ಪ್ರತಿಷ್ಠಿತ ಕಾನ್ ರೆಡ್‌ ಕಾರ್ಪೆಟ್‌ ನಲ್ಲಿ ಹೆಜ್ಜೆ ಹಾಕಿದ ಭಾರತೀಯ ಜನಪದ ಗಾಯಕ ಮೇಮ್‌ ಖಾನ್

Update: 2022-05-18 07:52 GMT
Photo: Twitter

ಫ್ರಾನ್ಸ್: ಮಂಗಳವಾರ ನಡೆದ‌ ಪ್ರತಿಷ್ಠಿತ ಕಾನ್ ಚಲನಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆದ ಭಾರತದ ಮೊದಲ ಜಾನಪದ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ರಾಜಸ್ಥಾನಿ ಗಾಯಕ ಮೇಮ್ ಖಾನ್ ಇತಿಹಾಸ ಬರೆದಿದ್ದಾರೆ. ಮೇಮ್ ಖಾನ್ ಅವರು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ನೇತೃತ್ವದ ಅಧಿಕೃತ ಭಾರತೀಯ ತಂಡದ ಭಾಗವಾಗಿದ್ದರು. ಆರ್. ಮಾಧವನ್, ರಿಕಿ ಕೇಜ್, ಪ್ರಸೂನ್ ಜೋಶಿ, ನವಾಝುದ್ದೀನ್ ಸಿದ್ದಿಕಿ, ಶೇಖರ್ ಕಪೂರ್ ಮತ್ತು ಅನುರಾಗ್ ಠಾಕೂರ್ ಅವರು ಈ ಹಿಂದೆ 2022 ರೆಡ್ ಕಾರ್ಪೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಲಕ್ ಬೈ ಚಾನ್ಸ್, ಐ ಆಮ್, ನೋ ಒನ್ ಕಿಲ್ಡ್ ಜೆಸ್ಸಿಕಾ, ಮಾನ್ಸೂನ್ ಮ್ಯಾಂಗೋಸ್, ಮಿರ್ಜಿಯಾ ಮತ್ತು ಸೋಂಚಿರಿಯಾ ಸೇರಿದಂತೆ ಹಲವಾರು ಬಾಲಿವುಡ್ ಚಲನಚಿತ್ರಗಳಿಗೆ ಮೇಮ್ ಖಾನ್ ಹಿನ್ನೆಲೆ ಗಾಯಕರಾಗಿದ್ದಾರೆ. ಗಾಯಕ ಅಮಿತ್ ತ್ರಿವೇದಿಯವರೊಂದಿಗೆ ಕೋಕ್ ಸ್ಟುಡಿಯೋದ ಸಂಚಿಕೆಯಲ್ಲೂ ಅವರು ಕಾಣಿಸಿಕೊಂಡಿದ್ದರು.

ರೆಡ್ ಕಾರ್ಪೆಟ್ ಮೇಲೆ, ರಾಜಸ್ಥಾನಿ ಜಾನಪದ ಗಾಯಕ ರಾಜಸ್ಥಾನದ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದರು. ಅವರು ಕಸೂತಿ ನೀಲಿ ಬಣ್ಣದ ಜಾಕೆಟ್‌ನೊಂದಿಗೆ ಗುಲಾಬಿ ಕುರ್ತಾ ಸೆಟ್ ಅನ್ನು ಧರಿಸಿದ್ದರು. ಮೇ 17ರಿಂದ 28ರವರೆಗೆ 75ನೇ ಕಾನ್ ಚಲನಚಿತ್ರೋತ್ಸವ ನಡೆಯಲಿದೆ ಎಂದು ಟ್ವಿಟರ್ ಮೂಲಕ ಪ್ರಕಟಿಸಲಾಗಿದ್ದು, ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್ ಅವರು ಮುಖ್ಯ ತೀರ್ಪುಗಾರರಾಗಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News