×
Ad

ಅಸ್ಸಾಂ ಪ್ರವಾಹ ಉಲ್ಬಣ; ಒಂಬತ್ತು ಮಂದಿ ಮೃತ್ಯು

Update: 2022-05-19 09:04 IST

ಗುವಾಹತಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದ್ದು, 27 ಜಿಲ್ಲೆಗಳಲ್ಲಿ ಸುಮಾರು 6.6 ಲಕ್ಷ ಮಂದಿ ಸಂತ್ರಸ್ತರಾಗಿದ್ದಾರೆ. ಮುಂಗಾರು ಪೂರ್ವ ಮಳೆ ಸಂಬಂಧಿ ಅನಾಹುತಗಳಲ್ಲಿ ಒಂಬತ್ತು ಮಂದಿ ಜೀವ ಕಳೆದುಕೊಂಡಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ 48 ಸಾವಿರ ಮಂದಿಯನ್ನು 248 ಪರಿಹಾರ ಶಿಬಿರಗಳಿಗೆ ಕರೆ ತರಲಾಗಿದೆ. ಹೊಜಾಯ್ ಮತ್ತು ಕಚಾರ್ ತೀವ್ರ ಸಂಕಷ್ಟಕ್ಕೆ ಒಳಗಾದ ಪ್ರದೇಶಗಳು. ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ಸೇನಾ ಸಿಬ್ಬಂದಿ ಹೊಜಾಯ್ ಜಿಲ್ಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಕನಿಷ್ಠ ಎರಡು ಸಾವಿರ ಮಂದಿಯನ್ನು ರಕ್ಷಿಸಿದ್ದಾರೆ.

ದಕ್ಷಿಣ ಅಸ್ಸಾಂನ ಡಿಮಾ ಹಸಾವೊ ಜಿಲ್ಲೆ ಸತತ ಐದನೇ ದಿನ ರಾಜ್ಯದ ಇತರ ಪ್ರದೇಶಗಳ ಜತೆ ಸಂಪರ್ಕ ಕಡಿದುಕೊಂಡಿದೆ. ತೀವ್ರ ಮಳೆ ಮತ್ತು ಭೂಕುಸಿತದಿಂದಾಗಿ ಜಿಲ್ಲೆಯಲ್ಲಿ ರಸ್ತೆ ಹಾಗೂ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.

ತಿಪುರಾ, ಮಿಜೋರಾಂ ಮತ್ತು ಮಣಿಪುರದ ಪ್ರಮುಖ ಪ್ರದೇಶಗಳು ಹಾಗೂ ಬರಾಕ್ ಕಣಿವೆಯಲ್ಲಿ ರಸ್ತೆ ಹಾಗೂ ರೈಲು ಸಂಪರ್ಕ ರವಿವಾರದಿಂದ ಕಡಿದು ಹೋಗಿದೆ. ಮೃತರ ಕುಟುಂಬಕ್ಕೆ ನಾಲ್ಕು ಲಕ್ಷ ರೂಪಾಯಿ ಪರಿಹಾರವನ್ನು ಅಸ್ಸಾಂ ಸರ್ಕಾರ ಘೋಷಿಸಿದೆ.

ಪ್ರಾದೇಶಿಕ ವಿಮಾನಯಾನ ಸಂಸ್ಥೆ ಫ್ಲೈಬಿಗ್ ಸಹಯೋಗದಲ್ಲಿ ಬರಾಕ್ ಕಣಿವೆಯಲ್ಲಿ ವಿಮಾನ ಕಾರ್ಯಾಚರಣೆಯನ್ನು ಸರ್ಕಾರ ಆರಂಭಿಸಿದೆ. 3000 ರೂಪಾಯಿ ಶುಲ್ಕ ವಿಧಿಸಿ ವಿಮಾನ ಯಾನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಉಳಿದ ಶುಲ್ಕವನ್ನು ಸರ್ಕಾರ ಭರಿಸಲಿದೆ.

ಧಾರಾಕಾರ ಮಳೆ ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿದೆ. ಮುಂದಿನ ನಾಲ್ಕು ದಿನಗಳ ಕಾಲ ವ್ಯಾಪಕ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News