ಬಾಬಾ ಗುಲಾಮ್: ಹಿಂದೂ-ಮುಸ್ಲಿಮ್ ಏಕತೆಯ ಕಲ್ಪನೆ

Update: 2022-05-19 04:35 GMT

ಬಾಬಾ ಗುಲಾಮ್ ಮುಹಮ್ಮದ್ ಜೌಲಾರ ಹಿಂದೂ-ಮುಸ್ಲಿಮ್ ಏಕತೆಯ ಕನಸು ಪಶ್ಚಿಮ ಉತ್ತರಪ್ರದೇಶದಲ್ಲಿ ಆಂಶಿಕವಾಗಿ ಈಡೇರಿರಬಹುದು, ಆದರೆ ಅವರ ದೂರದೃಷ್ಟಿ ಮತ್ತು ಚೈತನ್ಯವು ಯಾವತ್ತೂ ಪ್ರೇರಕ ಶಕ್ತಿಯಾಗಿರುತ್ತದೆ.

 ‘‘ಅವರು ‘ಹರ್ ಹರ್ ಮಹಾದೇವ್’ ಎಂಬುದಾಗಿ ಘೋಷಣೆ ಕೂಗುತ್ತಿದ್ದರು. ನಾನು ಆ ಘೋಷಣೆಗೆ ‘ಅಲ್ಲಾಹು ಅಕ್ಬರ್’ ಸೇರಿಸಿದೆ. ಈ ಎರಡು ಜೊತೆ ಸೇರಿ ಭಾರತೀಯ ಕಿಸಾನ್ ಯೂನಿಯನ್‌ನ ಅತ್ಯಂತ ಪ್ರಭಾವಿ ಘೋಷಣೆಯಾಯಿತು.’’

ಪಶ್ಚಿಮ ಉತ್ತರ ಪ್ರದೇಶದ ಮಹಾನ್ ರೈತ ನಾಯಕ ಬಾಬಾ ಗುಲಾಮ್ ಮುಹಮ್ಮದ್ ಜೌಲಾರನ್ನು ನೆನಪಿಸುವಾಗ ಮೊದಲು ನೆನಪಿಗೆ ಬರುವುದು ಅವರ ಈ ಮಾತುಗಳು. ಬಾಬಾ 2022 ಮೇ 16ರಂದು ನಿಧನರಾದರು. ಅವರು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು)ನಲ್ಲಿ ದಿವಂಗತ ಮಹೇಂದ್ರ ಸಿಂಗ್ ಟಿಕಾಯತ್‌ರ ಬಲಗೈ ಬಂಟನಾಗಿದ್ದರು ಎಂಬುದಾಗಿ ಹೇಳಲಾಗಿದೆ. ಹಾಗಾಗಿ, ಗುಲಾಮ್ ಸಾಹೇಬರು ಟಿಕಾಯತ್‌ರ ವಾರ್ಷಿಕ ಪುಣ್ಯತಿಥಿಯ ಮಾರನೇ ದಿನ ನಿಧನರಾಗಿದ್ದು ಅಚ್ಚರಿಯ ಸಂಗತಿಯೇನೂ ಆಗಿರಲಾರದು. ಬಹುಶಃ ವಿಧಿಯ ತೀರ್ಮಾನವೂ ಅದೇ ಆಗಿರಬೇಕು.

ಕಬ್ಬು ಬೆಳೆಗಾರರು ಮುಷ್ಕರ ನಡೆಸಿದಾಗ ಈ ಇಬ್ಬರು ಮಹಾನ್ ನಾಯಕರು ಅಧಿಕಾರಿಗಳನ್ನು ಯಾವ ರೀತಿ ಮಣಿಸಿದರು ಎಂಬ ಬಗ್ಗೆ ಹಲವು ಕತೆಗಳು ಈಗಲೂ ಚಾಲ್ತಿಯಲ್ಲಿವೆ. ಸಾಮಾಜಿಕ ಮಾಧ್ಯಮಗಳು ಇರದ ಕಾಲದಲ್ಲಿ ಹಾಗೂ ಮುಖ್ಯವಾಹಿನಿಯ ಮಾಧ್ಯಮಗಳು ಪಶ್ಚಿಮ ಉತ್ತರಪ್ರದೇಶದ ಗುಡ್ಡಗಾಡು ಪ್ರದೇಶಕ್ಕೆ ಭೇಟಿ ನೀಡುವುದು ಅಪರೂಪವಾಗಿದ್ದಾಗ, ಈ ಕತೆಗಳು ಜನರ ಬಾಯಿಂದ ಬಾಯಿಗೆ ಹರಡಿ ಉಳಿದುಕೊಂಡಿವೆ. 1989ರಲ್ಲಿ ದಿಲ್ಲಿಯಲ್ಲಿ ನಡೆದ ಬೋಟ್ ಕ್ಲಬ್ ಆಂದೋಲನವು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತಾದರೂ, ಇಂತಹ ಹಲವು ಕತೆಗಳು ಪಶ್ಚಿಮ ಉತ್ತರಪ್ರದೇಶದ ದಟ್ಟ ಕಬ್ಬಿನ ಗದ್ದೆಗಳಲ್ಲಿ ಹರಡಿಕೊಂಡಿವೆ.

ಅಂತಹ ಒಂದು ಕತೆ ಇಲ್ಲಿದೆ. ಒಮ್ಮೆ ಮುಷ್ಕರದ ವೇಳೆ, ಮಾತುಕತೆಗಾಗಿ ಮುಝಫ್ಫರ್‌ನಗರ ಜಿಲ್ಲಾಧಿಕಾರಿ ಬಾಬಾ ಗುಲಾಮ್ ಮುಹಮ್ಮದ್ ಜೌಲಾರ ಮನೆಗೆ ಹೋದರು. ಬಾಬಾರ ಗ್ರಾಮ ಜೌಲಾ ತಲುಪಿದಾಗ, ಗದ್ದೆಯೊಂದಕ್ಕೆ ಹೋಗುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಯಿತು. ಗದ್ದೆಯೊಂದರಲ್ಲಿ ಬಾಬಾ ಜಿಲ್ಲಾಧಿಕಾರಿಗಾಗಿ ಕಾಯುತ್ತಿದ್ದರು. ಜಿಲ್ಲಾಧಿಕಾರಿ ಬೇಸಿಗೆಯ ಧಗೆಯಲ್ಲಿ ಕಬ್ಬಿನ ಹೊಲಗಳನ್ನು ದಾಟುತ್ತಾ ಬಾಬಾರನ್ನು ನೋಡಲು ಹೋದರು. ಜಿಲ್ಲಾಧಿಕಾರಿ ತಲುಪಿದಾಗ ಬಾಬಾ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ‘‘ಕುಳಿತುಕೊಳ್ಳಿ’’ ಎಂಬುದಾಗಿ ನೆಲದತ್ತ ಕೈತೋರಿಸುತ್ತಾ ಬಾಬಾ ಜಿಲ್ಲಾಧಿಕಾರಿಗೆ ಹೇಳಿದರು. ಜಿಲ್ಲಾಧಿಕಾರಿ ಸಾಹೇಬರನ್ನು ಸ್ವಾಗತಿಸಲು ಸಂಪ್ರದಾಯದಂತೆ ಹೊಲದಲ್ಲಿ ಕುರ್ಚಿಗಳನ್ನು ಹಾಕಿರಲಿಲ್ಲ. ‘‘ರೈತರ ಹಣೆಬರಹವನ್ನು ನಿರ್ಧರಿಸುವ ನಿರ್ಣಯವನ್ನು ತೆಗೆದುಕೊಳ್ಳುವ ಮುನ್ನ, ಈ ಧಗೆಯಲ್ಲಿ ನೆಲದಲ್ಲಿ ಕುಳಿತುಕೊಂಡು ರೈತರು ಪಡುವ ಕಷ್ಟವನ್ನೊಮ್ಮೆ ಅನುಭವಿಸಿ’’ ಎಂದು ಬಾಬಾ ಹೇಳಿದರು.

ಈ ಕತೆಗಳು ಸತ್ಯವೋ ಅಥವಾ ಉತ್ಪ್ರೇಕ್ಷಿತವೋ, ಪ್ರತಿಯೊಂದು ಕತೆಯೂ ಆ ವಲಯದ ಕಬ್ಬು ಬೆಳೆಗಾರರ ಘನತೆಯನ್ನು ಎತ್ತಿಹಿಡಿಯುತ್ತವೆ.

ಪಶ್ಚಿಮ ಉತ್ತರಪ್ರದೇಶದ ಕಬ್ಬು ಬೆಳೆಯುವ ಜಿಲ್ಲೆಗಳಲ್ಲಿ ಹೆಚ್ಚಿನ ಮುಸ್ಲಿಮ್ ಜನಸಂಖ್ಯೆಯಿದೆ. ಇಲ್ಲಿನ ಪ್ರಬಲ ಜಾತಿಗಳ ಹೆಚ್ಚಿನವರು ರೈತರು ಮತ್ತು ಜಮೀನುದಾರರಾಗಿದ್ದಾರೆ. ಈ ವಲಯದಲ್ಲಿ ರೈತರ ಚಳವಳಿ ಯಶಸ್ವಿಯಾಗಬೇಕಾದರೆ ಎರಡು ಪ್ರಮುಖ ಧರ್ಮಗಳ ಜನರು ಒಗ್ಗಟ್ಟಿನಿಂದ ಇರಬೇಕೆನ್ನುವ ತಿಳುವಳಿಕೆ ಟಿಕಾಯತ್ ಮತ್ತು ಜೌಲಾ ಇಬ್ಬರಲ್ಲಿಯೂ ಇತ್ತು. ಹಾಗಾಗಿ, ‘ಹರ್ ಹರ್ ಮಹಾದೇವ್, ಅಲ್ಲಾಹು ಅಕ್ಬರ್’ ಘೋಷಣೆಯು ಸಂಘಟನೆಯ ಸಮಗ್ರ ಭಾಗವಾಯಿತು. ಅಷ್ಟೇ ಅಲ್ಲ, ಯಾವುದಾದರೂ ಒಂದು ಘಟನೆಯು ಧಾರ್ಮಿಕ ಒಗ್ಗಟ್ಟನ್ನು ಹದಗೆಡಿಸಬಹುದು ಎನ್ನುವ ಸಂಶಯ ಬಂದಾಗ ಭಾರತೀಯ ಕಿಸಾನ್ ಯೂನಿಯನ್ ಕಾರ್ಯಪ್ರವೃತ್ತವಾಗಿ ವಿವಾದಗಳನ್ನು ಬಗೆಹರಿಸುತ್ತಿತ್ತು.

ಇದಕ್ಕೆ ಒಂದು ಪ್ರಮುಖ ಉದಾಹರಣೆ ಇಲ್ಲಿದೆ. ಈ ವಲಯದ ಮುಸ್ಲಿಮ್ ಬಾಲಕಿಯೊಬ್ಬಳ ಅಪಹರಣವಾದಾಗ ಟಿಕಾಯತ್ ಉಪವಾಸ ಸತ್ಯಾಗ್ರಹ ನಡೆಸಿದರು. ಈ ಘಟನೆಯು ಸ್ಥಳೀಯವಾಗಿ ‘ನೈಮಾ ಕಾಂಡ್’ ಎಂಬುದಾಗಿ ಜನಪ್ರಿಯವಾಗಿದೆ. ಉಪವಾಸ ಸತ್ಯಾಗ್ರಹದಿಂದ ಒತ್ತಡಕ್ಕೆ ಒಳಗಾದ ಪೊಲೀಸರು ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ರಕ್ಷಿಸಿದರು.

2013ರಲ್ಲಿ ಮುಝಫ್ಫರ್‌ನಗರ ಮತ್ತು ಶಾಮ್ಲಿ ಜಿಲ್ಲೆಗಳಲ್ಲಿ ಕೋಮುಗಲಭೆಗಳು ನಡೆದ ಬಳಿಕ ಗುಲಾಮ್ ಸಾಹೇಬರು ಸಹಜವಾಗಿಯೇ ಚಿಂತಿತರಾಗಿದ್ದರು. ಆ ಗಲಭೆಗಳು ಪಶ್ಚಿಮ ಉತ್ತರಪ್ರದೇಶದ ಧಾರ್ಮಿಕ ಸೌಹಾರ್ದವನ್ನು ಒಡೆದಿತ್ತು. ಹಿಂದೂ ಮತ್ತು ಮುಸ್ಲಿಮ್ ರೈತರು ಬದ್ಧ ವಿರೋಧಿಗಳಾಗಿದ್ದರು. ಹೆಚ್ಚಿನವರಿಗೆ ಆಘಾತ ತಂದ ವಿಷಯವೆಂದರೆ, 2013 ಸೆಪ್ಟಂಬರ್‌ನಲ್ಲಿ ನಡೆದ ಮಹಾಪಂಚಾಯತ್‌ಗೆ ಭಾರತೀಯ ಕಿಸಾನ್ ಯೂನಿಯನ್‌ನ ವೇದಿಕೆಯನ್ನು ಬಳಸಲಾಗಿತ್ತು. ಆ ಮಹಾಪಂಚಾಯತ್ ಬಳಿಕ ಹಿಂಸೆ ಸ್ಫೋಟಗೊಂಡಿತ್ತು. ಆ ಕುಖ್ಯಾತ ಮಹಾಪಂಚಾಯತ್‌ನಲ್ಲಿ, ಬಿಜೆಪಿ ನಾಯಕರು ಬಿಕೆಯು ವೇದಿಕೆಯನ್ನು ಗರಿಷ್ಠ ಪ್ರಮಾಣದಲ್ಲಿ ಅಪಹರಿಸಿದರು. ಅಂದು ನಡೆದ ಕೋಮು ಹಿಂಸಾಚಾರವು ಪಶ್ಚಿಮ ಉತ್ತರಪ್ರದೇಶದಲ್ಲಿ ಉಂಟು ಮಾಡಿದ ಗಾಯವು ಇನ್ನೂ ಆರಿಲ್ಲ.

ಕೋಮು ಗಲಭೆಗಳ ಬಳಿಕ, ‘ಮುಝಫ್ಫರ್‌ನಗರ್ ಬಾಕಿ ಹೆ’ ಎಂಬ ನನ್ನ ಚಿತ್ರಕ್ಕಾಗಿ ನಾನು ಗುಲಾಮ್ ಸಾಹೇಬರನ್ನು ಸಂದರ್ಶಿಸಿದೆ. ‘‘ಹರ್ ಹರ್ ಮಹಾದೇವ್ ಅಲ್ಲಾಹು ಅಕ್ಬರ್’ ಘೋಷಣೆಯನ್ನು ನಾನು ಯೂನಿಯನ್‌ಗೆ ನೀಡಿದೆ. ಈಗ ‘ಹರ್ ಹರ್ ಮಹಾದೇವ್’ ಮಾತ್ರ ಉಳಿದಿದೆ. ವಾಸ್ತವವಾಗಿ, ಅಷ್ಟೂ ಇಲ್ಲ, ಕೇವಲ ‘ಹರ್ ಹರ್ ಮೋದಿ’ ಮಾತ್ರ ಇದೆ. ಇನ್ನು ಯೂನಿಯನ್‌ನಲ್ಲಿ ನಮಗೆ ಯಾವ ಪಾತ್ರ ಉಳಿದಿದೆ?’’ ಎಂಬುದಾಗಿ ಅವರು ಆ ಸಂದರ್ಭದಲ್ಲಿ ಹೇಳಿದ್ದರು.

2013ರ ಕೋಮುಗಲಭೆಯ ಬಳಿಕ ಊಹಿಸಲೂ ಸಾಧ್ಯವಾಗದ ಘಟನೆಗಳು ನಡೆದಿವೆ. ಬಿಕೆಯು ಧರ್ಮದ ಆಧಾರದಲ್ಲಿ ವಿಭಜನೆಗೊಂಡಿತು. ಬಾಬಾ ಗುಲಾಮ್ ಮುಹಮ್ಮದ್ ಜೌಲಾ, ಭಾರತೀಯ ಕಿಸಾನ್ ಮಜ್ದೂರ್ ಮಂಚ್ (ಬಿಕೆಎಮ್‌ಎಮ್) ಎಂಬ ತನ್ನದೇ ಆದ ಸಂಘಟನೆಯನ್ನು ಆರಂಭಿಸಿದರು. ‘‘ಇದು 35 ಸಮುದಾಯಗಳ ಸಂಘಟನೆಯಾಗಿದೆ. ಜಾಟರನ್ನು ಹೊರತುಪಡಿಸಿ ಎಲ್ಲರಿಗೂ ಇಲ್ಲಿ ಪ್ರವೇಶವಿದೆ’’ ಎಂದು ಅವರು ಹೇಳಿದರು.

ಈ ವಿಭಜನೆಯ ಬಗ್ಗೆ ಅವರಿಗೆ ನೆಮ್ಮದಿಯಿದೆಯೇ? ‘‘ಇಲ್ಲ’’ ಎಂದು ಅವರು ಸ್ಪಷ್ಟವಾಗಿ ಹೇಳಿದರು. ‘‘ಆದರೆ, ನಮಗೆ ಬೇರೆ ಆಯ್ಕೆಯೇ ಇಲ್ಲದಂತೆ ಅವರು ಮಾಡಿದರು’’ ಎಂದರು.

ಆದರೆ, ಬಾಬಾರ ಆಶಾವಾದವು ಎಂದಿಗೂ ಅವರ ಕೈಬಿಡಲಿಲ್ಲ. ‘‘ಜಾಟರು ಪ್ರಧಾನವಾಗಿ ಜಾತ್ಯತೀತ ಸಮುದಾಯ. ಮಸೀದಿಗಳಿಲ್ಲದ ಹೆಚ್ಚಿನ ಗ್ರಾಮಗಳಲ್ಲಿ, ಜಾಟರು ತಾವೇ ಹಣ ಸಂಗ್ರಹಿಸಿ ಮಸೀದಿಗಳನ್ನು ನಿರ್ಮಿಸಿದರು. ಫಿಝಾ ಫಿರ್ ಬದ್ಲೇಗಿ (ಪರಿಸ್ಥಿತಿ ಮತ್ತೆ ಬದಲಾಗಬಹುದು). ಅದಕ್ಕೆ 4-5 ವರ್ಷ ಬೇಕಾಗುತ್ತದೆ. ಜಾಟರೂ ತಮ್ಮ ತಪ್ಪುಗಳನ್ನು ಅರ್ಥಮಾಡಿಕೊಳ್ಳುತ್ತಾರೆ. ಅವರೂ ವಾಪಸ್ ಬರಲು ಬಯಸುತ್ತಾರೆ. ಅದಕ್ಕೆ ಕೆಲವು ವರ್ಷಗಳು ಬೇಕಾಗುತ್ತದೆ’’ ಎಂದರು.

ಇದು ಕೇವಲ ಆಧಾರವಿಲ್ಲದ ಭವಿಷ್ಯವಾಗಿರಲಿಲ್ಲ. ಅದು ತನ್ನನ್ನು ರೂಪಿಸಿದ ನೆಲವನ್ನು ಬಾಬಾ ಗುಲಾಮ್ ಮುಹಮ್ಮದ್ ಜೌಲಾ ಅರ್ಥ ಮಾಡಿಕೊಂಡ ರೀತಿ. ಅವರು ತನ್ನ ಕಿವಿಯನ್ನು ಯಾವಾಗಲೂ ನೆಲಕ್ಕೆ ಇಟ್ಟುಕೊಂಡಿರುತ್ತಿದ್ದರು ಎನ್ನುವುದರ ಸೂಚನೆ ಅದಾಗಿತ್ತು. ಅವರ ಕೈ ಯಾವಾಗಲೂ ಜನರ ನಾಡಿಯ ಮೇಲಿರುತ್ತಿತ್ತು. ಅವರು ತನ್ನ ಜನರನ್ನು ಬಲ್ಲರು. ಅವರ ಜನರು ಕೇವಲ ಮುಸ್ಲಿಮರಲ್ಲ, ವಲಯದ ಎಲ್ಲ ರೈತರು.

ಬಾಬಾರ ಮಾತುಗಳು ಸತ್ಯವೆಂದು ಸಾಬೀತಾದವು. ಸುಮಾರು ಐದು ವರ್ಷಗಳ ಬಳಿಕ ಪಶ್ಚಿಮ ಉತ್ತರಪ್ರದೇಶದಲ್ಲಿ ಹಲವು ಸಣ್ಣ ಪಂಚಾಯತ್‌ಗಳು ನಡೆದವು. ಆ ಪಂಚಾಯತ್‌ಗಳಲ್ಲಿ ವಲಯದ ಹಿಂದೂ ಮತ್ತು ಮುಸ್ಲಿಮ್ ರೈತರು ಮತ್ತೆ ಒಂದಾದರು.

ಆದರೆ, ಏಕತೆಯ ಭವ್ಯ ಪ್ರದರ್ಶನವಾಗಿದ್ದು 2021 ಜನವರಿಯಲ್ಲಿ, ದಿಲ್ಲಿಯ ಗಡಿಗಳಲ್ಲಿ ನಡೆದ ಐತಿಹಾಸಿಕ ರೈತ ಚಳವಳಿಯಲ್ಲಿ. 2021 ಜನವರಿ 29ರಂದು ಮುಝಫ್ಫರ್‌ನಗರದಲ್ಲಿ ಐತಿಹಾಸಿಕ ಮಹಾಪಂಚಾಯತ್ ನಡೆಯಿತು. ಆ ಪಂಚಾಯತ್‌ನಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಸೇರಿ ಹಲವು ಸಾವಿರ ಮಂದಿ ಭಾಗವಹಿಸಿದರು.

ಪಂಚಾಯತ್‌ನ ಪ್ರಮುಖ ಭಾಷಣಕಾರರಲ್ಲಿ ಗುಲಾಮ್ ಮುಹಮ್ಮದ್ ಜೌಲಾ ಕೂಡಾ ಒಬ್ಬರಾಗಿದ್ದರು. ಅವರು ಎಲ್ಲವನ್ನೂ ನೇರವಾಗಿಯೇ ಹೇಳಿದರು. ‘‘ಈವರೆಗೆ ನೀವು ಮಾಡಿರುವ ಎರಡು ಅತ್ಯಂತ ದೊಡ್ಡ ತಪ್ಪುಗಳೆಂದರೆ; ಮೊದಲನೆಯದು, ನೀವು ಅಜಿತ್ ಸಿಂಗ್‌ರನ್ನು ಸೋಲಿಸಿದ್ದೀರಿ ಮತ್ತು ಎರಡನೆಯದು, ನೀವು ಮುಸ್ಲಿಮರನ್ನು ಕೊಂದಿದ್ದೀರಿ’’. ಕುತೂಹಲಕರ ಸಂಗತಿಯೆಂದರೆ, ಆಗ ಸಭಿಕರಿಂದ ಯಾವುದೇ ಅಪಹಾಸ್ಯದ ಧ್ವನಿ ಕೇಳಲಿಲ್ಲ ಅಥವಾ ಅವರ ಬಾಯಿ ಮುಚ್ಚಿಸುವ ಯಾವುದೇ ಪ್ರಯತ್ನಗಳು ನಡೆಯಲಿಲ್ಲ. ಅಲ್ಲಿ ಸೂಜಿ ಬಿದ್ದರೂ ಕೇಳುವಂತಹ ವೌನ ನೆಲೆಸಿತ್ತು, ಆತ್ಮವಿಮರ್ಶೆ ನಡೆಯುತ್ತಿತ್ತು. ಬಾಬಾ ಸ್ಪಷ್ಟವಾಗಿ ಹೇಳಿದರು- ‘‘ಒಗ್ಗಟ್ಟಿನೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ತಪ್ಪನ್ನು ಒಪ್ಪಿಕೊಳ್ಳಲೇಬೇಕು. ನಿಮ್ಮ ಮುಸ್ಲಿಮ್ ಸಹೋದರರನ್ನು ನೀವು ನಡೆಸಿಕೊಂಡ ರೀತಿ ತಪ್ಪು ಎನ್ನುವುದನ್ನು ನೀವು ಒಪ್ಪಿಕೊಳ್ಳಬೇಕು.’’ ಆ ದಿನ ವೇದಿಕೆಯಲ್ಲಿದ್ದ ಹೆಚ್ಚಿನ ಹಿಂದೂ ಜಾಟ್ ನಾಯಕರು ಬಳಿಕ ತಪ್ಪನ್ನು ಒಪ್ಪಿಕೊಂಡರು.

ಕೋಮುಗಲಭೆಗೆ ಕಾರಣವಾದ ಮಹಾಪಂಚಾಯತ್ ನಡೆದ ಸರಿಯಾಗಿ 8 ವರ್ಷಗಳ ಬಳಿಕ, ಅಂದರೆ 2021 ಸೆಪ್ಟಂಬರ್ 5ರಂದು ಇನ್ನೊಂದು ಐತಿಹಾಸಿಕ ಕಿಸಾನ್ ಮಹಾಪಂಚಾಯತ್ ನಡೆಯಿತು. ಬಾಬಾರ ಆರೋಗ್ಯ ಕ್ಷೀಣಿಸಿರುವುದು ಅಲ್ಲಿ ಎದ್ದು ಕಾಣುತ್ತಿತ್ತು. ಭಾಷಣ ಮಾಡಲು ಸಾಧ್ಯವಾಗದಷ್ಟೂ ತಾನು ದುರ್ಬಲನಾಗಿದ್ದೇನೆ ಎಂದು ಅವರು ರಾಕೇಶ್ ಟಿಕಾಯತ್‌ಗೆ ಹೇಳಿದರು. ಆದರೆ, ಯೂನಿಯನ್‌ನ ಪ್ರಸಿದ್ಧ ಘೋಷಣೆಯು ಇನ್ನೊಮ್ಮೆ ಕೇಳಿಬರುವಂತೆ ನೋಡಿಕೊಳ್ಳಿ ಎಂದು ಅವರು ಟಿಕಾಯತ್‌ಗೆ ಹೇಳಿದರು. ರಾಕೇಶ್ ನಿರಾಶೆಗೊಳಿಸಲಿಲ್ಲ. ‘ಅಲ್ಲಾಹು ಅಕ್ಬರ್, ಹರ್ ಹರ್ ಮಹಾದೇವ್’ ಮುಝಫ್ಫರ್‌ನಗರದಾದ್ಯಂತ ಪ್ರತಿಧ್ವನಿಸಿತು.

ನಂತರ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ಬಿಜೆಪಿ ಸುಲಭವಾಗಿ ಗೆದ್ದಿರಬಹುದು. ಆದರೆ, ರೈತರ ಚಳವಳಿ (ಮತ್ತು ಗಲಭೆ)ಯ ಗಾಢ ಪರಿಣಾಮಕ್ಕೆ ಒಳಗಾಗಿರುವ ಕಬ್ಬು ಪಟ್ಟಿಯಲ್ಲಿ ಬಿಜೆಪಿ ನಿರ್ವಹಣೆ ಕೆಟ್ಟದಾಗಿದೆ.

ಕ್ಷೀಣಿಸುತ್ತಿದ್ದ ಆರೋಗ್ಯದಿಂದಾಗಿ, ಜೌಲಾ ಸಾಹೇಬರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆಯಾಗುತ್ತಾ ಬಂತು. ಆದರೆ, ಪ್ರತಿ ಕಿಸಾನ್ ಪಂಚಾಯತ್‌ನಲ್ಲೂ ಅವರ ಉಪಸ್ಥಿತಿ ಇತ್ತು. ಹಿಂದೂ-ಮುಸ್ಲಿಮ್ ಏಕತೆಯ ಅವರ ಕನಸು ಪಶ್ಚಿಮ ಉತ್ತರಪ್ರದೇಶದಲ್ಲಿ ಆಂಶಿಕವಾಗಿ ಈಡೇರಿರಬಹುದು, ಆದರೆ ಅವರ ದೂರದೃಷ್ಟಿ ಮತ್ತು ಚೈತನ್ಯವು ಯಾವತ್ತೂ ಪ್ರೇರಕ ಶಕ್ತಿಯಾಗಿರುತ್ತದೆ.

ಕೃಪೆ: thewire

Writer - ನಕುಲ್ ಸಿಂಗ್ ಸಾಹ್ನಿ

contributor

Editor - ನಕುಲ್ ಸಿಂಗ್ ಸಾಹ್ನಿ

contributor

Similar News