ಪ್ರಧಾನಿ ಮೋದಿಯ ಹೇಳಿಕೆಯನ್ನು ʼವ್ಯಂಗ್ಯವಾಡಿದʼ ಡೆಕ್ಕನ್‌ ಹೆರಾಲ್ಡ್‌ ಗೆ ಪಿಐಬಿಯಿಂದ ತರಾಟೆ: ವರದಿ

Update: 2022-05-18 08:45 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯೊಂದನ್ನು ವಿಡಂಬನಾತ್ಮಕವಾಗಿ ಬಳಸಿದ್ದಕ್ಕಾಗಿ ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯನ್ನು ಪ್ರೆಸ್‌ ಇನ್ಫಾರ್ಮೇಶನ್‌ ಬ್ಯೂರೋ ತರಾಟೆಗೆ ತೆಗೆದುಕೊಂಡಿದೆ ಎಂದು newslaundry ವರದಿ ಮಾಡಿದೆ. ಆದರೆ ಇದು ʼವ್ಯಂಗ್ಯಚಿತ್ರದಂತೆʼ ಒಂದು ವಿಭಾಗವಾಗಿದೆ ಎಂದು ಪತ್ರಿಕೆ ಪ್ರತಿಕ್ರಿಯಿಸಿದೆ.

ಮೇ 14 ರಂದು, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ ಪ್ರಧಾನ ಮಹಾನಿರ್ದೇಶಕ ಜೈದೀಪ್ ಭಟ್ನಾಗರ್ ಅವರು ಡೆಕ್ಕನ್ ಹೆರಾಲ್ಡ್‌ಗೆ ಪತ್ರ ಬರೆದು, ಮೇ 13 ರಂದು ಪತ್ರಿಕೆಯ ಜನಪ್ರಿಯ "ಸ್ಪೀಕ್ ಔಟ್" ವಿಭಾಗದಲ್ಲಿ ಮೋದಿಯವರ ಹೇಳಿಕೆಯ ಪಕ್ಕದಲ್ಲಿ ಬ್ರಿಟಿಷ್ ಬರಹಗಾರ ಸಿಎಸ್ ಲೂಯಿಸ್ ಅವರ ಉಲ್ಲೇಖವನ್ನು ಇರಿಸಿದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.

ಸ್ಪೀಕ್‌ ಔಟ್‌ ವಿಭಾಗವು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯ ದೈನಂದಿನ ವೈಶಿಷ್ಟ್ಯವಾಗಿದ್ದು, ಇದರಲ್ಲಿ ಹಲವು ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಯನ್ನು ಇನ್ನಿತರ ಗಣ್ಯರ ಹೇಳಿಕೆಯೊಂದಿಗೆ ಜೋಡಿಸಿ ವಿಡಂಬನಾತ್ಮಕವಾಗಿ ವಿಮರ್ಶಿಸಲಾಗುತ್ತದೆ. 

ತನ್ನ ಮೇ 13ರ ಆವೃತ್ತಿಯಲ್ಲಿ ಡೆಕ್ಕನ್‌ ಹೆರಾಲ್ಡ್‌ ಪ್ರಧಾನಿ ನರೇಂದ್ರ ಮೋದಿಯವರ "ದಿಲ್ಲಿಯಿಂದ ಪ್ರಧಾನಿಯಾಗಿ ನನ್ನ ದೇಶಕ್ಕೆ ನಾನು ಕಳೆದ ಎಂಟು ವರ್ಷಗಳಲ್ಲಿ ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿದ್ದೇನೆ" ಎಂಬ ಹೇಳಿಕೆಯನ್ನು ಆಯ್ಕೆ ಮಾಡಿತ್ತು ಮತ್ತು ಅದರ ಪಕ್ಕದಲ್ಲೇ ಲೂಯಿಸ್‌ ಅವರ "ಬಲಿಪಶುಗಳ ಒಳಿತಿಗಾಗಿ ಪ್ರಮಾಣಿಕವಾಗಿ ದಬ್ಬಾಳಿಕೆ ನಡೆಸುವುದು ಎಲ್ಲಾ ದೌರ್ಜನ್ಯಗಳಲ್ಲಿ ಅತ್ಯಂತ ಹೆಚ್ಚಿನ ದಬ್ಬಾಳಿಕೆಯಾಗಿರಬಹುದು" ಎಂಬ ಹೇಳಿಕೆಯನ್ನು ಸೇರಿಸಲಾಗಿತ್ತು.

ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನೋಟು ಅಮಾನ್ಯೀಕರಣದ ಹಠಾತ್ ಘೋಷಣೆ ಮತ್ತು ರಾಷ್ಟ್ರವ್ಯಾಪಿ ಕೊರೋನವೈರಸ್ ಲಾಕ್‌ಡೌನ್‌ನಂತಹ ಕೆಲವು ನಿರ್ಧಾರಗಳನ್ನು ಸಹ ಪತ್ರಿಕೆ ಈ ಹಿಂದೆ ವಿಡಂಬಣೆ ಮಾಡಿತ್ತು. ಇಂಧನ ಬೆಲೆಗಳ ಏರಿಕೆ ಮತ್ತು ಹೆಚ್ಚಿದ ನಿರುದ್ಯೋಗದಂತಹ ನೀತಿ ವೈಫಲ್ಯದ ಉದಾಹರಣೆಗಳನ್ನೂ ಅದು ಉಲ್ಲೇಖಿಸಿತ್ತು.

ಈ ಬಗ್ಗೆ ಪತ್ರ ಬರೆದ ಭಟ್ನಾಗರ್‌, "ಪತ್ರಿಕೆಯು ಓದುಗರ ದಾರಿ ತಪ್ಪಿಸುತ್ತಿದೆ" ಎಂದು ಆರೋಪಿಸಿದ್ದಾರೆ. ಪ್ರಕಟವಾಗಿರುವ ಎರಡು ಉಲ್ಲೇಖಗಳು ಪರಸ್ಪರ ಸಂಬಂಧವಿಲ್ಲದ್ದಾಗಿದೆ. ಇದು ಚೇಷ್ಟೆಯಿಂದ ಮತ್ತು ಸುಳ್ಳಿನಿಂದ ಕೂಡಿದೆ. "ನೀವು ತಪ್ಪುದಾರಿಗೆಳೆಯುವ ಮತ್ತು ತಪ್ಪು ನಿರೂಪಣೆಯನ್ನು ನೀಡುವ ಉದ್ದೇಶದಿಂದ ಈ ಎರಡು ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ಸೇರಿಸಿರುವಿರಿ ಎಂಬುದು ಮತ್ತಷ್ಟು ಗಮನಕ್ಕೆ ಬಂದಿದೆ" ಎಂದು ಅವರು ಹೇಳಿದ್ದಾರೆ.

ಸ್ಪಷ್ಟನೆ ನೀಡಿದ ಡೆಕ್ಕನ್‌ ಹೆರಾಲ್ಡ್:‌ 

ಪಿಐಬಿಗೆ ನೀಡಿದ ಪ್ರತಿಕ್ರಿಯೆಯಲ್ಲಿ, ಡೆಕ್ಕನ್ ಹೆರಾಲ್ಡ್ "ಸ್ಪೀಕ್ ಔಟ್" ವಿಭಾಗವು ವಾಸ್ತವಿಕ ಸುದ್ದಿಗಳನ್ನು ವರದಿ ಮಾಡುವುದಿಲ್ಲ, ಆದರೆ "ಪ್ರಖ್ಯಾತ ವ್ಯಕ್ತಿಯ ದಿನದ ಹೇಳಿಕೆಯನ್ನು ವ್ಯಂಗ್ಯಚಿತ್ರಕಾರರ ಕಲೆಯಂತೆಯೇ ಪರಿಗಣಿಸಬೇಕಾಗಿದೆ" ಎಂದು ಹೇಳಿದೆ. ಪಿಐಬಿಯು ಪತ್ರದಲ್ಲಿ ಉಲ್ಲೇಖಿಸಿದ ಘಟನೆಗಳ ಕುರಿತು ಪ್ರತಿಕ್ರಿಯಿಸಿದ ಸಂಪಾದಕರು, "ಇದು ನಿರ್ದಿಷ್ಟ ವ್ಯಕ್ತಿಯ ಕುರಿತು ಗುರಿಪಡಿಸಿ ಪ್ರಕಟಿಸಿದ್ದಲ್ಲ. ಇದು ಆ ಸಂದರ್ಭಕ್ಕನುಸಾರವಾದ ನೀತಿಗಳ ಕುರಿತಾಗಿದೆ. ಇದು ಪ್ರಧಾನ ಮಂತ್ರಿ ಹಾಗೂ ಅವರ ಕಚೇರಿಗೆ ಸಂಬಂಧಪಡುವುದಿಲ್ಲ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News