"ನೀವು ಗಮನಿಸುತ್ತಿಲ್ಲವಷ್ಟೇ..." ವಸ್ತುಗಳ ಬೆಲೆಯೇರಿಸದೇ ಪ್ಯಾಕೆಟ್‌ ಗಳ ಗಾತ್ರ ಕುಗ್ಗಿಸುತ್ತಿರುವ ಕಂಪೆನಿಗಳು !

Update: 2022-05-21 17:52 GMT

5,10 ರೂ.ನಂತಹ ಸಣ್ಣಬೆಲೆಗಳ ಗ್ರಾಹಕ ಉತ್ಪನ್ನಗಳು (ಎಫ್ಎಂಸಿಜಿಗಳು) ಬಳಕೆದಾರರಲ್ಲಿ ಜನಪ್ರಿಯವಾಗಿವೆ ಮತ್ತು ಇವು ಉತ್ಪಾದಕ ಕಂಪನಿಗಳಿಗೂ ಹೇರಳ ಲಾಭವನ್ನು ನೀಡುತ್ತವೆ. ತಿನಿಸು, ಬಿಸ್ಕಿಟ್ನಿಂದ ಹಿಡಿದು ಸೋಪ್‌ವರೆಗೆ ಹಲವಾರು ಉತ್ಪನ್ನಗಳು ಇಂತಹ ಸಣ್ಣ ಪ್ಯಾಕೆಟ್ಗಳಲ್ಲಿ ಎಲ್ಲ ಅಂಗಡಿಗಳಲ್ಲೂ ದೊರೆಯುತ್ತವೆ. ಮಾಮೂಲಿನಂತೆ ನೀವು ಅದನ್ನು ಖರೀದಿಸುತ್ತೀರಿ,ಆದರೆ ಬೆಲೆ ಹಿಂದಿನದೇ ಇದ್ದರೂ ಅವುಗಳ ಗಾತ್ರ ಕುಗ್ಗಿರುವುದನ್ನು ನೀವು ಗಮನಿಸುವುದಿಲ್ಲ.

ಹಣದುಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಮ್ಮ ವೆಚ್ಚಗಳನ್ನು ತಗ್ಗಿಸಲು ಎಫ್ಎಂಸಿಜಿ ಕ್ಷೇತ್ರದಾದ್ಯಂತ ಬ್ರಾಂಡ್ ಗಳು ತಮ್ಮ ಗ್ರಾಮೇಜ್ (ಪ್ರತಿ ಪ್ಯಾಕ್ನಲ್ಲಿಯ ಪ್ರಮಾಣ)ನ್ನು ಕಡಿತಗೊಳಿಸಿವೆ. ಇಂತಹ ಹೆಚ್ಚಿನ ಪ್ರಮಾಣ ಕಡಿತಗಳು ಈ ವರ್ಷದ ಆರಂಭದಿಂದಲೇ ಜಾರಿಗೊಂಡಿವೆ.

2020ರಲ್ಲಿ ಬಿಡುಗಡೆಗೊಂಡಿದ್ದ ಲಾಹೋರಿ ಜೀರಾ ಪಾನೀಯದ ಗ್ರಾಮೇಜ್ ಅನ್ನು 200 ಎಂಎಲ್‌ನಿಂದ 160 ಎಂಎಲ್ ಗೆ ಇಳಿಸಲಾಗಿದೆ. ಥಮ್ಸ್ಅಪ್ ಮತ್ತು ಕೋಕಾಕೋಲಾದ ಸಣ್ಣ ಬಾಟಲ್ ನ ಗ್ರಾಮೇಜ್ ಅನ್ನು 250 ಎಂಎಲ್ನಿಂದ 200 ಎಂಎಲ್ ಗೆ ತಗ್ಗಿಸಲಾಗಿದೆ. ಎಲ್ಲವೂ ಗಾತ್ರದಲ್ಲಿ ಸಣ್ಣದಾಗುತ್ತಿವೆ ಎಂದು ದಿಲ್ಲಿಯ ಪಾನ್ ಅಂಗಡಿ ಮಾಲಿಕ ಮುಕೇಶ್ ತಿವಾರಿ ಹೇಳಿದರು.

ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದೊಂದಿಗೆ ಗುರುತಿಸಿಕೊಂಡಿರುವ ಧೈರ್ಯಶೀಲ ಪಾಟೀಲ್ ಅವರು ಹಂಚಿಕೊಂಡಿರುವ ಅಂಕಿಅಂಶಗಳಂತೆ 10 ರೂ.ನ ಪಾರ್ಲೆ-ಜಿ ಬಿಸ್ಕಿಟ್ ಪ್ಯಾಕ್ ಈಗ ಮೊದಲಿನ 140 ಗ್ರಾಮ್ಗಳ ಬದಲಾಗಿ 110 ಗ್ರಾಮ್ ತೂಗುತ್ತಿದೆ. ತೂಕ ಕಡಿತ ಎಂದಿನಿಂದ ಆರಂಭಗೊಂಡಿದೆ ಎನ್ನುವುದು ಸ್ಪಷ್ಟವಿಲ್ಲವಾದರೂ ಅದು ಇತ್ತೀಚಿನ,2021-22ನ ವಿತ್ತವರ್ಷದ ಕೊನೆಯ ತ್ರೈಮಾಸಿಕದಲ್ಲಿಯ ಬೆಳವಣಿಗೆಯಾಗಿದೆ ಎಂದು ಪಾಟೀಲ್ ಹೇಳಿದರು.
 ‌
ಗಾತ್ರದಲ್ಲಿ ಕುಗ್ಗುವಿಕೆ ಜನಪ್ರಿಯ ಸೋಪ್ ಬ್ರಾಂಡ್ಗಳನ್ನೂ ಬಿಟ್ಟಿಲ್ಲ. ವಿಮ್ ಬಾರ್ನ ತೂಕವೀಗ 65 ಗ್ರಾಮ್ ನಿಂದ 60 ಗ್ರಾಮ್ ಗೆ ಇಳಿದಿದೆ. 150 ಗ್ರಾಮ್ ಇದ್ದ ರಿನ್ ಬಾರ್ ಈಗ 140 ಗ್ರಾಮ್ ತೂಗುತ್ತಿದೆ. ಹೆಚ್ಚಿನ ಸಂದರ್ಭದಲ್ಲಿ ಗ್ರಾಹಕರ ಗಮನಕ್ಕೆ ಬರದಿರುವ ಈ ಸಣ್ಣ ಕಡಿತಗಳು ಈಗ ಮೊದಲಿನ ವೆಚ್ಚದಲ್ಲಿಯೇ ಹೆಚ್ಚು ಮೌಲ್ಯದ ಸರಕುಗಳ ಸಾಗಾಣಿಕೆಗೆ ಕಂಪನಿಗಳಿಗೆ ನೆರವಾಗುತ್ತಿವೆ.
 
ಬೆಲೆ ಕೊಂಚ ಹೆಚ್ಚಿದರೂ ಸರಕನ್ನು ಖರೀದಿಸಲು ಗ್ರಾಹಕರು ನಿರಾಕರಿಸುವ ಭಾರತದಂತಹ ಬೆಲೆ ಸಂವೇದನಾಶೀಲ ಮಾರುಕಟ್ಟೆಗಳಲ್ಲಿ ವೆಚ್ಚ ಕಡಿತವು ಬೆಲೆಗಳನ್ನು ಲಾಭದಾಯಕವಾಗಿ ಇಟ್ಟುಕೊಳ್ಳಲು ಕಂಪನಿಗಳಿಗೆ ಸುಲಭದ ಮಾರ್ಗವಾಗಿದೆ.
                      
ಸಣ್ಣ ಪ್ಯಾಕ್ಗಳಲ್ಲಿ ಗಾತ್ರ ಕಡಿತ ಸಾಮಾನ್ಯವಾಗಿ ಬೆಲೆ ಸೂಕ್ಷತೆಯು ಹೆಚ್ಚಾಗಿರುವ ಕಡಿಮೆ ಯೂನಿಟ್ ನ ಪ್ಯಾಕ್ ಗಳಲ್ಲಿ ಗಾತ್ರವನ್ನು ಕಡಿಮೆ ಮಾಡಲಾಗುತ್ತಿದೆ ಎನ್ನುತ್ತಾರೆ ಅರ್ನ್ಸ್ಟ್ ಆ್ಯಂಡ್ ಯಂಗ್ ನ ಪಾಲುದಾರ ಅಂಕುರ ಪಹ್ವಾ. ಸುಮಾರು 20 ರೂ.ನ ಪ್ಯಾಕ್ ಗಳ ಮೇಲೆ ಬೆಲೆ ಏರಿಕೆಯು ಸುಲಭ, ಆದರೆ ಅದಕ್ಕಿಂತ ಕಡಿಮೆ ಬೆಲೆಗಳ ಗ್ರಾಹಕ ಉತ್ಪನ್ನಗಳ ಪ್ಯಾಕ್ ಗಳಲ್ಲಿ ಪ್ರಮಾಣವನ್ನು ಕಡಿತಗೊಳಿಸುವುದು ಏಕೈಕ ಆಯ್ಕೆಯಾಗಿದೆ. ಎಲ್ಲ ಬೆಲೆ ಸಂವೇದನಾಶೀಲ ಉತ್ಪನ್ನಗಳಲ್ಲಿ ಉತ್ಪಾದನಾ ವೆಚ್ಚಗಳನ್ನು ತಗ್ಗಿಸಲು ಮತ್ತು ಬೆಲೆಗಳು ಸಮಂಜಸವಾಗಿರಲು ಗ್ರಾಮೇಜ್ ಕಡಿತದ ತಂತ್ರವನ್ನು ಬಳಸಲಾಗುತ್ತಿದೆ. ಆದರೆ ದೊಡ್ಡ ಪ್ರಮಾಣದಲ್ಲಿ ಕಡಿತವನ್ನು ಮಾಡಲು ಸಾಧ್ಯವಿಲ್ಲ, 50 ಗ್ರಾಂ.ತೂಕದ ಪ್ಯಾಕ್ ಅನ್ನು 40 ಗ್ರಾಮ್ ಗೆ ಇಳಿಸಬಹುದು,ಆದರೆ 25 ಗ್ರಾಮ್ ಗೆ ತಗ್ಗಿಸಲಾಗುವುದಿಲ್ಲ ಎಂದು ಪಹ್ವಾ ವಿವರಿಸಿದರು.

ಸಣ್ಣಪುಟ್ಟ ಬದಲಾವಣೆಗಳನ್ನು ಗ್ರಾಹಕರು ಗಮನಿಸುವುದಿಲ್ಲ ಮತ್ತು ಕಡಿಮೆ ಪ್ರಮಾಣಕ್ಕೆ ತಾವು ಹೆಚ್ಚಿನ ಬೆಲೆಯನ್ನು ತೆರುತ್ತಿದ್ದೇವೆ ಎನ್ನುವುದು ಗೊತ್ತಾಗದೆ ಖರೀದಿಯನ್ನು ಮುಂದುವರಿಸುತ್ತಾರೆ ಎನ್ನುವುದು ಕಂಪನಿಗಳ ನಂಬಿಕೆಯಾಗಿದೆ. ಆದರೆ ಇದು ಅನೈತಿಕವಲ್ಲ ಎಂದು ಪ್ರತಿಪಾದಿಸಿದ ಪಹ್ವಾ, ಗ್ರಾಹಕರು ಏನನ್ನಾದರೂ ಖರೀದಿಸುವಾಗ ಪೂರ್ಣ ಮಾಹಿತಿಗಳನ್ನು ಹೊಂದಿರಬೇಕು. ಹಣದುಬ್ಬರ ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಕಂಪನಿಗಳು ನಿರ್ದಿಷ್ಟ ಬೆಲೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ ಎಂದರು.

ಆದರೆ ಇನ್ನು ಮುಂದೆ ಕಂಪನಿಗಳು ಗ್ರಾಹಕರಿಗೆ ತಿಳಿಯದಂತೆ ಗ್ರಾಮೇಜ್ ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ. ಗ್ರಾಹಕ ವ್ಯವಹಾರಗಳ ಸಚಿವಾಲಯವು ಮಾರ್ಚ್ನಲ್ಲಿ ಹೊರಡಿಸಿರುವ ಅಧಿಸೂಚನೆಯು ಮುಂಬರುವ ಅಕ್ಟೋಬರ್ನಿಂದ ಪ್ರತಿ ಗ್ರಾಂ,ಪ್ರತಿ ಕೆಜಿ,ಪ್ರತಿ ಎಂಎಲ್ ಮತ್ತು ಪ್ರತಿ ಲೀ.ಗೆ ಬೆಲೆಗಳನ್ನು ಮುದ್ರಿಸುವುದನ್ನು ಕಂಪನಿಗಳಿಗೆ ಕಡ್ಡಾಯಗೊಳಿಸಿದೆ.
ತಮ್ಮ ಗ್ರಾಹಕ ಬುನಾದಿಯನ್ನು ಉಳಿಸಿಕೊಳ್ಳುವುದು ಮತ್ತು ಹೆಚ್ಚುತ್ತಿರುವ ವೆಚ್ಚಗಳನ್ನು ನಿಭಾಯಿಸುವುದು ಹಗ್ಗದ ಮೇಲಿನ ನಡಿಗೆಯಾಗಿದೆ ಎನ್ನುತ್ತಿವೆ ಕಂಪನಿಗಳು. ಈ ವಿಭಾಗದಲ್ಲಿ ಸಣ್ಣ ಬೆಲೆ ಏರಿಕೆಯೂ ಮಾರಾಟದ ಪ್ರಮಾಣದಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ. ಇದೇ ಕಾರಣದಿಂದ ಕಂಪನಿಗಳು ಬೆಲೆಗಳನ್ನು ಏರಿಸುವಾಗ ಹೆಚ್ಚಿನ ಎಚ್ಚರಿಕೆಯನ್ನು ವಹಿಸುತ್ತವೆ.

ಈ ಸಣ್ಣ ಪ್ಯಾಕ್ ಗಳು ಮಾರಾಟ ಪ್ರಮಾಣದಲ್ಲಿ ಪ್ರಮುಖ ಪಾಲನ್ನು ಹೊಂದಿವೆ. ಹಿಂದುಸ್ಥಾನ ಯುನಿಲಿವರ್ ನ ಶೇ.30ರಷ್ಟು ವ್ಯಾಪಾರವು ಈ ಸಣ್ಣ ಪ್ಯಾಕ್ಗಳಿಂದಲೇ ಬರುತ್ತಿದ್ದರೆ ಬ್ರಿಟಾನಿಯಾದ ಮಾರಾಟದಲ್ಲಿ ಶೇ.50-ಶೇ.55ರಷ್ಟು ಪಾಲನ್ನು ಸಣ್ಣ ಪ್ಯಾಕ್ ಗಳು ಹೊಂದಿವೆ.

ನೆಸ್ಲೆಯ ಮ್ಯಾಗಿ ನೂಡಲ್ಸ್ ನಂತಹ ಕೆಲವು ಉತ್ಪನ್ನಗಳು ಈ ಸೂತ್ರಕ್ಕೆ ಅಪವಾದವಾಗಿವೆ. ಇತ್ತೀಚಿನ ವರ್ಷಗಳಲ್ಲಿ ಮ್ಯಾಗಿಯ ಒಂದು ಪ್ಯಾಕೆಟ್ ಬೆಲೆ 10 ರೂ.ನಿಂದ 12 ರೂ.ಗೆ ಏರಿಕೆಯಾಗಿದ್ದರೆ,ಅದರ ತೂಕವು 100 ಗ್ರಾಮ್ ಗಳಿಂದ 70 ಗ್ರಾಮ್ ಗಳಿಗೆ ಇಳಿದಿದೆ.
ಎಫ್ಎಂಸಿಜಿ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಿಯೇ ಇಲ್ಲ ಎಂದಲ್ಲ. ಡಾಬರ್ ನಂತಹ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಗಳನ್ನು ಸುಮಾರು ಶೇ.5ರಷ್ಟು ಹೆಚ್ಚಿಸಿವೆ. ಆದರೆ ಪ್ಯಾಕೇಜ್ ಗಾತ್ರವನ್ನು ತಗ್ಗಿಸಲಾಗಿದೆಯೇ ಎನ್ನುವುದನ್ನು ಡಾಬರ್ ದೃಢಪಡಿಸಿಲ್ಲ, ಉತ್ಪಾದನಾ ವೆಚ್ಚಗಳನು ತಗ್ಗಿಸಲು ತಾನು ಕೆಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದಷ್ಟೇ ಅದು ಹೇಳಿದೆ.
                    
ತೂಕ ಇಳಿಕೆ ಹೇಗೆ ನೆರವಾಗುತ್ತದೆ?

ಪ್ಯಾಕ್ ಗಳ ತೂಕ ಕಡಿತವು ಸಾಗಾಣಿಕೆ ವೆಚ್ಚವನ್ನು ತಗ್ಗಿಸಲು ನೆರವಾಗುತ್ತದೆ. ಗಾತ್ರದಲ್ಲಿ ಸಣ್ಣ ಇಳಿಕೆಯು ಪಾರ್ಲೆ ಕಂಪನಿಗೆ ಸಾಗಾಣಿಕೆ ವೆಚ್ಚದಲ್ಲಿ ಭಾರೀ ಉಳಿತಾಯಕ್ಕೆ ನೆರವಾಗುತ್ತದೆ. ಈ ಹಿಂದೆ ಒಂದು ಪೆಟ್ಟಿಗೆಯಲ್ಲಿ 10 ರೂ.ಗಳ 60 ಪಾರ್ಲೆ-ಜಿ ಬಿಸ್ಕಿಟ್ಗಳ ಪ್ಯಾಕ್ಗಳು ಹಿಡಿಯುತ್ತಿದ್ದವು. ತೂಕವನ್ನು 30 ಗ್ರಾಮ್ಗಳಷ್ಟು ಕಡಿಮೆ ಮಾಡಿದ ಬಳಿಕ ಅದೇ ಪೆಟ್ಟಿಗೆಯಲ್ಲಿ 100 ಪ್ಯಾಕ್ಗಳು ಹಿಡಿಯುತ್ತಿವೆ. ಬೆಲೆ ಮಾತ್ರ ಅಂದಿಗೂ ಇಂದಿಗೂ 10 ರೂ.ಆಗಿದೆ.

ಕಂಪನಿಗಳು ಲಘು ಪ್ಯಾಕೇಜಿಂಗ್ ತಂತ್ರವನ್ನೂ ಅಳವಡಿಸಿಕೊಂಡಿವೆ. ಉತ್ಪನ್ನದ ಗುಣಮಟ್ಟದ ಮೇಲೆ ನೇರವಾಗಿ ಪರಿಣಾಮಗಳನ್ನು ಬೀರುವುದರಿಂದ ಕಂಪನಿಗಳು ಪ್ಯಾಕೇಜಿಂಗ್ನಲ್ಲಿ ಹೆಚ್ಚಿನ ಹಸ್ತಕ್ಷೇಪ ಮಾಡುವುದಿಲ್ಲ,ಅವು ಪುನರ್ಬಳಕೆಯ ಪ್ಯಾಕೇಜಿಂಗ್ ಬಳಸುತ್ತಿವೆ. ಕೋರ್ ಪ್ಯಾಕೇಜಿಂಗ್ ಅಥವಾ ಒಳಗಿನ ಪ್ಯಾಕೇಜಿಂಗ್ಗೆ ಕೈ ಹಚ್ಚದಿದ್ದರೂ ಹೊರಗಿನ ಪ್ಯಾಕೇಜ್ ಲಘು ಗುಣಮಟ್ಟದ್ದಾಗಿರುತ್ತೆ ಅಥವಾ ಮರುಬಳಕೆಯಾದ ಉತ್ಪನ್ನಗಳಿಂದ ಮಾಡಲ್ಪಟ್ಟಿರುತ್ತದೆ ಎಂದು ಪಹ್ವಾ ತಿಳಿಸಿದರು.
000000000000000000000000000000000000

Writer - ಶುಭಾಂಗಿ ಮಿಶ್ರಾ (theprint.in)

contributor

Editor - ಶುಭಾಂಗಿ ಮಿಶ್ರಾ (theprint.in)

contributor

Similar News