ಯುದ್ಧದಿಂದ ಆದ ನಷ್ಟಕ್ಕೆ ರಶ್ಯ ಪರಹಾರ ನೀಡಬೇಕು:‌ ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ

Update: 2022-05-21 16:57 GMT
volodymyr zelensky

ಕೀವ್, ಮೇ 21: ಉಕ್ರೇನ್ ವಿರುದ್ಧ ರಶ್ಯ ಆರಂಭಿಸಿರುವ ಏಕಪಕ್ಷೀಯ ಸಮರ ಇದೀಗ 3ನೇ ತಿಂಗಳಿನ ಹೊಸ್ತಿಲಲ್ಲಿದ್ದು ಯುದ್ಧದಿಂದ ಉಕ್ರೇನ್ಗೆ ಸುಮಾರು 100 ಬಿಲಿಯನ್ ಡಾಲರ್ನಷ್ಟು ನಷ್ಟ ಸಂಭವಿಸಿದೆ. ಇದಕ್ಕೆ ರಶ್ಯ ಪರಿಹಾರ ನೀಡಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ  ಆಗ್ರಹಿಸಿದ್ದಾರೆ.

ಹೀಗೆ ಮಾಡುವುದು ನ್ಯಾಯೋಚಿತವಾಗಿದೆ. ನಮ್ಮ ದೇಶದ ಮೇಲೆ ಸುರಿದ ಪ್ರತೀ ಬಾಂಬ್ ನ, ನಮ್ಮತ್ತ ಉಡಾಯಿಸಿದ ಪ್ರತಿಯೊಂದು ಕ್ಷಿಪಣಿಯ ಭಾರವನ್ನೂ ಅವರು (ರಶ್ಯ) ಅನುಭವಿಸಬೇಕು ಎಂದವರು ಹೇಳಿದ್ದಾರೆ. ಬಹುಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲು ನಾವು ಪಾಲುದಾರ ದೇಶವನ್ನು ಆಹ್ವಾನಿಸುತ್ತೇವೆ ಮತ್ತು ರಷ್ಯದ ಕ್ರಮದಿಂದ ತೊಂದರೆ ಅನುಭವಿಸಿದ ಎಲ್ಲರೂ ತಮಗಾದ ಎಲ್ಲಾ ನಷ್ಟಗಳಿಗೂ ಪರಿಹಾರ ಪಡೆಯುವುದನ್ನು ಖಚಿತಪಡಿಸುವ ಕಾರ್ಯವಿಧಾನವನ್ನು ರಚಿಸಲಿದ್ದೇವೆ ಎಂದು ಅವರು ದೇಶವನ್ನುದ್ದೇಶಿಸಿ ನೀಡಿದ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

 ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಶನಿವಾರದ ಕೆಲವು ಮಹತ್ವದ ಬೆಳವಣಿಗೆಗಳು ಹೀಗಿವೆ: ಅಝೊವ್‌ಸ್ತಲ್ ಉಕ್ಕು ಸ್ಥಾವರವನ್ನು ಸಂಪೂರ್ಣ ನಿಯಂತ್ರಣಕ್ಕೆ ಪಡೆದಿರುವುದಾಗಿ ರಶ್ಯ ಪ್ರತಿಪಾದನೆ. ಇದರೊಂದಿಗೆ ಉಕ್ರೇನ್ನ ಅತ್ಯಂತ ಆಯಕಟ್ಟಿನ ಬಂದರು ನಗರ ಮರಿಯುಪೋಲ್‌ನಲ್ಲಿ ಉಕ್ರೇನ್ ಯೋಧರ ಅಂತಿಮ ಪ್ರತಿರೋಧವನ್ನು ಹತ್ತಿಕ್ಕಿದ್ದು ಸ್ಥಾವರದಲ್ಲಿದ್ದ 2,439 ಉಕ್ರೇನ್ ಯೋಧರು ಶರಣಾಗಿರುವುದಾಗಿ ರಶ್ಯದ ರಕ್ಷಣಾ ಇಲಾಖೆ ಹೇಳಿದೆ.

ಯುದ್ಧದಿಂದ ಜರ್ಝರಿತಗೊಂಡಿರುವ ಉಕ್ರೇನ್‌ಗೆ ಈ ವರ್ಷ ಸುಮಾರು 20 ಬಿಲಿಯನ್ ಡಾಲರ್ನಷ್ಟು ನೆರವು ಒದಗಿಸುವುದಾಗಿ ಜಿ7 ದೇಶಗಳ ಘೋಷಣೆ. ಉಕ್ರೇನ್‌ನ  ಪೂರ್ವದ ಲುಹಾಂನ್ಸ್ಕ್ ಪ್ರಾಂತದಲ್ಲಿ ರಶ್ಯ ಸೇನೆ ಭಾರೀ ಆಕ್ರಮಣ ಮುಂದುವರಿಸಿದೆ. ಸಿವಿಯೆರೊಡೊನೆಟ್ಸ್ಕ್ ನಗರದಲ್ಲಿ ಬಾಂಬ್ ದಾಳಿಯಿಂದ ತೀವ್ರ ಹಾನಿಯಾಗಿದೆ. ಜನವಸತಿ ಪ್ರದೇಶದ ಮೇಲೆ ಬಾಂಬ್ ದಾಳಿ ನಡೆಸುತ್ತಿದ್ದು ಹಲವಾರು ಮಂದಿ ಮೃತಪಟ್ಟಿದ್ದಾರೆ ಎಂದು ಲುಹಾನ್ಸ್ಕ್ ಗವರ್ನರ್ ಸೆರ್ಹಿಯ್ ಗೈದಾಯಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
 
ಉಕ್ರೇನ್‌ನಲ್ಲಿ ರಶ್ಯ ನಡೆಸುತ್ತಿರುವ ಬಾಂಬ್ ದಾಳಿಯಿಂದಾಗಿ ಅಲ್ಲಿಂದ ಅಗತ್ಯದ ಆಹಾರ ವಸ್ತುಗಳ ರಫ್ತಿಗೆ ಅಡ್ಡಿಯಾಗಿದೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ವಸ್ತುಗಳ ದರ ಗಗನಕ್ಕೇರಿದ್ದು ಬಡಜನರಿಗೆ ತೀವ್ರ ಸಮಸ್ಯೆಯಾಗಿದೆ . ರಶ್ಯವು ತನ್ನ ಅನಾಗರಿಕ ಯುದ್ಧವನ್ನು ಕೊನೆಗೊಳಿಸಿ ಉಕ್ರೇನ್‌ನ  ರೈತರು ತಮ್ಮ ಕಾಯಕ ಮುಂದುವರಿಸಲು ಅನುವು ಮಾಡಿಕೊಡಬೇಕಾಗಿದೆ ಎಂದು ಬ್ರಿಟನ್ ಆಗ್ರಹಿಸಿದೆ.

ಉಕ್ರೇನ್‌ಗೆ ಅಮೆರಿಕದ 40 ಬಿಲಿಯನ್ ಡಾಲರ್ ನೆರವಿನ ಮಸೂದೆಗೆ ಅಲ್ಲಿನ ಸಂಸತ್ತು ಅನುಮೋದನೆ ನೀಡಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಉಕ್ರೇನ್‌ನಲ್ಲಿ ಬೃಹತ್ ಪ್ರಮಾಣದ ಪಾಶ್ಚಿಮಾತ್ಯ ಶಸ್ತ್ರಾಸ್ತ್ರ ಸಂಗ್ರಹ ಧ್ವಂಸ: ರಶ್ಯ ಹೇಳಿಕೆ

ಉಕ್ರೇನ್‌ನ ಝಿಟೊಮಿರ್ ಪ್ರದೇಶದಲ್ಲಿ ಸಂಗ್ರಹಿಸಿಟ್ಟಿದ್ದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕ್ಯಾಲಿಬ್ರ್ ಕ್ರೂಸ್ ಕ್ಷಿಪಣಿಯ ಮೂಲಕ ಧ್ವಂಸಗೊಳಿಸಲಾಗಿದೆ. ಇವು ಉಕ್ರೇನ್‌ಗೆ  ಪಾಶ್ಚಿಮಾತ್ಯ ದೇಶಗಳಿಂದ ಲಭಿಸಿದ ಶಸ್ತ್ರಾಸ್ತ್ರಗಳಾಗಿತ್ತು ಎಂದು ರಶ್ಯದ ರಕ್ಷಣಾ ಇಲಾಖೆ ಶನಿವಾರ ಹೇಳಿದೆ.
 
ಅಮೆರಿಕ ಮತ್ತು ಯುರೋಪ್ ದೇಶಗಳು ಪೂರೈಸಿದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮಿಲಿಟರಿ ಉಪಕರಣಗಳನ್ನು ನಾಶಗೊಳಿಸಲಾಗಿದೆ. ಸಂಘರ್ಷ ತೀವ್ರಗೊಂಡಿರುವ ಪೂರ್ವದ ಡೊನ್ಬಾಸ್ ವಲಯದಲ್ಲಿ ಈ ಶಸ್ತ್ರಾಸ್ತ್ರಗಳನ್ನು ಬಳಸಲು ಉಕ್ರೇನ್ ಯೋಜಿಸಿತ್ತು. 

ಅಲ್ಲದೆ ಕಪ್ಪು ಸಮುದ್ರ ದಡದಲ್ಲಿರುವ ಒಡೆಸಾ ಬಂದರಿನ ಬಳಿ ಉಕ್ರೇನ್‌ನ ತೈಲ ದಾಸ್ತಾನು ಕೇಂದ್ರಗಳಿಗೂ ಕ್ಷಿಪಣಿ ಅಪ್ಪಳಿಸಿದೆ. ಉಕ್ರೇನ್‌ನ  2 ಎಸ್ಯು-25 ಯುದ್ಧವಿಮಾನ ಮತ್ತು 14 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News