ಪಠ್ಯಪುಸ್ತಕ ʼಕೇಸರೀಕರಣʼ ಆರೋಪ: ಟ್ವಿಟರ್‌ ನಲ್ಲಿ #RejectRSSTextBooks ಟ್ರೆಂಡಿಂಗ್

Update: 2022-05-22 13:49 GMT

ಬೆಂಗಳೂರು: ಬಲಪಂಥೀಯ ಲೇಖಕ ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ʼಕೇಸರೀಕರಣʼವನ್ನು ಮಾಡಲಾಗಿದೆ, ಬ್ರಾಹ್ಮಣ್ಯವನ್ನು ತುರುಕಲಾಗಿದೆ ಮತ್ತು ಬ್ರಾಹ್ಮಣ ಲೇಖಕರನ್ನು, ಆರ್‌ಎಸ್‌ಎಸ್‌ ಅನ್ನು ವೈಭವೀಕರಿಸಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ #RejectRSSTextBooks #RejectBrahminTextBooks ಹ್ಯಾಷ್‌ಟ್ಯಾಗ್‌ ಗಳು ಟ್ರೆಂಡ್‌ ಆಗುತ್ತಿವೆ. 

ಬಿಜೆಪಿ ಸರ್ಕಾರವು ಶಿಕ್ಷಣವನ್ನು ಕೇಸರೀಕರಣ ಮಾಡುವ ಮೂಲಕ ಶಾಲಾ ಮಕ್ಕಳ ತಲೆಗೆ ಹಿಂದುತ್ವದ ಅಜೆಂಡಾವನ್ನು ತುರುಕುತ್ತಿದೆ. ವೈವಿಧ್ಯತೆಯನ್ನು ನಾಶಮಾಡಿ ಕೇವಲ ಬ್ರಾಹ್ಮಣ ಲೇಖಕರನ್ನು ವೈಭವೀಕರಿಸಿ ಅವರ ಲೇಖನಗಳನ್ನೇ ಪಠ್ಯವನ್ನಾಗಿ ರೂಪಿಸಿದೆ. ಸಮಿತಿಯಲ್ಲಿ ಬಹುಪಾಲು ಬ್ರಾಹ್ಮಣ ಸಮುದಾಯದವರೇ ಇದ್ದು, ಪಠ್ಯದಲ್ಲೂ ಬ್ರಾಹ್ಮಣ್ಯವನ್ನು ವಿಜೃಂಭಿಸುವ ಅಂಶಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಲಾಗಿದೆ. 

ಒಂಭತ್ತು ಜನ ಬ್ರಾಹ್ಮಣ ಲೇಖಕರ ಪಠ್ಯ ಸೇರಿಸಲಾಗಿದೆ. ಆರು ಮಂದಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದ ಲೇಖಕರ ಪಠ್ಯ ಕೈಬಿಡಲಾಗಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಈ ಕುರಿತು ಕರ್ನಾಟಕದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ರಾಷ್ಟ್ರಾದ್ಯಂತ ಈ ಚರ್ಚೆ ಗಮನ ಸೆಳೆದಿದೆ. ಜಾತಿ ನಿರ್ಮೂಲನಾ ಸುಧಾರಕರಾಗಿದ್ದ ನಾರಾಯಣ ಗುರು, ಬಸವಣ್ಣ, ಪೆರಿಯಾರ್‌ ಮೊದಲಾದವರ ಪಠ್ಯಗಳನ್ನು ಕೈ ಬಿಟ್ಟಿದ್ದಾರೆ ಎಂಬ ಆರೋಪ ಸದ್ಯ ಕೇಳಿ ಬಂದಿದ್ದು, ಭಗತ್‌ ಸಿಂಗ್‌ ಪಠ್ಯಕ್ಕೂ ಕತ್ತರಿ ಹಾಕಿ ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಗ್ಗಡೆವಾರ್‌ ಭಾಷಣವನ್ನು ಪಠ್ಯದಲ್ಲಿ ಸೇರಿಸಲಾಗಿದೆ. 

ಅಲ್ಲದೆ, ತಮ್ಮ ಭಾಷಣಗಳಿಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಪರೀತ ಟ್ರಾಲ್‌ ಗೆ ಒಳಗಾಗುತ್ತಿರುವ ಚಕ್ರವರ್ತಿ ಸೂಲಿಬೆಲೆಯ ಲೇಖನವನ್ನೂ ಪಠ್ಯದಲ್ಲಿ ಅಳವಡಿಸಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನಾಡಿನ ಹಲವು ಚಿಂತಕರು, ಶಿಕ್ಷಣ ತಜ್ಞರು ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿಯ ಅರ್ಹತೆಯನ್ನೇ ಪ್ರಶ್ನಿಸಿದ್ದು, ಸಮಿತಿಯ ನೇತೃತ್ವ ವಹಿಸಿರುವ ಚಕ್ರತೀರ್ಥರಿಗೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವಷ್ಟು ಶೈಕ್ಷಣಿಕ ಯೋಗ್ಯತೆ ಮತ್ತು ದಕ್ಷತೆ ಇಲ್ಲ ಎಂದು ಹೇಳಿದೆ. ರೋಹಿತ್‌ ಚಕ್ರತೀರ್ಥ ಶಿಕ್ಷಣ ತಜ್ಞವೇ ಅಲ್ಲ, ಅವರು ನೇತೃತ್ವದಲ್ಲಿ ಪರಿಷ್ಕರಣೆಗೊಂಡಿರುವ ಪುಸ್ತಕಗಳು ಮಕ್ಕಳಿಗೆ ಪಾಠ ಮಾಡಲು ಯೋಗ್ಯವೂ ಇಲ್ಲ ಎಂದು ಶಿಕ್ಷಕರ ನಡುವೆಯೂ ಚರ್ಚೆಗಳಾಗುತ್ತಿವೆ. ಸದ್ಯ, ಈ ಪಠ್ಯ ಪುಸ್ತಕಗಳನ್ನು ನಿರಾಕರಿಸಲು ಸಾಮಾಜಿಕ ಜಾಲಾತಾಣದಲ್ಲಿ ಅಭಿಯಾನವಾಗುತ್ತಿದ್ದು, ಪ್ರೊಫೆಸರ್‌ ಪುರುಷೋತ್ತಮ ಬಿಳಿಮಲೆ ಮೊದಲಾದ ಚಿಂತಕರೂ ಈ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. 

“ಕರ್ನಾಟಕಕ್ಕೆ ಆಧುನಿಕ ಶಿಕ್ಷಣವನ್ನು ತಂದುಕೊಟ್ಟವರು ಕ್ರಿಶ್ಚಿಯನ್ನರು. ಕರ್ನಾಟಕವನ್ನು ಜಾಗತಿಕ ಭೂಪಟಕ್ಕೆ ಸೇರಿಸಿದವರು ಮುಸ್ಲಿಮರು. ಕರ್ನಾಟಕದ ಮೂಲನಿವಾಸಿಗಳು ದಲಿತರು. ಪಠ್ಯಪುಸ್ತಕ ರಚನೆ ಮಾಡುವಾಗ ಸಮಿತಿಯಲ್ಲಿ ಇವರು ಇರಬೇಕಾದ್ದು ಅಗತ್ಯ. ಮಕ್ಕಳಿಗೆ ಜನಾಂಗ ದ್ವೇಷ ಕಲಿಸಬಾರದು” ಎಂದು ಪ್ರೊ. ಬಿಳಿಮಲೆ ಟ್ವೀಟ್‌ ಮಾಡಿದ್ದಾರೆ. 

“ಪಿ.ಲಂಕೇಶ್, ಅರವಿಂದ್ ಮಾಲಗತ್ತಿ, ಸಾರಾ ಅಬೂಬಕರ್, ಎಲ್.ಬಸವರಾಜು, ಕೆ.ನೀಲಾ ಮತ್ತು ಬಿಟಿ ಲಲಿತಾ ನಾಯಕ್ ಅವರಂತಹ ಧೀಮಂತ ಲೇಖಕರನ್ನು ಅವರು ಕೈಬಿಟ್ಟಿದ್ದಾರೆ. ಈ ಲೇಖಕರು ತಮ್ಮ ಕೃತಿಗಳಿಂದ ಸಮಾಜಕ್ಕೆ ಕೊಡುಗೆ ನೀಡಿದ್ದಲ್ಲದೆ ಹಲವರಲ್ಲಿ ಸ್ವಾಭಿಮಾನದ ಭಾವನೆಯನ್ನು ಮೂಡಿಸಿದ್ದಾರೆ.” ಎಂದು ಅಜಯ್‌ ರಾಜ್‌ ಎಂಬವರು ಟ್ವೀಟ್‌ ಮಾಡಿದ್ದಾರೆ. 

ಇನ್ನು ಕನ್ನಡ ಹಾಗೂ ಕನ್ನಡಿಗರನ್ನು ಅವಮಾನಿಸಿದ್ದಾರೆಂಬ ಆರೋಪವಿರುವ ರೋಹಿತ್‌ ಚಕ್ರತೀರ್ಥರ ವಿರುದ್ಧ ಕನ್ನಡ ಸಂಘಟನೆಗಳೂ ಈ ಅಭಿಮಾನದಲ್ಲಿ ಪಾಲ್ಗೊಂಡಿದೆ. “ನಾಡ ಧ್ವಜವನ್ನು ತನ್ನ ಹಾರಾಡುವ ಒಳಚೆಡ್ಡಿಗೆ ಹೋಲಿಸಿದ್ದ ರೋಹಿತ್ ಚಕ್ರತೀರ್ಥನನ್ನು ಪಠ್ಯಪುಸ್ತಕ ರಚನಾ ಸಮಿತಿಗೆ ಆಯ್ಕೆ ಮಾಡಿದ ಬಿಜೆಪಿ ಸರ್ಕಾರಕ್ಕೆ ಕನ್ನಡ ನಾಡ ಧ್ವಜದ ಬಗ್ಗೆ ಗೌರವ ಇದೆಯೇ ?” ಎಂದು ಎಂ ಆರ್‌ ಕೃಷ್ಣ ಎಂಬವರು ಪ್ರಶ್ನಿಸಿದ್ದಾರೆ. 

“ಬಸವಣ್ಣ ˌ ನಾರಾಯಣ ಗುರುˌ ಪೆರಿಯಾರˌ ಪುರೋಹಿತಶಾಹಿ ವಿರೋಧಿ ವಿವೇಕಾನಂದˌ ವೀರ ಭಗತ್ ಸಿಂಗ್ ರ ಜಾಗದಲ್ಲಿ ಮೊಘಲರ ಗುಲಾಮಿ ಸಂತತಿ ಮತ್ತು ಬ್ರಿಟೀಷರ ಗುಲಾಮರ ಪಾಠ ನಾವು ಓದಲಾರೆವು..” ಎಂದು ಚಂದ್ರಪ್ರಭಾ ಕಠಾರಿ ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News