ಮಾನಸಿಕ ಆರೋಗ್ಯ ಕೇಂದ್ರಗಳ ದುಸ್ಥಿತಿಗೆ ಚಿಕಿತ್ಸೆ ಬೇಕಾಗಿದೆ

Update: 2022-05-19 18:42 GMT

ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು ಇನ್ನೂ ಹೆಚ್ಚು ಸಮಗ್ರ ನಿಲುವನ್ನು ತಳೆಯುವ ದೃಷ್ಟಿಯಿಂದ ದೇಶದಲ್ಲಿ ಮಾನಸಿಕ ಅಸ್ವಸ್ಥರ ಪುನರ್ವಸತಿಗೆ ಹೆಚ್ಚು ಅನುಕೂಲಕರವಾಗುವಂತಹ ಕೌಟುಂಬಿಕ ವ್ಯವಸ್ಥೆಗಳನ್ನು ರೂಪಿಸಲು ನಾವು ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಸ್ಥಳೀಯ ಮನೋಆರೋಗ್ಯ ಕೇಂದ್ರಗಳು ಮಾನಸಿಕ ಅಸ್ವಸ್ಥತೆಯ ಅಪಾಯವನ್ನು ಎದುರಿಸುತ್ತಿರುವ ಕುಟುಂಬಗಳಿಗೆ ಮಾನಸಿಕ ಶಿಕ್ಷಣ ನೀಡಬೇಕಾಗಿದೆ ಹಾಗೂ ಇಂತಹ ಪ್ರಕರಣಗಳನ್ನು ನಿರ್ವಹಿಸಬೇಕಾಗಿದೆ.


ಕೇರಳದ ರಾಜಧಾನಿ ತಿರುವನಂತಪುರದ ಉಪನಗರವಾದ ಪೆರೂರ್‌ಕಡದಲ್ಲಿರುವ ಸರಕಾರಿ ಮಾನಸಿಕ ಆರೋಗ್ಯ ಕೇಂದ್ರದ ಶೋಚನೀಯ ಸ್ಥಿತಿಯನ್ನು ಇತ್ತೀಚೆಗೆ ಸುದ್ದಿವರದಿಯೊಂದು ಬಹಿರಂಗಪಡಿಸಿತ್ತು. ಸಾಂಸ್ಥಿಕ ಕೇಂದ್ರಗಳಲ್ಲಿರುವ ಮಾನಸಿಕ ರೋಗಿಗಳ ಜೀವನ ಪರಿಸ್ಥಿತಿ ಕಾರಾಗೃಹದ ಬದುಕಿಗಿಂತಲೂ ಕೆಟ್ಟದಾಗಿದೆ. ಅಧಿಕಾರಿಗಳು ರೋಗಿಗಳನ್ನು ಕಿರಿದಾದ ಮತ್ತು ಕಿಕ್ಕಿರಿದು ತುಂಬಿದ ಮತ್ತು ಕಳಪೆ ವಾತಾಯನ ವ್ಯವಸ್ಥೆ ಮತ್ತು ತೀವ್ರ ಸೆಕೆಯ ಕೊಠಡಿಗಳಲ್ಲಿ ಕೂಡಿಹಾಕುತ್ತಾರೆ. ಇದರಿಂದಾಗಿ ಜಲಬಾಧೆ, ನಿದ್ರಾಹೀನತೆ ಹಾಗೂ ಅಸಮರ್ಪಕ ಔಷಧಿ ಅನುಸರಣೆ ಮತ್ತಿತರ ಸಮಸ್ಯೆಗಳು ಉದ್ಭವಿಸುತ್ತವೆ. ಕಂಬಿಗಳಿಂದ ಹಾಗೂ ಕಬ್ಬಿಣದ ಸಲಾಖೆಗಳು ಹಾಗೂ ಕಿಟಕಿಗಳಿಂದ ಆವೃತವಾಗುವ ಮಾನಸಿಕ ರೋಗಿಗಳ ಆಸ್ಪತ್ರೆಗಳ ಕೊಠಡಿಗಳನ್ನು ಕಂಡಾಗ 2001ರಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ 28 ರೋಗಿಗಳನ್ನು ಬಲಿತೆಗೆದುಗೊಂಡ ಘೋರ ಘಟನೆಗೆ ಸಾಕ್ಷಿಯಾದ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಎರವಾಡಿಯ ಮಾನಸಿಕ ಅಸ್ವಸ್ಥರಿಗಾಗಿನ ಆಶ್ರಮ ನೆನಪಿಗೆ ಬರುತ್ತದೆ.

ಮಿತಿಮೀರಿದ ಜನದಟ್ಟಣೆ ಹಾಗೂ ಸಣ್ಣ ಕೋಣೆಗಳಲ್ಲಿ ಅವರನ್ನು ಕೂಡಿಹಾಕುವುದು ದುರಂತಕಾರಿ ಮಾತ್ರವಲ್ಲದೆ, ಮಾನಸಿಕ ಅಸ್ವಸ್ಥತೆಯಿರುವ ರೋಗಿಗಳು ಚೇತರಿಸಿಕೊಳ್ಳುವುದಕ್ಕೆ ದೊಡ್ಡ ಹಿನ್ನಡೆಯೂ ಆಗಿದೆ. 2016-17ರಲ್ಲಿ ಒಡಿಶಾದ ಮಾನಸಿಕ ರೋಗಿಗಳ ಆಸ್ಪತ್ರೆಗಳ ಕುರಿತು ಸಾರ್ವಜನಿಕರ ವರ್ತನೆಯ ಬಗ್ಗೆ ನಡೆಸಿದ ಅಧ್ಯಯನವು, ಇಂತಹ ಸಂಸ್ಥೆಗಳು ತಾವು ಸೇವೆ ಸಲ್ಲಿಸುತ್ತಿರುವ ಮನೋರೋಗಿಗಳ ಬಗ್ಗೆ ತೋರುತ್ತಿರುವ ನಕಾರಾತ್ಮಕ ಧೋರಣೆಯನ್ನು ಹೊಂದಿರುವುದರ ಬಗ್ಗೆ ಬೆಳಕು ಚೆಲ್ಲುತ್ತಿರುವುದು.

ಲಭ್ಯವಿರುವ ಹಾಗೂ ಸುರಕ್ಷಿತವಾದ ಮಾನಸಿಕ ಆರೋಗ್ಯಪಾಲನೆಯನ್ನು ಗಳಿಸುವ ನಿಟ್ಟಿನಲ್ಲಿ ಭಾರತದ ಪಯಣವು ನಿಧಾನವಾಗಿದೆ ಹಾಗೂ ಹಲವಾರು ಸವಾಲುಗಳಿಂದ ತತ್ತರಿಸಿದೆ. ಮನೋರೋಗಿಗಳ ಸಾಂಸ್ಥಿಕ ಪಾಲನೆಯ ಬದಲಿಗೆ ಸಾಮುದಾಯಿಕ ಆಧಾರಿತ ಪಾಲನೆಗೆ ಆದ್ಯತೆ ನೀಡುವ ಜಾಗತಿಕ ಪ್ರವೃತ್ತಿಗೆ ಅನುಸಾರವಾಗಿ ಸಾಗಲು ಉದ್ದೇಶಿಸಿರುವ ಭಾರತವು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರಿಗೆ ಉತ್ತಮ ಚಿಕಿತ್ಸೆಯನ್ನು ನೀಡಲು ಕಾನೂನುಗಳನ್ನು ರೂಪಿಸಿದೆ. ಆದಾಗ್ಯೂ ಈ ನಿಟ್ಟಿನಲ್ಲಿ ಈಗ ನಡೆಯುತ್ತಿರುವ ಸಮರವು ಬಹುದೀರ್ಘವಾದ ಸಂಘರ್ಷವಾಗಲಿರುವಂತೆ ಕಾಣುತ್ತಿದೆ.

 ನಿಮ್ಹಾನ್ಸ್ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ 2015-16ನೇ ಸಾಲಿನಲ್ಲಿ ಭಾರತದ ಶೇ.14ರಷ್ಟು ಸಂಖ್ಯೆಯು ಒಂದಲ್ಲ ಒಂದು ರೀತಿಯ ಮಾನಸಿಕ ಅಸ್ವಸ್ಥತೆಯಿಂದ ಬದುಕುತ್ತಿದೆ. ಅವರ ಪೈಕಿ ಶೇ.1.9 ಮಂದಿ ತೀವ್ರವಾದ ಮಾನಸಿಕ ರೋಗದಿಂದ ನರಳುತ್ತಿದ್ದಾರೆ. ಮಾನಸಿಕ ರೋಗಿಗಳ ಚಿಕಿತ್ಸೆಯಲ್ಲಿ 72-92 ಶೇ. ಅಂತರವಿರುವುದನ್ನು ಕೂಡಾ ಈ ಸಮೀಕ್ಷೆಯು ಗಮನಕ್ಕೆ ತೆಗೆದುಕೊಂಡಿದೆ. 1999 ಹಾಗೂ 2012ರಲ್ಲಿ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗವು ಇತರ ಮೂಲಸೌಕರ್ಯಗಳ ಅಂತರವನ್ನು ಕೂಡಾ ಉಲ್ಲೇಖಿಸಿತ್ತು. ತೀವ್ರವಾದ ಸಿಬ್ಬಂದಿ ಕೊರತೆಗಳು, ರೋಗಿಗಳ ಹಕ್ಕುಗಳ ಉಲ್ಲಂಘನೆಗಳು, ಸ್ವಯಂಪ್ರೇರಿತವಲ್ಲದ ದಾಖಲಾತಿಗಳು ಹಾಗೂ ಸೀಮಿತವಾದ ಚಿಕಿತ್ಸೆಗಳ ಕುರಿತಾಗಿ ಸಮೀಕ್ಷೆಯು ಉಲ್ಲೇಖಗಳನ್ನು ಮಾಡಿದೆ. ಕಾಶ್ಮೀರದಲ್ಲಿ ಮಾನಸಿಕ ಅಸ್ವಸ್ಥತೆ ಕುರಿತಾಗಿ ಆ್ಯಕ್ಷನ್ ಏಯ್ಡೆ ಅಸೋಸಿಯೇಶನ್ ನಡೆಸಿದ ಸಮೀಕ್ಷೆ ಕೂಡಾ ಕಣಿವೆಯಲ್ಲಿ ತೀವ್ರವಾದ ಚಿಕಿತ್ಸಾ ಅಂತರಗಳು ಇರುವುದನ್ನು ಹಾಗೂ ಅತ್ಯಧಿಕ ಪ್ರಮಾಣದಲ್ಲಿ ಆತ್ಮಹತ್ಯಾ ಪ್ರವೃತ್ತಿಗಳು ಇರುವುದನ್ನು ಅನಾವರಣಗೊಳಿಸಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ 4 ಸಾವಿರ ಮಂದಿಯಲ್ಲಿ ಕೇವಲ ಶೇ.12.6 ಮಂದಿಗೆ ಮಾತ್ರವೇ ಚಿಕಿತ್ಸೆ ಲಭ್ಯವಾಗಲು ಸಾಧ್ಯವಾಗಿದೆ.

ತೀರಾ ಇತ್ತೀಚೆಗೆ ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಮಾನಸಿಕ ಆರೋಗ್ಯದ ಅವಶ್ಯಕತೆಗಳು ಹಾಗೂ ಅಂತರಗಳು ಇನ್ನಷ್ಟು ತೀವ್ರಗೊಂಡಿದೆ. ಉದಾಹರಣೆಗೆ ಲಾಕ್‌ಡೌನ್ ಸಂದರ್ಭದಲ್ಲಿ ತೀವ್ರವಾಗಿ ಮಾನಸಿಕ ಅಸ್ವಸ್ಥ ರೋಗಿಗಳ ಮೇಲೆ ನಡೆಸಲಾದ ಅಧ್ಯಯನದಲ್ಲಿ ಶೇ.80ರಷ್ಟು ರೋಗಿಗಳು ಮಾನಸಿಕ ಆರೋಗ್ಯ ವೃತ್ತಿಪರರನ್ನು ಗೊತ್ತುಪಡಿಸಲು ಅಥವಾ ಅವರನ್ನು ಭೇಟಿಯಾಗಲು ವಿಫಲರಾಗಿದ್ದಾರೆಂಬುದನ್ನು ಪತ್ತೆ ಹಚ್ಚಿದೆ. ಶೇ.30ರಷ್ಟು ಮಂದಿ ಲಾಕ್‌ಡೌನ್ ಸಂದರ್ಭದಲ್ಲಿ ರೋಗಲಕ್ಷಣಗಳು ಮರುಕಳಿಸಿರುವ ಚಿಹ್ನೆಗಳನ್ನು ಪ್ರದರ್ಶಿಸಿದರು. ಶೇ. 22ರಷ್ಟು ಮಂದಿ ತಮ್ಮ ಮಾನಸಿಕ ಚಿಕಿತ್ಸೆಯನ್ನು ನಿಲ್ಲಿಸಿದ್ದರು.

ಈ ಕಳವಳಕಾರಿ ಅಂಕಿಸಂಖ್ಯೆಗಳು ಪ್ರತಿಪಾದನೆಯ ಅವಶ್ಯಕತೆ ಹಾಗೂ ಪುರಾವೆ ಆಧಾರಿತ ನೀತಿ ಶಿಫಾರಸುಗಳ ಅಗತ್ಯವನ್ನು ಬೆಟ್ಟು ಮಾಡಿ ತೋರಿಸಿದರು. ಆ್ಯಕ್ಷನ್ ಏಯ್ಡೆ ಅಸೋಸಿಯೇಶನ್ 2017ರವರೆಗೆ ಆರೋಗ್ಯ ಹಾಗೂ ಮಾನಸಿಕ ಸ್ವಾಸ್ಥ ಕುರಿತ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ ಕೋರ್ ಸಮಿತಿಯ ಸದಸ್ಯನಾಗಿತ್ತು ಹಾಗೂ ಕಾಶ್ಮೀರ, ಗ್ವಾಲಿಯರ್, ಭೋಪಾಲ್, ಆಗ್ರಾ ಹಾಗೂ ರಾಂಚಿಯಲ್ಲಿ ಮಾನಸಿಕ ಚಿಕಿತ್ಸಾ ಆಸ್ಪತ್ರೆಗಳಲ್ಲಿ ಹಲವಾರು ಸಂಶೋಧನಾ ಯೋಜನೆಗಳನ್ನು ಹಾಗೂ ಉಪಕ್ರಮಗಳನ್ನು ಆಯೋಜಿಸಿತ್ತು. ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು ಆ್ಯಕ್ಷನ್ ಏಯ್ಡೆ ಅಸೋಸಿಯೇಶನ್ ನೀತಿಯನ್ನು ಹಾಗೂ ಸಂರಚನಾತ್ಮಕ ಬದಲಾವಣೆಗಳಿಗೆ ಶಿಫಾರಸು ಮಾಡಿತ್ತು.

 ಮಾನಸಿಕ ಆರೋಗ್ಯ ಪಾಲನಾ ಕಾಯ್ದೆ (ಎಂಎಚ್‌ಸಿಎ) 2017 ಈಗ ಊರ್ಜಿತದಲ್ಲಿರುವ ಕಾಯ್ದೆಗಳಿಗಿಂತ ವಿಭಿನ್ನವಾದುದಾಗಿದೆ. ಅದು ಮಾನಸಿಕ ಅನಾರೋಗ್ಯದ ವ್ಯಕ್ತಿಗಳನ್ನು ಸಮಾನವಾಗಿ ಪರಿಗಣಿಸುತ್ತದೆ. ಅವರನ್ನು ಕ್ರೌರ್ಯಭರಿತವಾದ ಹಾಗೂ ಹೀನಾಯವಾದ ಚಿಕಿತ್ಸೆಯಿಂದ ರಕ್ಷಿಸುತ್ತದೆ ಹಾಗೂ ಸಾಮುದಾಯಿಕ ಆಧಾರಿತ ಚಿಕಿತ್ಸೆಗೆ ನಿಯಮಗಳನ್ನು ರೂಪಿಸುತ್ತದೆ. ಇದರ ಜೊತೆಗೆ ಈ ಕಾನೂನು ಗೌಪ್ಯತೆ, ವೈದ್ಯಕೀಯ ದಾಖಲೆಗಳ ಲಭ್ಯತೆ ಹಾಗೂ ಕಾನೂನು ನೆರವಿನ ಖಾತರಿಯನ್ನು ನೀಡುತ್ತದೆ. ಇದು ಏಕಪಕ್ಷೀಯವಾಗಿ ಸಾಂಸ್ಥಿಕ ಚಿಕಿತ್ಸೆಗೆ ಒಳಪಡಿಸುವುದಕ್ಕೂ ತಡೆಗಳನ್ನು ನಿರ್ಮಿಸುತ್ತದೆ. ಆಸ್ತಿ, ಮನೆ ಇತ್ಯಾದಿ ವ್ಯಾಜ್ಯಗಳನ್ನು ಬಗೆಹರಿಸಲು ಕುಟುಂಬ ಸದಸ್ಯರು ಮಹಿಳೆಯರ ವಿರುದ್ಧ ಇಂತಹ ಪದ್ಧತಿಗಳನ್ನು ಬಳಸುತ್ತಿದ್ದರು.

ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರಗಳು ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಪರಾಮರ್ಶನಾ ಮಂಡಳಿಗಳಂತಹ ನಿಯಂತ್ರಣ ಮಂಡಳಿಗಳ ಸ್ಥಾಪನೆಯನ್ನು ಈ ಕಾಯ್ದೆಯು ಕಡ್ಡಾಯಗೊಳಿಸಿದೆ.
ಆದಾಗ್ಯೂ ಮಾನಸಿಕ ಆರೋಗ್ಯ ಸಂಸ್ಥಾಪನೆಗಳಲ್ಲಿ ತೃತೀಯ ಪಕ್ಷದಿಂದ ಮಾನವಹಕ್ಕುಗಳ ಪರಿಸ್ಥಿತಿಗಳ ವೌಲ್ಯಮಾಪನವನ್ನು ಅಥವಾ ನಿಗಾವಣೆಯನ್ನು 2017ರ ಎಂಎಚ್‌ಸಿಎ ಕಾಯ್ದೆಯು ಕಡ್ಡಾಯಗೊಳಿಸಿಲ್ಲ. ಸ್ವತಂತ್ರ ಮಾನವಹಕ್ಕುಗಳ ಕಣ್ಗಾವಲು ಅಧಿಕಾರಿಯ ನೇಮಕವು ಮಾನವಹಕ್ಕುಗಳ ರಕ್ಷಣೆಗೆ ಪಾರದರ್ಶಕವಾದ ಕಾರ್ಯತಂತ್ರವಾಗಲಿದೆ. ತಮ್ಮ ಕುಟುಂಬಗಳ ಜೊತೆ ರೋಗಿಗಳ ಮರುಏಕೀಕರಣ ಹಾಗೂ ಪುನರ್ವಸತಿಯ ಕ್ರಮಗಳಿಗೂ ಈ ಕಾಯ್ದೆಯು ಆಸ್ಪದ ನೀಡುತ್ತದೆ.

ಈ ಅಧ್ಯಯನದ ಪ್ರಕಾರ ಪ್ರತೀ ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿರುವ ಪ್ರತೀ ನಾಲ್ವರು ಮಹಿಳೆಯರಲ್ಲಿ ಒಬ್ಬರನ್ನು ಅವರ ಕುಟುಂಬಿಕರು ತ್ಯಜಿಸಿದ್ದಾರೆ. ಮಾನಸಿಕ ಅನಾರೋಗ್ಯವನ್ನು ಕಳಂಕಮುಕ್ತಗೊಳಿಸಲು ಹಾಗೂ ರೋಗಿಗಳ ಪುನರ್‌ವ್ಯವಸ್ಥೆಗೆ ಮತ್ತು ಅವರನ್ನು ಸಮಾಜದಲ್ಲಿ ಮತ್ತೆ ಸಮ್ಮಿಳಿತಗೊಳಿಸಲು ಮಹಿಳಾವಾದಿ ನಿಲುವನ್ನು ತಾಳುವ ಬಲವಾದ ಅಗತ್ಯವಿದೆ.

ಈ ಕಾಯ್ದೆಯ ಜಾರಿಯು ಅತ್ಯಂತ ಜಡತೆಯಿಂದ ಕೂಡಿದೆ. 2021ರಲ್ಲಿ ಮಹಾರಾಷ್ಟ್ರದಲ್ಲಿ ಕೇವಲ ಎಂಟು ಜಿಲ್ಲಾ ಮಾನಸಿಕ ಆರೋಗ್ಯ ಪರಾಮರ್ಶನಾ ಮಂಡಳಿಗಳಿದ್ದು, ಅವು 36 ಜಿಲ್ಲೆಗಳಿಗೆ ಸೇವೆಯನ್ನು ಒದಗಿಸುತ್ತಿದ್ದವು. ಇನ್ನು ಉತ್ತರಪ್ರದೇಶದ ಕಾನ್ಪುರದಲ್ಲಿ ಮಾತ್ರ ಜಿಲ್ಲಾ ಮಾನಸಿಕ ಆರೋಗ್ಯ ಪರಾಮರ್ಶನಾ ಮಂಡಳಿಯಿದೆ. ದಿಲ್ಲಿಯಲ್ಲಿ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರವು ಮಧ್ಯಂತರ ಮಾನಸಿಕ ಆರೋಗ್ಯ ಪರಾಮರ್ಶನಾ ಮಂಡಳಿಯಾಗಿ ಕಾರ್ಯಾಚರಿಸುತ್ತಿದ್ದು, ಇದು ಉತ್ತರದಾಯಿತ್ವದ ಸವೆತ ಹಾಗೂ ಹೊಣೆಗಾರಿಕೆಗಳ ವಿಸರ್ಜನೆಗೆ ಕಾರಣವಾಗಿದೆ.

2017ರ ಎಂಎಚ್‌ಸಿ ಕಾಯ್ದೆಯ ಅನುಷ್ಠಾನಕ್ಕಾಗಿ ರಾಜ್ಯಗಳು ನಿಯಮಾವಳಿಗಳನ್ನು ರೂಪಿಸಬೇಕಿದೆ ಹಾಗೂ ಆರೋಗ್ಯ ಪಾಲನಾ ಸಂಸ್ಥಾಪನೆಗಳಿಗೆ ಸಂಬಂಧಿಸಿ ಮಾನದಂಡಗಳನ್ನು ರೂಪಿಸಿದೆ. ರೋಗಿಗಳ ದಟ್ಟಣೆ, ರೋಗಿಗಳ ವಿರುದ್ಧ ಕ್ರೌರ್ಯದ ವರ್ತನೆ ಅಥವಾ ಕಳಪೆ ಮಟ್ಟದ ನೈರ್ಮಲ್ಯ ಹಾಗೂ ಸೌಲಭ್ಯಗಳ ಲಭ್ಯತೆಯನ್ನು ಈ ಮಾನದಂಡಗಳು ದೃಢಪಡಿಸುವುದಿಲ್ಲ. ಆದಾಗ್ಯೂ 2021ರ ಅಕ್ಟೋಬರ್‌ವರೆಗೆ ಕೇವಲ ಎಂಟು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತವು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯವು ಎಂಎಚ್‌ಸಿಎ ಕಾಯ್ದೆಯ ಅನುಷ್ಠಾನದ ಕುರಿತ ನಿಯಮಾವಳಿಗಳನ್ನು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಅನುಮೋದನೆಗಾಗಿ ಕಳುಹಿಸಿಕೊಟ್ಟಿತ್ತು.

ಮಾನಸಿಕ ಆರೋಗ್ಯ ಪಾಲನೆ ಕ್ಷೇತ್ರಕ್ಕೆ ನೀಡಲಾದ ಬಜೆಟ್ ಅನುದಾನದಲ್ಲಿಯೂ ಹಲವಾರು ಕೊರತೆಗಳಿದ್ದವು. ಹಿಂದಿನ ನಾಲ್ಕು ಕೇಂದ್ರ ಬಜೆಟ್‌ಗಳಲ್ಲಿ ಮಾನಸಿಕ ಆರೋಗ್ಯ ಕ್ಷೇತ್ರಕ್ಕೆ ನೀಡಲಾಗುತ್ತಿದ್ದ ಅನುದಾನವು ಒಟ್ಟು ಬಜೆಟ್ ಮೊತ್ತದ ಕೇವಲ ಶೇ.1ಕ್ಕಿಂತಲೂ ಕಡಿಮೆಯಿತ್ತು. 2022-23ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಈ ಅನುದಾನವನ್ನು ಒಟ್ಟು ಬಜೆಟ್‌ನ ಶೇ.2.18ಕ್ಕೆ ಹೆಚ್ಚಿಸಲಾಗಿತ್ತು. ಆದಾಗ್ಯೂ ಈ ಅನುದಾನದ ಸಿಂಹಪಾಲು (ಶೇ.94) ಕೇಂದ್ರ ಸರಕಾರವು ನಡೆಸುತ್ತಿದ್ದ ಎರಡು ಮಾನಸಿಕ ಆರೋಗ್ಯ ಪಾಲನಾ ಸಂಸ್ಥೆಗಳಾದ ಬೆಂಗಳೂರಿನ ನಿಮ್ಹಾನ್ಸ್ ಹಾಗೂ ತೇಜಪುರದ ಲೋಕಪ್ರಿಯ ಗೋಪಿನಾಥ ಬೊರ್ದೊಲೊಯ್ ಪ್ರಾದೇಶಿಕ ಮಾನಸಿಕ ಆರೋಗ್ಯ ಸಂಸ್ಥೆಗೆ ದೊರೆತಿದೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮವು ಸರ್ವರಿಗೂ ಕನಿಷ್ಠ ಮಟ್ಟದ ಮಾನಸಿಕ ಆರೋಗ್ಯಪಾಲನೆಯ ಲಭ್ಯತೆಯನ್ನು ಖಾತರಿಪಡಿಸುತ್ತದೆ.

ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು ಇನ್ನೂ ಹೆಚ್ಚು ಸಮಗ್ರ ನಿಲುವನ್ನು ತಳೆಯುವ ದೃಷ್ಟಿಯಿಂದ ದೇಶದಲ್ಲಿ ಮಾನಸಿಕ ಅಸ್ವಸ್ಥರ ಪುನರ್ವಸತಿಗೆ ಹೆಚ್ಚು ಅನುಕೂಲಕರವಾಗುವಂತಹ ಕೌಟುಂಬಿಕ ವ್ಯವಸ್ಥೆಗಳನ್ನು ರೂಪಿಸಲು ನಾವು ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಸ್ಥಳೀಯ ಮನೋಆರೋಗ್ಯ ಕೇಂದ್ರಗಳು ಮಾನಸಿಕ ಅಸ್ವಸ್ಥತೆಯ ಅಪಾಯವನ್ನು ಎದುರಿಸುತ್ತಿರುವ ಕುಟುಂಬಗಳಿಗೆ ಮಾನಸಿಕ ಶಿಕ್ಷಣ ನೀಡಬೇಕಾಗಿದೆ ಹಾಗೂ ಇಂತಹ ಪ್ರಕರಣಗಳನ್ನು ನಿರ್ವಹಿಸಬೇಕಾಗಿದೆ. ಮಾನಸಿಕ ಅನಾರೋಗ್ಯವನ್ನು ಕಳಂಕಮುಕ್ತಗೊಳಿಸುವ ನಿಟ್ಟಿನಲ್ಲಿ ಸಾಮುದಾಯಿಕ ನಾಯಕರನ್ನು ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡಬೇಕಾಗಿದೆ ಹಾಗೂ ಮಾನಸಿಕ ಆರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳ ಪುನರ್ವಸತಿಗೆ ಅವಕಾಶ ಮಾಡಿಕೊಡಲು ಸಮುದಾಯ ಆಧಾರಿತ ಕಟ್ಟಡಗಳನ್ನು ನಿರ್ಮಿಸಲು ಹಣಕಾಸು ನೆರವನ್ನು ಒದಗಿಸಬೇಕಾಗಿದೆ. ತೀರಾ ಹೊಸತಾಗಿ ಮಾನಸಿಕ ಅನಾರೋಗ್ಯದಿಂದ ಚೇತರಿಸಿಕೊಂಡ ವ್ಯಕ್ತಿಗಳ ಪುನರ್‌ಸಂಯೋಜನೆಗಾಗಿ ಅಭಯಕೇಂದ್ರಗಳನ್ನು ಸ್ಥಾಪಿಸಬೇಕಾಗಿದೆ. ಕಾನೂನಿನ ಕ್ಷಿಪ್ರ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮಾನವಹಕ್ಕುಗಳ ಉಲ್ಲಂಘನೆಗಳ ಕುರಿತ ಸ್ವತಂತ್ರ ಕಣ್ಗಾವಲು ಸಂಸ್ಥೆಗಳ ಸ್ಥಾಪನೆ, ಹೆಚ್ಚು ಸದೃಢವಾದ ಸಮುದಾಯ ಆಧಾರಿತವಾದ ಮಧ್ಯಪ್ರವೇಶಗಳು ಹಾಗೂ ಆರ್ಥಿಕ ಅನುದಾನವನ್ನು ಹೆಚ್ಚಿಸಬೇಕಾಗಿದೆ. 2001ರಲ್ಲಿ ತಮಿಳುನಾಡಿನ ಎರವಾಡಿಯ ಮಾನಸಿಕ ಅಸ್ವಸ್ಥರ ಆಶ್ರಮದಲ್ಲಿ ನಡೆದ ಅಗ್ನಿದುರಂತದಲ್ಲಿ 28 ಮಂದಿ ಮೃತಪಟ್ಟ ಘಟನೆಯನ್ನು ತಡೆಯಲು ಹಾಗೂ ಮಾನಸಿಕ ಅಸ್ವಸ್ಥತೆಯಿಂದ ಬಾಧಿತರಾಗಿರುವ ವ್ಯಕ್ತಿಗಳ ಹಕ್ಕುಗಳು ಹಾಗೂ ಘನತೆಯನ್ನು ಖಾತರಿಪಡಿಸಲು ನಾವು ಇನ್ನೂ ಬಹು ದೂರ ಸಾಗಬೇಕಾಗಿದೆ.

theprint.in

Writer - ಲಿಸ್ ಮಲ್ಹೋತ್ರಾ

contributor

Editor - ಲಿಸ್ ಮಲ್ಹೋತ್ರಾ

contributor

Similar News