೀಡುತ್ತಾರೆ. ಆದರೆ ಇಲ್ಲಿಯ ಪರಿಸ್ಥಿತಿಯು ಕೆಲವು ಮಾಧ್ಯಮಗಳು ಬಿಂಬಿಸಿರುವಷ್ಟು ಉತ್ತಮವಾಗಿಲ್ಲ ಮತ್ತು ಬೃಹತ್ ರಾಜಕೀಯ ನಿರ್ವಾತವಂತೂ ಇದ್ದೇ ಇದೆ ಎಂದರು.

370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಭಾರತ ಸರಕಾರವು ಏನನ್ನೂ ಸಾಧಿಸಿಲ್ಲ ಎಂದು ಪ್ರತಿಪಾದಿಸಿದ ಅವರು, ಕಣಿವೆಯಿಂದ ಉಗ್ರವಾದವು ನಿರ್ನಾಮಗೊಂಡಿಲ್ಲ ಮತ್ತು ಆಗಸ್ಟ್, 2019ರಿಂದೀಚೆಗೆ ಸ್ವಯಂ ಮೂಲಭೂತವಾದಿಗಳಾಗಿರುವ ಕೆಲವು ಯುವಜನರಲ್ಲಿಯ ಪ್ರತ್ಯೇಕತಾ ಮನಃಸ್ಥಿತಿಯು ಈಗ ಹೆಚ್ಚು ಪ್ರಚಲಿತಗೊಂಡಿದೆ. ಪಂಡಿತರ ಮರಳುವಿಕೆಗೆ ಅನುಕೂಲ ಕಲ್ಪಿಸುವ ದೃಢವಾದ ಸ್ಥಿತಿಯಲ್ಲಿ ಭಾರತ ಸರಕಾರವು ಇಲ್ಲ. ಎಲ್ಲವೂ ಸಹಜವಾಗಿದ್ದರೆ ಅವರು ದಯನೀಯ ಬದುಕನ್ನು ಸಾಗಿಸುತ್ತಿರುವ ಕಾಶ್ಮೀರಿ ಪಂಡಿತರೊಂದಿಗೆ ಮಾತುಕತೆಗಳನ್ನು ಆರಂಭಿಸಬೇಕು ಎಂದು ಟಿಕೂ ಹೇಳಿದರು. ಪ್ರಸ್ತುತ ಕಾಶ್ಮೀರ ಕಣಿವೆಯಲ್ಲಿ ಕನಿಷ್ಠ 8,500 ಕಾಶ್ಮೀರಿ ಪಂಡಿತರು ವಾಸವಾಗಿದ್ದಾರೆ ಎಂದು ಕೆಪಿಎಸ್‌ಎಸ್ ಅಂದಾಜಿಸಿದೆ.

‘ದಿ ಕಾಶ್ಮೀರ್ ಫೈಲ್ಸ್’

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಬಿಡುಗಡೆಗೊಂಡಾಗಿನಿಂದ ಬಿಜೆಪಿಯು ಅದನ್ನು ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಹಲವಾರು ಬಿಜೆಪಿ ಆಡಳಿತದ ರಾಜ್ಯಗಳು ಚಿತ್ರಕ್ಕೆ ಶೇ.100ರಷ್ಟು ತೆರಿಗೆ ವಿನಾಯಿತಿಯನ್ನು ಪ್ರಕಟಿಸಿವೆ. ಚಿತ್ರವು ಭಯೋತ್ಪಾದನೆಯ ಪರ್ವ ಕಾಲದಲ್ಲಿ ಕಾಶ್ಮೀರಿ ಪಂಡಿತರ ಬವಣೆಗಳನ್ನು ತೋರಿಸುತ್ತಿದೆ ಎಂದು ಹೇಳಿಕೊಂಡಿದೆಯಾದರೂ ಚಿತ್ರವು ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಹೆಚ್ಚಿನ ಖುಷಿಯನ್ನು ನೀಡಿಲ್ಲ.

ಚಿತ್ರದ ಕುರಿತು ಕಾಶ್ಮೀರದಲ್ಲಿಯ ವಿವಿಧ ವರ್ಗಗಳ ಪ್ರತಿಕ್ರಿಯೆಗಳ ಕುರಿತು ಪ್ರಶ್ನೆಗೆ ಟಿಕೂ, ಅದು ಖಂಡಿತವಾಗಿಯೂ ಪಂಡಿತರ ಭದ್ರತಾ ಸ್ಥಿತಿಯನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಉತ್ತರಿಸಿದರು.

1990ರಲ್ಲಿ ದಿಲ್ಲಿಗೆ ವಲಸೆ ಹೋಗಿದ್ದ ಕಾಶ್ಮೀರಿ ಪಂಡಿತ ರವೀಂದ್ರ ಪಂಡಿತ್(58) ಅವರು ಟಿಕೂರ ಅಭಿಪಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದಿಂದ ಪಲಾಯನಗೈದಾಗ ತನ್ನ ಸ್ವಂತ ಅನುಭವ ಕುರಿತಂತೆ ರವೀಂದ್ರ ಪಂಡಿತ್, ಹಗಲು ರಾತ್ರಿಯೆನ್ನದೆ ಅಸಂಖ್ಯಾತ ಪಂಡಿತ ಕುಟುಂಬಗಳನ್ನು ಹತ್ತಿರದ ಬಸ್ ಮತ್ತು ರೈಲ್ವೆ ನಿಲ್ದಾಣಗಳಿಗೆ ಅತ್ಯಂತ ಕಾಳಜಿಯಿಂದ ಸಾಗಿಸಿದ್ದ ಟ್ಯಾಕ್ಸಿ ಚಾಲಕ ಮಕ್ಬೂಲ್‌ರನ್ನು ನೆನಪಿಸಿಕೊಂಡರು. ‘‘ಪಂಡಿತರಿಗೆ ಏನಾಗಿತ್ತು ಎನ್ನುವುದನ್ನು ‘ದಿ ಕಾಶ್ಮೀರ್ ಫೈಲ್ಸ್’ ತೋರಿಸಿದೆ, ಆದರೆ ಸಿಖ್ಖರಿಗಾಗಿದ್ದ ಗತಿಯನ್ನು ಅದು ತೋರಿಸಿಲ್ಲ. ಮುಸ್ಲಿಮರ ಕುರಿತು ಹೇಳುವುದಾದರೆ ಮಕ್ಬೂಲ್‌ರಂತಹ ಮುಸ್ಲಿಮರಿರದಿದ್ದರೆ ನನ್ನ ಕುಟುಂಬಕ್ಕೆ ಏನಾಗುತ್ತಿತ್ತು ಎನ್ನುವುದು ಗೊತ್ತಿಲ್ಲ’’ ಎಂದರು.

‘‘ಎಲ್ಲ ಮುಸ್ಲಿಮರನ್ನು ಒಂದೇ ರೀತಿಯಾಗಿ ತೋರಿಸುವುದು ಪಂಡಿತರ ಯಾತನೆಯ ಬಗ್ಗೆ ಚಿತ್ರದ ಮೂಲಕ ಅರಿವನ್ನು ಮೂಡಿಸುವ ಇಡೀ ಉದ್ದೇಶವನ್ನೇ ನಕಾರಾತ್ಮಕಗೊಳಿಸುತ್ತದೆ’’ ಎಂದು ಕಳೆದ 12 ವರ್ಷಗಳಿಂದಲೂ ಜಮ್ಮುವಿನ ಜಗತಿ ಕ್ಯಾಂಪ್‌ನಲ್ಲಿ ವಾಸವಾಗಿರುವ ಪಂಡಿತ ಸಮುದಾಯದ ರಮೇಶ್ ಕೌಲ್ ಹೇಳಿದರು. ‘‘ಚಿತ್ರವನ್ನು ಮಾಡಿದ್ದಾಯಿತು, ಅದನ್ನು ಉತ್ತೇಜಿಸಿದ್ದೂ ಆಯಿತು. ಬಿಜೆಪಿಯು ಈಗ ಏನಾದರೂ ನಿಜವಾದ ಕೆಲಸವನ್ನು ಮಾಡಬೇಕು’’ ಎನ್ನುವ ಅವರು, ‘‘ಇನ್ನಷ್ಟು ದ್ವೇಷವನ್ನು ನಾವು ಬಯಸುವುದಿಲ್ಲ. ಕಾಶ್ಮೀರವು ಸೂಕ್ಷ್ಮವಾದ ಸ್ಥಳವಾಗಿದೆ. ಇಲ್ಲಿ ಹಿಂದೂ-ಮುಸ್ಲಿಮ್ ಆಟವಾಡುವುದು ಇನ್ನಷ್ಟು ಹಾನಿಯನ್ನುಂಟು ಮಾಡುತ್ತದೆಯಷ್ಟೇ’’ ಎಂದರು.

 ಬುಡ್ಗಾಮ್‌ನಲ್ಲಿಯ ಪಂಡಿತರೂ ಚಿತ್ರದ ಬಗ್ಗೆ ಇಂತಹುದೇ ಭಾವನೆಯನ್ನು ವ್ಯಕ್ತಪಡಿಸಿದರಾದರೂ ಕಣಿವೆಯಲ್ಲಿ ಅಲ್ಪಸಂಖ್ಯಾತ ಸಮುದಾಯದವರ ಹತ್ಯೆಗಳು ಹೆಚ್ಚುತ್ತಿವೆ ಎಂದು ಬೆಟ್ಟು ಮಾಡಿದರು. ಹುರಿಯತ್ ನಾಯಕ ಸೈಯದ್ ಅಲಿ ಶಾ ಗೀಲಾನಿ ಅವರ ನಿಧನದ ಬಳಿಕ ಹಿಂದೂಗಳ ಹತ್ಯೆ ಹಲವಾರು ಪಟ್ಟು ಹೆಚ್ಚಿದೆ ಎಂದು ಅವರು ಹೇಳಿದರು. ‘‘ಬಹುಸಂಖ್ಯಾತ ಸಮುದಾಯವು ನಮ್ಮಾಡನೆ ಏಕತೆಯನ್ನು ವ್ಯಕ್ತಪಡಿಸಬೇಕು ಎನ್ನುವುದು ನಮ್ಮ ನಿರೀಕ್ಷೆಯಾಗಿದ್ದರೂ ಪಂಡಿತರ ಬಗ್ಗೆ ಸಹಾನುಭೂತಿ ಹೊಂದಿರುವವರು ಎಂಬ ಹಣೆಪಟ್ಟಿಯನ್ನು ತಮಗೆ ಅಂಟಿಸಬಹುದು ಮತ್ತು ತಮ್ಮನ್ನೂ ಕೊಲ್ಲಬಹುದು ಎಂಬ ಮುಸ್ಲಿಮ್ ಸಮುದಾಯದ ಭೀತಿಯೂ ನಮಗೆ ಅರ್ಥವಾಗುತ್ತದೆ’’ ಎಂದರು.

 ಎ.1ರಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯ ವಿವೇಕ್ ತಂಖಾ ಅವರು ‘ಕಾಶ್ಮೀರಿ ಪಂಡಿತರ (ಆಶ್ರಯ, ಮರುಸ್ಥಾಪನೆ ಮತ್ತು ಪುನರ್ವಸತಿ) ಮಸೂದೆ 2022’ ಅನ್ನು ಮಂಡಿಸಿದ್ದಾರೆ. ಮಸೂದೆಯು ಪಂಡಿತರಿಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಪುನರ್ವಸತಿಯನ್ನು ಒದಗಿಸಲು, ಅವರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಲು ಹಾಗೂ ಅವರಿಗೆ ಪುನರ್ವಸತಿ ಪ್ಯಾಕೇಜ್‌ನ್ನು ಒದಗಿಸಲು ಉದ್ದೇಶಿಸಿದೆ.

2018ರಲ್ಲಿ ಪಿಡಿಪಿ ನೇತೃತ್ವದ ಸಮ್ಮಿಶ್ರ ಸರಕಾರದಿಂದ ಹೊರಬಂದ ಬಳಿಕ ಬಿಜೆಪಿಯು ಜಮ್ಮು-ಕಾಶ್ಮೀರದಲ್ಲಿ ನಾಲ್ಕು ವರ್ಷಗಳ ಕಾಲ ನೇರ ಆಡಳಿತವನ್ನು ನಡೆಸಿದೆ ಮತ್ತು ಪ್ರದೇಶದಲ್ಲಿಯ ಸಾಂವಿಧಾನಿಕ ಖಾತರಿಗಳಿಗೆ 2019ರಲ್ಲಿ ಸತತವಾಗಿ ಮಂಗಳವನ್ನು ಹಾಡಿದೆ. ಆದರೆ ತಮ್ಮ ತವರುನಾಡಿಗೆ ಕಾಶ್ಮೀರಿ ಪಂಡಿತರ ವಾಪಸಾತಿ ಮತ್ತು ಪುನರ್ವಸತಿಯನ್ನು ತಪ್ಪಾಗಿ ನಿರ್ವಹಿಸಲಾಗುತ್ತಿದೆ.

ಕೃಪೆ: thewire.in

Writer - ತರುಷಿ ಅಸ್ವಾನಿ

contributor

Editor - ತರುಷಿ ಅಸ್ವಾನಿ

contributor

Similar News