ವೆಂಕಯ್ಯ ನಾಯ್ಡು ಭಾಗವಹಿಸುವ ಕಾರ್ಯಕ್ರಮದ ಭದ್ರತಾ ತಪಾಸಣೆಯ ವೇಳೆ ವೇದಿಕೆಯಿಂದ ಬಿದ್ದು ಐಬಿ ಅಧಿಕಾರಿ ಮೃತ್ಯು

Update: 2022-05-19 07:14 GMT

ಹೈದರಾಬಾದ್: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗವಹಿಸುವ ಮುಂಬರುವ ಕಾರ್ಯಕ್ರಮದ ಭದ್ರತಾ ಕ್ರಮಗಳನ್ನು ಪರಿಶೀಲಿಸುತ್ತಿದ್ದಾಗ ಮಾದಾಪುರದ ಶಿಲ್ಪಕಲಾ ವೇದಿಕೆಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದ ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಸಹಾಯಕ ನಿರ್ದೇಶಕರೊಬ್ಬರು ಸಾವಪ್ಪಿರುವ ಘಟನೆ ಬುಧವಾರ ನಡೆದಿದೆ.

ಪಾಟ್ನಾ ಮೂಲದ ಕುಮಾರ್ ಅಮರೇಶ್ (51 ವರ್ಷ) ಎಂಬ ಅಧಿಕಾರಿಯನ್ನು ಹೈದರಾಬಾದ್‌ನ ಐಬಿ ಕಚೇರಿಯಲ್ಲಿ ನಿಯೋಜಿಸಲಾಗಿತ್ತು. ಬುಧವಾರ ಸಂಜೆ ಅವರು ತಮ್ಮ ಐಬಿ ಸಹೋದ್ಯೋಗಿಗಳೊಂದಿಗೆ ತೆಲುಗು ಅಸೋಸಿಯೇಶನ್ ಆಫ್ ನಾರ್ತ್ ಅಮೆರಿಕದ (ತಾನಾ) ಮುಂಬರುವ ಕಾರ್ಯಕ್ರಮದ ಭದ್ರತಾ ಕ್ರಮಗಳನ್ನು ಪರಿಶೀಲಿಸಲು ಶಿಲ್ಪಕಲಾ ವೇದಿಕೆಗೆ ತೆರಳಿದ್ದರು. ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಮೇ 20 ರಂದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಮರೇಶ್ ರಾಜ್ಯಕ್ಕೆ ಬಂದರು ಹಾಗೂ  ತಮ್ಮ ಸೆಲ್ ಫೋನ್‌ನಲ್ಲಿ ಸುತ್ತಮುತ್ತಲಿನ ವೀಡಿಯೊ ರೆಕಾರ್ಡಿಂಗ್ ಆರಂಭಿಸಿದರು. "ವೀಡಿಯೊವನ್ನು ರೆಕಾರ್ಡ್ ಮಾಡುವಾಗ ಅವರು ತಮಗರಿವಿಲ್ಲದೆ ವೇದಿಕೆಯ ಅಂಚಿಗೆ ತಲುಪಿದ್ದಾರೆ ಹಾಗೂ  12 ಅಡಿ ಕೆಳಗೆ ನಿರ್ವಹಣಾ ಪ್ರದೇಶದ ಮೇಲೆ ಬಿದ್ದಿದ್ದಾರೆ" ಎಂದು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮರೇಶ್ ಅವರ ತಲೆಯ ಒಳಭಾಗಕ್ಕೆ ಗಾಯವಾಗಿದ್ದು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಚಿಕಿತ್ಸೆ ಪಡೆಯುತ್ತಿದ್ದ ಅವರು ರಾತ್ರಿ 7 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News