ವೈವಿಧ್ಯತೆಯ ಆಕಾರ, ಬಣ್ಣ, ರುಚಿಯೊಂದಿಗೆ ಬಾಯಲ್ಲಿ ನೀರೂರಿಸುವ ಮಾವು ಮೇಳ

Update: 2022-05-21 16:16 GMT

ಉಡುಪಿ : ಹಣ್ಣುಗಳ ರಾಜನೆಂದೇ ಪ್ರಖ್ಯಾತವಾಗಿರುವ ಮಾವಿನ ಹಣ್ಣು ಗಳು ವಿವಿಧ ಆಕಾರ, ಬಣ್ಣ ಹಾಗೂ ರುಚಿ ವೈವಿಧ್ಯತೆಯೊಂದಿಗೆ ಹಿರಿಯರು, ಕಿರಿಯರೆನ್ನದೇ ಎಲ್ಲರನ್ನೂ ಸೆಳೆಯುವ ನೋಟಗಳು ನಗರದ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಕಂಡುಬರುತ್ತಿದೆ. 

ಕೆಲವೇ ಕೆಲವು ತಳಿಯ ಹಣ್ಣುಗಳನ್ನು ಹೊರತುಪಡಿಸಿದರೆ, ಮಾವಿನ ಬೆಳೆಗೆ ಪೂರಕವಲ್ಲದ ಕರಾವಳಿ ಜಿಲ್ಲೆ, ಹೊರ ಜಿಲ್ಲೆಗಳು ಹಾಗೂ ಹೊರರಾಜ್ಯಗಳನ್ನು ಮಾವಿನ ಹಣ್ಣಿಗಾಗಿ ಅವಲಂಬಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ಮಾವಿನ ಹಣ್ಣೆಂಬುದು ಸಾಮಾನ್ಯ ಜನರಿಗೆ ಕೈಗೆಟುಕದ ಹಣ್ಣಾಗಿಯೇ ಗುರುತಿಸಿಕೊಂಡಿದೆ.

ಕೋಲಾರ ಜಿಲ್ಲೆಯ ಬಳಿಕ ಕರ್ನಾಟಕದಲ್ಲಿ ಅತಿ ಹೆಚ್ಚು ಮಾವಿನ ಹಣ್ಣು ಬೆಳೆಯುವ ರಾಮನಗರ ಜಿಲ್ಲೆಯಿಂದ ಮಾವು ಬೆಳೆಗಾರರೇ ತಂದ 9 ಕ್ಕೂ ಅಧಿಕ  ತಳಿಯ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಮುಂದಿನ ಎರಡು ದಿನಗಳ ಕಾಲ ಉಡುಪಿ ದೊಡ್ಡಣಗುಡ್ಡೆ ತೋಟಗಾರಿಕೆ ಕ್ಷೇತ್ರದ ರೈತ ಸೇವಾ ಕೇಂದ್ರದಲ್ಲಿ ನಡೆಯಲಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಉಡುಪಿ ಹಾಗೂ ಜಿಲ್ಲಾ ತೆಂಗು ಮತುತಿ ಮಾವು ರೈತ ಉತ್ಪಾದಕರ ಸಂಸ್ಥೆ ರಾಮನಗರ ಇವರ ಸಂಯುಕ್ತ ಆಶ್ರಯದಲ್ಲಿ ರೈತರಿಂದ ನೈಸರ್ಗಿಕವಾಗಿ ಮಾಗಿಸಿರುವ ವಿವಿಧ ಮಾವಿನ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮೇಳವು ಮೇ ೨೧ರಿಂದ ೨೩ ರವರೆಗೆ ನಡೆಯುತ್ತಿದೆ.

ಸಾರ್ವಜನಿಕರಿಗೆ ರಾಮನಗರದಲ್ಲಿ ಬೆಳೆಯುವ ವಿವಿಧ ಮಾವಿನ ತಳಿಗಳನ್ನು ಜಿಲ್ಲೆಯ ಜನರಿಗೆ ಪರಿಚಯಿಸು ವುದು. ಈ ಮೂವಕ ಹವಾಮಾನ ವೈಪರೀತ್ಯ ದಿಂದಾಗಿ ಮಾವು ಇಳುವರಿ ನಷ್ಟದಲ್ಲಿರುವ ಬೆಳೆಗಾರರ ಸಂಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಮಾವಿಗಾಗಿರುವ ರೈತ ಉತ್ಪಾದಕರ ಸಂಘಟನೆ (ಎಫ್‌ಪಿಓ) ಈ ಮೇಳವನ್ನು ಮೊದಲ ಬಾರಿ ಉಡುಪಿಯಲ್ಲಿ ಆಯೋಜಿಸಿದೆ ಎಂದು ಸಂಘಟನೆಯ ಸಿದ್ಧರಾಜು ತಿಳಿಸಿದ್ದಾರೆ.

ಮೇಳದಲ್ಲಿ 20ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿದೆ. ರಾಮನಗರ ಜಿಲ್ಲೆಯ ಒಟ್ಟು ಎಂಟು ವಿಧದ ತಳಿಗಳು ಆಮ್ರಪಾಲ್ಲಿ, ಬಾದಾಮಿ, ರಸಪುರಿ, ಮಲಗೋವಾ, ತೋತಾಪುರಿ, ಸಿಂಧೂರ, ಸಕ್ಕರೆಗುತ್ತಿ (ಶುಗರ್‌ಬೇಬಿ), ಬೈಗಂಪಲ್ಲಿ, ರತ್ನಗಿರಿ, ಆಲ್ಪೋನ್ಸ್ ತಳಿಗಳ ಒಟ್ಟು ೩೦ ಟನ್ ಮಾವು ಮೇಳದಲ್ಲಿ ಪ್ರದರ್ಶನ ಹಾಗೂ ಖರೀದಿಗೆ ಲಭ್ಯವಿದೆ ಎಂದವರು ಹೇಳುತ್ತಾರೆ. 

ಮಾವು ಮೇಳದಲ್ಲಿ ಸಕ್ಕರೆಗುತ್ತಿ ಮಾವು ಚಿಕ್ಕದಾದ ವಿಶಿಷ್ಟ ಆಕಾರ ಹಾಗೂ ರುಚಿಯೊಂದಿಗೆ ವಿಶೇಷ ಆಕರ್ಷಣೆಯಾಗಿದ್ದು, ಕೆಜಿಗೆ 200ರೂ. ದರದಲ್ಲಿ ಮಾರಾಟವಾಗುತ್ತಿದೆ. ತಿನ್ನಲು ಅತ್ಯಂತ ರುಚಿಕರವಾಗಿರುವ ಇದು, ಭಾರೀ ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿದೆ. ಹೀಗಾಗಿ ಇಂದೇ ಎಲ್ಲವೂ ಮಾರಾಟವಾಗಿದೆ ಎಂದು ಮೇಳದ ಮಾರಾಟಗಾರರು ತಿಳಿಸಿದರು.

ಗುಡ್ಡಗಾಡು ಪ್ರದೇಶ ಹಾಗೂ ಶುಷ್ಕ ಹವಾಮಾನದಿಂದಾಗಿ ರಾಮನಗರದ ಮಾವಿನ ಹಣ್ಣುಗಳು ಗುಣಮಟ್ಟ ಹಾಗೂ ಸಿಹಿಯಲ್ಲಿ ಕೋಲಾರದ ಮಾವಿನ ಹಣ್ಣುಗಳಿಗಿಂತಲೂ ಮೇಲುಗೈ ಹೊಂದಿದ್ದು, ಇವುಗಳನ್ನು ನೇರವಾಗಿ ಬೆಳಗಾರರಿಂದಲೇ ಖರೀದಿಸುವ ಅವಕಾಶ ಉಡುಪಿಯ ಜನತೆಗಿದೆ. ನಿಗದಿತ ಬೆಲೆಯೊಂದಿಗೆ ಈ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಸಿದ್ಧರಾಜು ತಿಳಿಸಿದರು.

ರಸಪುರಿ ಹಣ್ಣು ಕೆ.ಜಿಗೆ 120, ಸಿಂಧೂರು 80, ತೋತಾಪುರಿ 40, ಮಲ್ಲಿಕಾ 120 ರೂ.ದರದಲ್ಲಿ ಮಾರಾಟವಾಗುತ್ತಿದೆ. ಆಲ್ಫೋನ್ಸ್ ಮಾವಿನ ಹಣ್ಣು ಮೂರು ಕೆ.ಜಿ.ಪ್ಯಾಕ್ ೪೦೦ರೂ.ಗೆ ಲಭ್ಯವಿದೆ ಎಂದೂ ಅವರು ಹೇಳಿದರು.

ಮಾವಿನ ಬೆಳೆಗೆ ಪೂರಕವಲ್ಲದ ತೇವಾಂಶ ಭರಿತ ಹವಾಮಾನದಿಂದ ಜಿಲ್ಲೆಯಲ್ಲಿ ಮಾವಿನ ವ್ಯವಸಾಯ ಹೆಚ್ಚೇನೂ ಲಾಭದಾಯಕವಲ್ಲ.  ಹೀಗಾಗಿ ಇಲ್ಲಿ ಮಾವಿನ ವೈವಿಧ್ಯತೆ ಹೆಚ್ಚೇನೂ ಕಾಣಸಿಗುವುದಿಲ್ಲ. ಹೀಗಾಗಿ ಮೊದಲ ಬಾರಿ ನಡೆಯುತ್ತಿರುವ ನಡೆದ ಮಾವು ಮೇಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.  ಮೇಳದ ಮೊದಲ ದಿನವೇ ಸಾಕಷ್ಟು ಸಂಖ್ಯೆಯಲ್ಲಿ ಜನರು ಮೇಳದಲ್ಲಿ ಭಾಗವಹಿಸಿ ವಿವಿಧ ಹಣ್ಣುಗಳ ರುಚಿ ಸವಿದು, ಖರೀದಿಸಿ ಮನೆಗೊಯ್ದರು. ಮುಂದೆ ಮಂಗಳೂರಿನಲ್ಲೂ ರಾಮನಗರಜಿಲ್ಲೆಯ ಮಾವಿನ ಹಣ್ಣು ಗಳ ಪ್ರದರ್ಶನ ಮತ್ತು ಮಾರಾಟ ಆಯೋಜನೆಗೊಳ್ಳಲಿದೆ.

Writer - ಬಿ.ಬಿ.ಶೆಟ್ಟಿಗಾರ್

contributor

Editor - ಬಿ.ಬಿ.ಶೆಟ್ಟಿಗಾರ್

contributor

Similar News